ಕೊಡಗಿನ ರೈತರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುತ್ತಿರುವ “ನಾಡ ಪೆದ ಆಶಾ”

February 24, 2021

ಮಡಿಕೇರಿ ಫೆ.24 : ಅಂಗನವಾಡಿ ಕಾರ್ಯಕರ್ತೆಯೊಬ್ಬಳ ಬದುಕಿನ ಕುರಿತು ಚಿತ್ರಿಸಲಾಗುತ್ತಿರುವ ಕೊಡವ ಭಾಷಾ ಚಲನಚಿತ್ರ “ನಾಡ ಪೆದ ಆಶಾ” ದ ಚಿತ್ರೀಕರಣ ಭರದಿಂದ ಸಾಗಿದೆ. ಪ್ರಸ್ತುತ ಕೊಡಗಿನ ರೈತರು ಅನುಭವಿಸುತ್ತಿರುವ ಪ್ರಾಕೃತಿಕ ವಿಕೋಪ ಮತ್ತು ವನ್ಯಜೀವಿಗಳ ದಾಳಿಯ ಕುರಿತು ಚಿತ್ರದಲ್ಲಿ ಮನೋಜ್ಞವಾಗಿ ವಿವರಿಸಲಾಗಿದೆ ಎಂದು ಚಿತ್ರದ ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ತಿಳಿಸಿದ್ದಾರೆ.
ನಟ ಅಜ್ಜಿಕುಟ್ಟಿರ ಪೃಥ್ವಿ ಸುಬ್ಬಯ್ಯ ಅವರು ರೈತನಾಗಿ ಅಭಿನಯಿಸುತ್ತಿದ್ದು, ವನ್ಯಜೀವಿ ದಾಳಿ ತಡೆಗೆ ವೀರಯೋಧನಂತೆ ಅಬ್ಬರಿಸುವ ಪಾತ್ರದಲ್ಲಿ ಮಿಂಚಿದ್ದಾರೆ. ಗಡಿಯಲ್ಲಿ ದೇಶವನ್ನು ಕಾಯುವ ಯೋಧರಂತೆ ಹಸಿವನ್ನು ನೀಗಿಸುವ ಫಸಲನ್ನು ರಕ್ಷಿಸುವ ರೈತರು ಕೂಡ ದೇಶದೊಳಗಿನ ಯೋಧ ಎನ್ನುವುದನ್ನು ಚಿತ್ರದಲ್ಲಿ ಅರ್ಥೈಸಿಕೊಡಲಾಗಿದೆ ಎಂದು ಪ್ರಕಾಶ್ ಕಾರ್ಯಪ್ಪ ಚಿತ್ರೀಕರಣದ ಸಂದರ್ಭ ತಿಳಿಸಿದರು.
ಮೂರ್ನಾಡಿನ ಎಂ.ಬಾಡಗ ಗ್ರಾಮದ ನೆಲ್ಲಿಮಾನಿ ಹೋಂಸ್ಟೇಯಲ್ಲಿ ಚಿತ್ರೀಕರಣ ಸಾಗಿದ್ದು, ಫೆ.೨೫ ರ ನಂತರ ಮಡಿಕೇರಿಯಲ್ಲಿ ಚಿತ್ರೀಕರಣ ಮುಂದುವರೆಯಲಿದೆ. ಫೆ.೨೬ ರಂದು ಸಂಜೆ ಚಿತ್ರೀಕರಣ ಮುಗಿಯಲಿದೆ ಎನ್ನುವ ವಿಶ್ವಾಸವನ್ನು ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.
“VK3 PICTURES” ಸಂಸ್ಥೆಯ ಮುಖ್ಯಸ್ಥರು ಮತ್ತು ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಉತ್ತಯ್ಯ ಹಾಗೂ ಈರಮಂಡ ಪೊನ್ನಮ್ಮ ಉತ್ತಯ್ಯ ಅವರು ನಾಡ ಪೆದ ಆಶಾ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
“ನಾಡಪೆದ ಆಶಾ” ಹಿರಿಯ ಸಾಹಿತಿ ನಾಗೇಶ್ ಕಾಲೂರು ಅವರು ರಚಿಸಿರುವ ಕಾದಂಬರಿ ಆಧಾರಿತ ಚಿತ್ರವಾಗಿದೆ.
ನಾಯಕ ನಟನಾಗಿ ಬೊಳ್ಳಜಿರ ಬಿ.ಅಯ್ಯಪ್ಪ, ಚಿತ್ರದ ಪ್ರಧಾನ ಪಾತ್ರಧಾರಿಯಾಗಿ ರಂಗ ಕಲಾವಿದೆ ಅಡ್ಡಂಡ ಅನಿತಾ ಕಾರ್ಯಪ್ಪ, ಕಲಾವಿದರುಗಳಾದ ವಾಂಚಿರ ವಿಠಲ್ ನಾಣಯ್ಯ, ತಾತಂಡ ಪ್ರಭಾ ನಾಣಯ್ಯ, ಚೆರುವಲಂಡ ಸುಜುಲ ನಾಣಯ್ಯ, ನೆಲ್ಲಚಂಡ ರಿಷಿ ಪೂವಮ್ಮ, ತೇಲಪಂಡ ಪವನ್ ತಮ್ಮಯ್ಯ, ಕೊಟ್ಟುಕತ್ತಿರ ಆರ್ಯ ದೇವಯ್ಯ, ಬೊಳ್ಳಜಿರ ಯಮುನಾ ಅಯ್ಯಪ್ಪ, ಈರಮಂಡ ಕೇಸರಿ ಬೋಜಮ್ಮ, ವಿಜಯ್, ಹರಿಣಿ, ಕುಶಿ ಕಾವೇರಮ್ಮ ಸೇರಿದಂತೆ ಸುಮಾರು ೫೦ ಕ್ಕೂ ಹೆಚ್ಚು ನಟರು ನಾಡಪೆದ ಆಶಾ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಬೇತ್ರಿ, ಬಿ.ಶೆಟ್ಟಿಗೇರಿ, ಹೊದ್ದೂರು, ಮೂರ್ನಾಡು, ಸೂರ್ಲಬಿ, ಮುಕ್ಕೋಡ್ಲು ಮತ್ತಿತರ ಗ್ರಾಮಗಳಲ್ಲಿ ಕಳೆದ ೧೦ ದಿನಗಳಿಂದ ಚಿತ್ರೀಕರಣ ನಡೆದಿದೆ.
ಚಿತ್ರಕಥೆ ಮತ್ತು ಸಂಭಾಷಣೆ, ನಿರ್ದೇಶನ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ, ಸಂಗೀತ ವಿಠಲ್ ರಂಗಧೋಳ್, ಛಾಯಗ್ರಾಹಕರಾಗಿ ಪ್ರದೀಪ್ ಆರ್ಯನ್, ಸಾಹಿತ್ಯ ಆಪಾಡಂಡ ಜಗ್ಗ ಮೊಣ್ಣಪ್ಪ, ಕಾರ್ಯಕಾರಿ ನಿರ್ಮಾಪಕರಾಗಿ ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ. ಅಯ್ಯಪ್ಪ, ಸಹ ನಿರ್ದೇಶಕರಾಗಿ ನಾಗರಾಜು ನೀಲ್ ಹಾಗೂ ಇತಿಹಾಸ್ ಶಂಕರ್, ಸಂಕಲನ ಆನಂದ್ ಅನಿ, ವರ್ಣಸಂಸ್ಕರಣರಾಗಿ ನಿಖಿಲ್ ಕಾರ್ಯಪ್ಪ, vಜಿx ಸುಶ್ರುತ್ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ.

error: Content is protected !!