ಅನಿವಾಸಿ ಕನ್ನಡಿಗರ ಅಂತಾರಾಷ್ಟ್ರೀಯ ಕಥಾ ಸ್ಪರ್ಧೆಯಲ್ಲಿ ಕನಕರಾಜ್ ಪ್ರಥಮ

ಮಡಿಕೇರಿ ಫೆ.25 : ಯು.ಏ.ಇ.ಯ ಧ್ವನಿ ಪ್ರತಿಷ್ಠಾನದ ಮೂವತ್ತೈದನೇ ವಾರ್ಷಿಕೋತ್ಸವದ ಸಮಾರೋಪದ ಅಂಗವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅನಿವಾಸಿ ಕಥಾ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾದ ಕನಕರಾಜ್ ಬಾಲಸುಬ್ರಮಣ್ಯಂ ಅವರು ರಚಿಸಿರುವ ‘ಆಕಾಶ ಜಿಂಕೆ’ ಕಥೆ ಪ್ರಥಮ ಬಹುಮಾನಕ್ಕೆ ಪಾತ್ರವಾಗಿದೆ.
ಕಥಾ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ – ಡಾ. ಪ್ರೇಮಲತ ಬಿ, ಇಂಗ್ಲಂಡ್ (ಕಥೆ: ತರ್ಕ) ಮತ್ತು ಇರ್ಶಾದ್ ಮೂಡುಬಿದಿರೆ, ದುಬಾಯಿ,( ಕಥೆ: ಅನಾಥ), ತೃತೀಯ/ಸಮಾಧಾನಕರ ಬಹುಮಾನ- ಶ್ರೀಮತಿ ರಜನಿ ಭಟ್, ಅಬುದಾಬಿ, (ಕಥೆ: ತುಕ್ಕು ಹಿಡಿದ ಎಟಿಯಂ), ಡಾ. ಸವಿತಾ ನಟರಾಜ(ಬಸಾಪುರ), ಕುವೈಟ್(ಕಥೆ: ಮರಳುನಾಡಿನಲ್ಲೊಂದು ಮನೆಯ ಮಾಡಿ) ಮತ್ತು ಶ್ರೀಮತಿ ಯಶೋಧಾ ಭಟ್. ದುಬಾಯಿ, (ಕಥೆ: ಸುಭದ್ರಾ).
ಕಥಾ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದವರಿಗೆ ಬಹುಮಾನವಾಗಿ 10ಸಾವಿರ ರೂ. ಮತ್ತು ಪ್ರಶಸ್ತಿ ಫಲಕ, ದ್ವಿತೀಯ 5ಸಾವಿರ ರೂ. ಮತ್ತು ಸಮಾಧಾನಕರ ಬಹಮಾನವಾಗಿ 1,500ರೂ. ನಗದು ಬಹುಮಾನವನ್ನು ನೀಡಲಾಗುವುದು.
ನಾಡಿನ ಸುಪ್ರಸಿದ್ಧ ಸಾಹಿತಿಗಳಾದ ವೈದೇಹಿ, ಕುಂ. ವೀರಭದ್ರಪ್ಪ, ಚಿಂತಾಮಣಿ ಕೊಡ್ಲೆಕೆರೆ ಅವರು ತೀರ್ಪುಗಾರರಾಗಿ ಸ್ಪರ್ಧೆಯಲ್ಲಿ ಸಹಕರಿಸಿದ್ದರು. ಸ್ಪರ್ಧೆಯಲ್ಲಿ ಸುಮಾರು ನೂರೈವತ್ತಕ್ಕೂ ಮಿಕ್ಕಿ ಕಥೆಗಾರರು ಭಾಗವಹಿಸಿದ್ದು ಭಾಗವಹಿಸಿದ ಎಲ್ಲರನ್ನೂ ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ಅಭಿನಂದಿಸಿದ್ದಾರೆ.ಈ ಸ್ಪರ್ಧೆಯಲ್ಲಿ ತೀರ್ಪುಗಾರರು ಆಯ್ಕೆಮಾಡಿದ ಕಥೆಗಳು ಹಾಗೂ ಅಹ್ವಾನಿತ ಅನಿವಾಸಿ ಕಥೆಗಾರರ ಕಥೆಗಳ ಕಥಾಸಂಕಲನವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್ ರಾವ್ ಪಯ್ಯಾರ್ ತಿಳಿಸಿದ್ದಾರೆ.

