ಧರ್ಮ ಆಧಾರಿತ ರಾಜಕಾರಣವನ್ನು ಬೆಂಬಲಿಸಬೇಡಿ : ಎಂಎಲ್ಸಿ ವೀಣಾಅಚ್ಚಯ್ಯ ಮನವಿ

ಮಡಿಕೇರಿ ಫೆ.25 : ಧರ್ಮ ಆಧಾರಿತ ರಾಜಕಾರಣ ಮಾಡುವವರಿಂದ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ನಿರೀಕ್ಷಿಸಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿರುವ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾಅಚ್ಚಯ್ಯ ಅವರು, ಜಿಲ್ಲೆಯ ಜನರು ಇನ್ನಾದರೂ ಎಚ್ಚೆತ್ತುಕೊಂಡು ಅಭಿವೃದ್ಧಿ ಪರ ಕಾಳಜಿ ಹೊಂದಿರುವವರನ್ನು ಆಯ್ಕೆ ಮಾಡಬೇಕೆಂದು ಮನವಿ ಮಾಡಿದ್ದಾರೆ.
ಅರೆಕಾಡು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರವಿದೆ, ಚುನಾವಣೆ ಸಂದರ್ಭ ಬಿಜೆಪಿ ಮಂದಿ ಜಾತಿ, ಧರ್ಮದ ಆಧಾರದಲ್ಲಿ ಮತ ಕೇಳುತ್ತಾರೆ. ಜನ ಕೂಡ ಧರ್ಮದ ಆಧಾರದಲ್ಲಿ ಮತ ಹಾಕುತ್ತಿದ್ದಾರೆ. ಇದೇ ಕಾರಣದಿಂದ ಅಭಿವೃದ್ಧಿ ಕಾರ್ಯಗಳು ಕುಂಟಿತವಾಗುತ್ತಿದೆ ಎಂದು ಆರೋಪಿಸಿದರು. ನಾವು ಕೂಡ ಹಿಂದೂಗಳೇ, ಇಲ್ಲಿಯ ಜನಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದೇನೆ, ಜಿಲ್ಲಾ ಪಂಚಾಯಿತಿ ಸದಸ್ಯೆಯಾಗಿ ಎರಡು ಬಾರಿ ಆಯ್ಕೆಯಾಗಿ ಜನಪರ ಕೆಲಸ ಮಾಡಿದ್ದೇನೆ. ನಾವು ಚುನಾವಣೆ ಸಂದರ್ಭ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಮನವಿ ಮಾಡಿದ್ದೇವೆಯೇ ಹೊರತು ಜಾತಿ, ಧರ್ಮದ ಆಧಾರದಲ್ಲಿ ಮತ ಕೇಳಿಲ್ಲ ಎಂದರು.
ಜನರು ಮೊದಲು ಈ ರೀತಿಯ ಧರ್ಮ ಆಧಾರಿತ ರಾಜಕಾರಣಕ್ಕೆ ಬೆಂಬಲ ನೀಡುವುದನ್ನು ನಿಲ್ಲಿಸಬೇಕು, ಬೆಂಬಲಿಸುವುದನ್ನು ಬಿಡುವಲ್ಲಿಯವರೆಗೆ ಅಭಿವೃದ್ಧಿ ಕಾರ್ಯಗಳ ಪ್ರಗತಿ ಕಷ್ಟಸಾಧ್ಯ ಎಂದು ವೀಣಾಅಚ್ಚಯ್ಯ ಹೇಳಿದರು.
ಕೆಲಸ ಮಾಡುವವರಿಗೆ, ಸಮಾಜದಲ್ಲಿ ಬದಲಾವಣೆ ತರುವವರಿಗೆ ಮತ ನೀಡಿ, ನಾವು ಅಭಿವೃದ್ಧಿ ಕೆಲಸ ಮಾಡುವಾಗ ಯಾವುದೇ ಜಾತಿ, ಧರ್ಮವನ್ನು ನೋಡಿ ಕೆಲಸ ಮಾಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.
