ಅರೆಕಾಡು ನೇತಾಜಿ ಬಡಾವಣೆ ರಸ್ತೆ ಅಭಿವೃದ್ಧಿಗೆ ಚಾಲನೆ : ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳಿ : ಗ್ರಾ.ಪಂ ಪ್ರತಿನಿಧಿಗಳಿಗೆ ಎಂಎಲ್‍ಸಿ ವೀಣಾಅಚ್ಚಯ್ಯ ಕಿವಿಮಾತು

February 25, 2021

ಮಡಿಕೇರಿ ಫೆ.25 : ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರದಿಂದ ಬಿಡುಗಡೆಯಾಗುವ ಅನುದಾನ ಸದ್ಬಳಕೆಯಾಗುವಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಗ್ರಾಮ ಪಂಚಾಯಿತಿಗಳ ನೂತನ ಪ್ರತಿನಿಧಿಗಳ ಮೇಲಿದೆ ಎಂದು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ತಿಳಿಸಿದ್ದಾರೆ.
ಹೊಸ್ಕೇರಿ ಗ್ರಾ.ಪಂ ವ್ಯಾಪ್ತಿಯ ಅರೆಕಾಡು ಗ್ರಾಮದ ನೇತಾಜಿ ಬಡಾವಣೆಯಲ್ಲಿ ತಮ್ಮ ಅನುದಾನ ರೂ.5 ಲಕ್ಷ ಮೊತ್ತದ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸರ್ಕಾರದ ಅನುದಾನ ಬಿಡುಗಡೆಯಾದ ನಂತರ ಅದು ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗುತ್ತಿದೆಯೇ ಎನ್ನುವುದನ್ನು ಗ್ರಾ.ಪಂ ಪ್ರತಿನಿಧಿಗಳು ಗಮನಿಸಬೇಕು. ಹಾಗೆಯೇ ಕಾಮಗಾರಿಗಳು ನಡೆಯುವಾಗ ಕಳಪೆಯಾಗದಂತೆ ಸಾರ್ವಜನಿಕರು ನಿಗಾ ಇರಿಸಬೇಕೆಂದು ಕರೆ ನೀಡಿದರು. ಕೊಡಗಿನ ವಿವಿಧ ಗ್ರಾಮಗಳಿಗೆ ತಾವು ಭೇಟಿ ನೀಡಿದ ಸಂದರ್ಭ ಬಹುತೇಕ ರಸ್ತೆಗಳು ಹದಗೆಟ್ಟು ವಾಹನಗಳ ಸಂಚಾರವೇ ಸಾಧ್ಯವಿಲ್ಲದ ಪರಿಸ್ಥಿತಿಯನ್ನು ನೋಡಿದ್ದೇನೆ. ಸರ್ಕಾರ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಮೊದಲ ಆದ್ಯತೆ ನೀಡುವ ಅಗತ್ಯವಿದೆ ಎಂದು ವೀಣಾಅಚ್ಚಯ್ಯ ಹೇಳಿದರು.
ಜನರಿಂದ ಮತ ಪಡೆದು ಗೆದ್ದು ಬಂದ ಜನಪ್ರತಿನಿಧಿಗಳು ಯಾವುದೇ ಜಾತಿ, ಮತ, ಭೇದವಿಲ್ಲದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.
ಅರೆಕಾಡು ಗ್ರಾಮಸ್ಥರು ರಸ್ತೆ ಅಭಿವೃದ್ಧಿಗಾಗಿ ಒತ್ತಾಯಿಸಿ ಇತ್ತೀಚೆಗೆ ನಡೆದ ಗ್ರಾ.ಪಂ ಚುನಾವಣೆಯನ್ನು ಬಹಿಷ್ಕರಿಸುವ ನಿರ್ಧಾರಕ್ಕೂ ಬಂದಿದ್ದರು. ಅಂದು ಮನವೊಲಿಸಿದ ಪರಿಣಾಮ ಮತ ಚಲಾವಣೆಯಾಗಿತ್ತು, ಆದರೆ ಚುನಾವಣೆ ಕಳೆದ ನಂತರ ರಸ್ತೆ ಅಭಿವೃದ್ಧಿ ಬಗ್ಗೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಗ್ರಾಮಸ್ಥರು ತಮ್ಮ ಬಳಿ ಬಂದು ಮನವಿ ಮಾಡಿಕೊಂಡ ಹಿನ್ನೆಲೆ ರಸ್ತೆ ಕಾಮಗಾರಿಯ ಹಲವು ದಿನಗಳ ಬೇಡಿಕೆಯನ್ನು ಈಡೇರಿಸಿರುವುದಾಗಿ ವೀಣಾಅಚ್ಚಯ್ಯ ತಿಳಿಸಿದರು.
ಹೊಸ್ಕೇರಿ ಗ್ರಾ.ಪಂ ಸದಸ್ಯರುಗಳಾದ ಉಷಾ ತಂಗಮ್ಮ, ಯೂಸಫ್ ಆಲಿ, ಅರೆಕಾಡು ಕಾಂಗ್ರೆಸ್ ವಲಯಾಧ್ಯಕ್ಷ ಸಾರ ಡೆನ್ನಿಸ್, ಮರಗೋಡು ಬ್ಲಾಕ್ ಅಧ್ಯಕ್ಷ ಮೋಹನ್ ದಾಸ್, ಅಲ್ಪಸಂಖ್ಯಾತರ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಂ.ಬಾವ, ಅರೆಭಾಷೆ ಅಕಾಡೆಮಿ ಮಾಜಿ ಅಧ್ಯಕ್ಷ ಕೊಲ್ಯದ ಗಿರೀಶ್, ಪ್ರಮುಖರಾದ ವಿಕಾಸ್ ಅಚ್ಚಯ್ಯ, ಎಂಎಲ್‍ಸಿ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ, ಗ್ರಾಮದ ಪ್ರಮುಖರಾದ ನೆಲ್ಲಮಕ್ಕಡ ಪ್ರಕಾಶ್, ಅನ್ನಾರ್ಕಂಡ ಪೊನ್ನಪ್ಪ, ಬಲ್ಲಚಂಡ ಸುನೀಲ್, ತೊಂಡಿಯಂಡ ವಾಸು, ತೊಂಡಿಯಂಡ ಕಾವೇರಪ್ಪ, ತೊಂಡಿಯಂಡ ವೀಣಾ, ಬೆಳೆಗಾರ ಎಂ.ಕೆ.ಸಲೀಂ ಮತ್ತಿತರರು ಹಾಜರಿದ್ದರು.

error: Content is protected !!