ವಿರಾಜಪೇಟೆಯಲ್ಲಿ ಗಮನ ಸೆಳೆದ ದೇಹದಾಢ್ರ್ಯ ಸ್ಫರ್ದೆ: ಮಿಸ್ಟರ್ ಕೂರ್ಗ್ ಪಟ್ಟ ಮುಡಿಗೇರಿಸಿಕೊಂಡ ಅಪ್ಪಣ್ಣ

February 25, 2021

ವಿರಾಜಪೇಟೆ:ಫೆ:23: ನಗರದಲ್ಲಿ ಪ್ರಪ್ರಥಮ ಬಾರಿಗೆ ಪುರುಷರ ದೇಹದಾಢ್ರ್ಯ ಸ್ಪರ್ಧೆ ಆಯೋಜನೆಗೊಂಡಿತ್ತು.

ನಗರದ ಜೈನರ ಬೀದಿಯ ರೀಶೇಪ್ ಫಿಟ್ನೇಸ್ ಜಿಮ್ ವತಿಯಿಂದ ತಾಲ್ಲೂಕು ಮೈದಾನದಲ್ಲಿ “ಮಿಸ್ಟರ್ ಕೂರ್ಗ್ 2021” ಪುರುಷರ ದೇಹದಾಢ್ರ್ಯ ಸ್ಪರ್ಧೆ ಆಯೋಜನೆಗೊಂಡಿತ್ತು.
ಕೊಡಗಿನ ವಿವಿಧ ಫಿಟ್ನೆಸ್ ಜಿಮ್‍ಗಳಿಂದ 20ಕ್ಕೂ ಹೆಚ್ಚು ಮಂದಿ ಪುರುಷ ಸ್ಪರ್ಧಿಗಳು ಸ್ಫರ್ದೆಯಲ್ಲಿ ಭಾಗವಹಿಸಿದ್ದರು. ಒಟ್ಟು ಮೂರು ವಿಭಾಗಗಳಲ್ಲಿ ಸ್ಫರ್ಧೆಗಳು ನಡೆದವು. ಪ್ರಥಮ ವಿಭಾಗ 50-55 ಕೆ.ಜಿ ಸ್ಫರ್ಧೆಯಲ್ಲಿ ಒಟ್ಟು 6 ಮಂದಿ, ದ್ವಿತೀಯ ವಿಭಾಗ 55-65 ಕೆ.ಜಿ ಸ್ಫರ್ಧೆಯಲ್ಲಿ ಒಟ್ಟು 7 ಮಂದಿ, ತೃತೀಯ ವಿಭಾಗ 65-75 ಕೆ.ಜಿ ಸ್ಫರ್ಧೆಯಲ್ಲಿ 08 ಮಂದಿ ಹಾಗೂ 75 ಕೆ.ಜಿ ಕ್ಕಿಂತ ಅಧಿಕಾ ಸ್ಫರ್ಧೆಯಲ್ಲಿ ಒಟ್ಟು 3 ಮಂದಿ ಸ್ಪರ್ಧಿಗಳು ಭಾಗವಹಿಸಿದ್ದರು.
50-55 ಕೆ.ಜಿ. ವಿಭಾಗದಲ್ಲಿ ಕಿಶೋರ್ ವಿರಾಜಪೇಟೆ ಪ್ರಥಮ, 55-65 ಕೆ.ಜಿ ವಿಭಾಗದಲ್ಲಿ ಅಪ್ಪಣ್ಣ ಕುಶಾಲನಗರ ಪ್ರಥಮ 65-75 ಕೆ.ಜಿ ವಿಭಾಗದಲ್ಲಿ ಫೈರೋಜ್ ಪ್ರಥಮ, ಮತ್ತು 75 ಕೆ.ಜಿ ಅಧಿಕ ವಿಭಾಗದಲ್ಲಿ ಮಹೇಶ್ ಪ್ರಥಮ ಸ್ಥಾನಗಳನ್ನು ಪಡೆದುಕೊಂಡರು, ಸಂತ ಅನ್ನಮ್ಮ ಶಾಲೆಯ ಕಲಾ ಶಿಕ್ಷಕ 55 ವರ್ಷದ ಕ್ಲಿಫರ್ಡ್ ಡೀಮೆಲ್ಲೊ ಅವರು 55 ಕೆ.ಜಿ. ವಿಭಾಗದಲ್ಲಿ ಐದನೆ ಸ್ಥಾನವನ್ನು ಪಡೆದುಕೊಂಡಿರುವುದು ವಿಶೇಷವಾಗಿತ್ತು. ಅದರಂತೆ 75 ಕೆ.ಜಿ ಅಧಿಕಾ ವಿಭಾಗದಲ್ಲಿ ತೆಲುಗರ ಬೀದಿಯ ವ್ಯಾಪಾರಿ ಟಿ.ಜಿ. ಶಶೀಧರ್ ಅವರು ತೃತೀಯ ಸ್ಥಾನ ಪಡೆದುಕೊಂಡರು.

ಮೈಸೂರು ಜಿಮ್ ಒನರ್ಸ್ ಅಸೋಶಿಯೇಷನ್ ನ ಅಧ್ಯಕ್ಷ ರವಿಕುಮಾರ್ ಎಂ, ಚೇತನ್ ಮತ್ತು ಮದನ್ ಅವರುಗಳು ಸ್ಪರ್ಧೆಯ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು.

ವಿವಿಧ ವಿಭಾಗಗಳಲ್ಲಿ ವಿಜೇತರಾದ ಸ್ಪರ್ಧಿಗಳು ಮಿಸ್ಟರ್ ಕೂರ್ಗ್ 2021 ರ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿವಿಧ ಆಯಮಗಳನ್ನು ಗುರುತಿಸಿ ಅಂಕಗಳನ್ನು ನೀಡಲಾಯಿತು. ಗರಿಷ್ಟ ಮಟ್ಟದ ಅಂಕಗಳನ್ನು ಪಡೆದು ಕುಶಾಲನಗರದ ಅಪ್ಪಣ್ಣ ಅವರು “ಮಿಸ್ಟರ್ ಕೂರ್ಗ್ 2021” ರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

ವೇದಿಕೆಯಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ರಾಜ್ಯ ಪ್ರಶಸ್ತಿ ವಿಜೇತ ರ್ಯಾಲಿ ಪಟು ಸಿ.ಕೆ.ಸೋಮಣ್ಣ, ಭರತನಾಟ್ಯದಲ್ಲಿ ಕರ್ನಾಟಕ ರಾಜ್ಯರತ್ನ ಪ್ರಶಸ್ತಿ ವಿಜೇತರಾದ ಎಂ. ಶ್ರೀದೇವಿ ಮತ್ತು ಅಂತರ್ ರಾಷ್ಟ್ರೀಯ ರಗ್ಬಿ ಪಟು ಮಾದಂಡ ತೀಮಯ್ಯ ಅವರನ್ನು ಸಂಸ್ಥೆ ಮತ್ತು ಪಂದ್ಯಾಟದ ಆಯೋಜಕರ ವತಿಯಿಂದ ಸನ್ಮಾನಿಸಲಾಯಿತು.
ಇಂಟೋಪಸ್ ಸಂಸ್ಥೆಯ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಪಂದ್ಯಾಟದಲ್ಲಿ ಆಯೋಜಕರು ಸೇರಿದಂತೆ ನಗರ, ಗ್ರಾಮ ಮತ್ತು ಜಿಲ್ಲೆಯ ನಾನಾ ಭಾಗಗಳಿಂದ ಅಧಿಕ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಹಾಜರಿದ್ದರು.

ವರದಿ: ಕೆ.ಕೆ.ಎಸ್ ವಿರಾಜಪೇಟೆ

error: Content is protected !!