ಕೊಡಗಿನ ದೇವಾಲಯಗಳಿಗೆ ಬರುವವರು ಕೋವಿಡ್ ನಿಯಮ ಕಡ್ಡಾಯವಾಗಿ ಪಾಲಿಸಿ : ಜಿಲ್ಲಾಡಳಿತ ಮನವಿ

February 25, 2021

ಮಡಿಕೇರಿ ಫೆ.25 : ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮಗಳನ್ನು  ಕೈಗೊಳ್ಳಲಾಗಿದೆ. ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ರಾಜ್ಯದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ಹೆಚ್ಚುತ್ತಿದೆ.ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಎಲ್ಲಾ ಧಾರ್ಮಿಕ ಸ್ಥಳ / ಪ್ರಾರ್ಥನಾ ಮಂದಿರಗಳಲ್ಲಿ ಕೈಗೊಳ್ಳಬೇಕಾದ ಕೋವಿಡ್-19 ಮುಂಜಾಗ್ರತಾ ಕ್ರಮಗಳ ಬಗ್ಗೆ ನಿರ್ದೇಶನ ಇರುತ್ತದೆ. ಪ್ರಸ್ತುತ, ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ನೆರೆಯ ರಾಜ್ಯ / ಜಿಲ್ಲೆಯಲ್ಲಿ ಕೋವಿಡ್ ಸೋಂಕಿತ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಏರುತ್ತಿರುವುದನ್ನು ಗಮನಿಸಲಾಗಿದೆ. ಈ ಹಂತದಲ್ಲಿ ಕೊಡಗು ಜಿಲ್ಲೆಯಲ್ಲಿ ನೆರೆಯ ರಾಜ್ಯ / ಜಿಲ್ಲೆಗಳಿಂದ ಸಾರ್ವಜನಿಕರು ಅಥವಾ ಭಕ್ತಾದಿಗಳು ಆಗಮಿಸುವಂತಹ ಕಾರ್ಯಕ್ರಮಗಳು ನಡೆಸಿದಲ್ಲಿ, ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಸಾವಿರಾರು ಸಂಖ್ಯೆಯಲ್ಲಿ ಒಗ್ಗೂಡಿದಲ್ಲಿ, ಕೋವಿಡ್-19 ಸೋಂಕು ಈ ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುವ ಸಾಧ್ಯತೆ ಬಹಳಷ್ಟು ಇರುತ್ತದೆ. ಕೊಡಗು ಜಿಲ್ಲೆಯಲ್ಲಿ ಕೋವಿಡ್-19 ಹರಡಂತೆ ನಿಯಂತ್ರಿಸುವ ಬಗ್ಗೆ ಮುಂಜಾಗ್ರತಾ ಕ್ರಮವಾಗಿ ಕೊಡಗು ಜಿಲ್ಲೆಗೆ ಹೊಂದಿಕೊಂಡಿರುವ ಕೇರಳ ರಾಜ್ಯದಿಂದ ಆಗಮಿಸುವವರಿಗಾಗಿ ಮಾರ್ಗಗಳನ್ನು ನಿಗಧಿಪಡಿಸಿದ್ದು, ಈ ಮಾರ್ಗದಲ್ಲಿನ ಚೆಕ್‍ಪೋಸ್ಟ್‍ಗೆ ನಿಯೋಜಿಸಲಾಗಿರುವ ಸಿಬ್ಬಂದಿಗಳು ಕೇರಳ ರಾಜ್ಯದಿಂದ ಆಗಮಿಸುವವರು ಕಡ್ಡಾಯವಾಗಿ 72 ಗಂಟೆಗಳ ಪಡೆದಿರುವ RTP-CR  ನೆಗೆಟಿವ್ ವರದಿ ಹೊಂದಿರುವುದನ್ನು ಖಚಿತಪಡಿಸಿಕೊಂಡ ನಂತರವೇ ಸಂಚಾರಕ್ಕೆ ಅವಕಾಶ ನೀಡಲಾಗಿದೆ.  ಆದ್ದರಿಂದ, ಸಾರ್ವಜನಿಕ ಹಿತಾಸಕ್ತಿಯಿಂದ ದಂಡಪ್ರಕ್ರಿಯಾ ಸಂಹಿತೆ 1973ರ ಕಲಂ 144 ರಡಿ ಹಾಗೂ ಡಿಸಾಸ್ಟರ್ ಮ್ಯಾನೇಜ್‍ಮೆಂಟ್ ಆಕ್ಟ್-2005 ರಡಿ ಯಲ್ಲಿ ಪ್ರದತ್ತವಾದ ಅಧಿಕಾರದಂತೆ ಜಿಲ್ಲಾಧಿಕಾರಿ ಅವರು ಆದೇಶ ಹೊರಡಿಸಿದ್ದಾರೆ.   ಫೆಬ್ರವರಿ 26 ರಿಂದ ಮಾರ್ಚ್ 05 ವರೆಗೆ ಮಡಿಕೇರಿ ತಾಲ್ಲೂಕು, ನಾಪೋಕ್ಲು ಹೋಬಳಿಯ ಎಮ್ಮೆಮಾಡು ಉರೂಸ್ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ನಿರ್ಬಂಧಿಸಿದೆ. ಆದರೆ, ಆಡಳಿತ ಮಂಡಳಿ ವತಿಯಿಂದ ನಡೆಸುವ ದೈನಂದಿನ ಧಾರ್ಮಿಕ ಕಾರ್ಯಕ್ರಮ, ಪ್ರಾರ್ಥನೆ ಇತ್ಯಾದಿಗಳನ್ನು ಸರ್ಕಾರದ ಮಾರ್ಗಸೂಚಿಯಂತೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಂಡು, ಸ್ಯಾನಿಟೈಸರ್ ಬಳಕೆ ಮಾಡುವುದು ಮತ್ತಿತರ ಕ್ರಮಗಳನ್ನು ಕೈಗೊಂಡು ನಡೆಸಲು ಅಡ್ಡಿ ಇರುವುದಿಲ್ಲ. ಈ ಆದೇಶದ ಉಲ್ಲಂಘನೆಯು ಭಾರತ ದಂಡ ಸಂಹಿತೆ ಕಲಂ 188ರಡಿ ಮತ್ತು ವಿವಿಧ ಕಾಯ್ದೆಗಳಡಿ ದಂಡನೀಯವಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದ್ದಾರೆ.

error: Content is protected !!