ದೇಚೂರು ರಸ್ತೆ ದುರಸ್ತಿಗೆ ಒತ್ತಾಯಿಸಿ ಪೌರಾಯುಕ್ತರಿಗೆ ಮನವಿ : ಪ್ರತಿಭಟನೆಯ ಎಚ್ಚರಿಕೆ ನೀಡಿದ ನಿವಾಸಿಗಳು

February 25, 2021

ಮಡಿಕೇರಿ ಫೆ.25 : ಸಾರ್ವಜನಿಕರ ಒತ್ತಾಯದ ಹಿನ್ನೆಲೆಯಲ್ಲಿ ಮಡಿಕೇರಿ ನಗರದ ಬಹುತೇಕ ರಸ್ತೆಗಳು ಡಾಂಬರೀಕರಣಗೊಂಡಿದೆ, ಆದರೆ ಮೂರು ವಾರ್ಡ್‍ಗಳನ್ನು ಒಳಗೊಂಡಿರುವ ದೇಚೂರು ರಸ್ತೆಯನ್ನು ನಗರಸಭೆ ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎಂದು ಆರೋಪಿಸಿ ದೇಚೂರು ನಿವಾಸಿಗಳು ನಗರಸಭಾ ಪೌರಾಯುಕ್ತ ರಾಂದಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಜೂನಿಯರ್ ಕಾಲೇಜು ರಸ್ತೆಯಿಂದ ದೇಚೂರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಮತ್ತು ಅಶ್ವಥಕಟ್ಟೆ ಎದುರಿನ ರಸ್ತೆ ಸಂಪೂರ್ಣವಾಗಿ ಹೊಂಡ ಗುಂಡಿಗಳಿಂದ ಕೂಡಿದ್ದು, ವಾಹನಗಳು ಸಂಚರಿಸಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಚೂರಿನಿಂದ ಮೈಸೂರು ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಡಾಂಬರೀಕರಣ ಮಾಡಲಾಗಿದೆ. ಆದರೆ ಪಕ್ಕದಲ್ಲೇ ಇರುವ ರಸ್ತೆಗಳನ್ನು ನಿರ್ಲಕ್ಷಿಸಲಾಗಿದೆ. ತುರ್ತು ಪರಿಸ್ಥಿತಿಗಳಲ್ಲಿ ಆಟೋರಿಕ್ಷಾಗಳು ಕೂಡ ಬಾರದ ಪರಿಸ್ಥಿತಿ ಇದೆ. ಆದ್ದರಿಂದ ತಕ್ಷಣ ದೇಚೂರಿನ ಹದಗೆಟ್ಟ ರಸ್ತೆಗಳನ್ನು ಡಾಂಬರೀಕರಣಗೊಳಿಸಬೇಕು. ಮುಂದಿನ ಒಂದು ವಾರದೊಳಗೆ ಕಾಮಗಾರಿ ಆರಂಭಗೊಳ್ಳದಿದ್ದಲ್ಲಿ ನಗರಸಭೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ನಿವಾಸಿಗಳು ಎಚ್ಚರಿಕೆ ನೀಡಿದರು.

error: Content is protected !!