ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷರಿಂದ ಗ್ರಾಮ ಸಂಚಾರ : ಜನರ ಸಮಸ್ಯೆಗಳಿಗೆ ಸ್ಪಂದನೆ

February 25, 2021

ಕುಶಾಲನಗರ ಫೆ.25 : ನೂತನವನಾಗಿ ಅಧಿಕಾರ ವಹಿಸಿಕೊಂಡ ಕೂಡುಮಂಗಳೂರು ಗ್ರಾ.ಪಂ ಅಧ್ಯಕ್ಷೆ ಇಂದಿರಾ ರಮೇಶ್ ಅವರು, ಬಸವೇಶ್ವರ ಬಡಾವಣೆ ಹಾಗೂ ಕೂಡ್ಲೂರು ಗ್ರಾಮಕ್ಕೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿದರು.
ಕೆಲವು ಲೇಔಟ್ ಗಳಲ್ಲಿ ನಿಯಮ ಉಲ್ಲಂಘನೆಯಾಗಿರುವ ಬಗ್ಗೆ ಪರಿಶೀಲಿಸಿದ ಅಧ್ಯಕ್ಷರು, ಸರ್ಕಾರದ ನಿಯಮಾವಳಿಗೆ ವಿರುದ್ಧವಾಗಿ ನಡೆದುಕೊಂಡರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಸರ್ಕಾರಿ ಜಾಗ ಒತ್ತುವರಿಯ ಬಗ್ಗೆಯೂ ಅಸಮಾಧಾನ ವ್ಯಕ್ತಪಡಿಸಿದರು.
ಬಸವೇಶ್ವರ ಬಡಾವಣೆಯ ಸಮುದಾಯ ಭವನಕ್ಕೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗುವುದೆಂದು ಭರವಸೆ ನೀಡಿದರು.
ಈ ಸಂದರ್ಭ ಮಾತನಾಡಿದ ಸದಸ್ಯ ಕೆ.ಬಿ.ಶಂಶುದ್ದೀನ್ ಅಪಾಯವನ್ನು ಆಹ್ವಾನಿಸುತ್ತಿರುವ ಕೆಲವು ಮರಗಳನ್ನು ತೆರವುಗೊಳಿಸಬೇಕೆಂದು ಪಿಡಿಓ ಸಂತೋಷ್ ಅವರಿಗೆ ತಿಳಿಸಿದರು.
ಕೂಡುಮಂಗಳೂರು ವೀರಭೂಮಿಯಲ್ಲಿ ಚರಂಡಿಯಿಲ್ಲದೆ ಸಮಸ್ಯೆ ಎದುರಾಗಿರುವ ಬಗ್ಗೆ ಸ್ಥಳೀಯರು ಅಧ್ಯಕ್ಷರ ಗಮನ ಸೆಳೆದರು. ಗಡಿಭಾಗವಾಗಿರುವುದರಿಂದ ಪಕ್ಷದ ಮುಳ್ಳುಸೋಗೆ ಗ್ರಾ.ಪಂ ಆಡಳಿತ ಮಂಡಳಿಯ ಸಹಕಾರದೊಂದಿಗೆ, ಆದಷ್ಟು ಶೀಘ್ರ ಸಮಸ್ಯೆಯನ್ನು ಬಗೆ ಹರಿಸುವುದಾಗಿ ಇಂದಿರಾ ರಮೇಶ್ ಭರವಸೆ ನೀಡಿದರು.
ಗ್ರಾ.ಪಂ ಉಪಾಧ್ಯಕ್ಷ ಭಾಸ್ಕರ್ ನಾಯಕ್, ಹಿರಿಯ ಸದಸ್ಯ ಬೋಗಪ್ಪ, ದಿನೇಶ್ ಮತ್ತಿತರರು ಹಾಜರಿದ್ದರು.

error: Content is protected !!