ಫೆ.28 ರಂದು ಮಡಿಕೇರಿಯಲ್ಲಿ ‘ರಾಷ್ಟ್ರೀಯ ನೃತ್ಯೋತ್ಸವ’

ಮಡಿಕೇರಿ ಫೆ.26 : ಹಾಸನ ಜಿಲ್ಲಾ ಚನ್ನರಾಯಪಟ್ಟಣದ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿ(ಎನ್ಸಿಡಿಎ) ವತಿಯಿಂದ 37ನೇ ‘ರಾಷ್ಟ್ರೀಯ ನೃತ್ಯೋತ್ಸವ’ ಫೆ.28 ರಂದು ಮಡಿಕೇರಿಯಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅಕಾಡೆಮಿಯ ಗೌರವ ಕಾರ್ಯದರ್ಶಿಗಳು ಹಾಗೂ 1103ಕ್ಕೂ ಏಕ ವ್ಯಕ್ತಿ ಭರತನಾಟ್ಯ ಕಾರ್ಯಕ್ರಮ ನೀಡುವ ಮೂಲಕ ಗಿನ್ನಿಸ್ ದಾಖಲೆ ಮಾಡಿರುವ ಡಾ. ಸ್ವಾತಿ ಪಿ.ಭಾರದ್ವಾಜ್, ಅಕಾಡೆಮಿ ಇಪ್ಪತ್ತು ಸಾವಿರಕ್ಕೂ ಹೆಚ್ಚಿನ ಸದಸ್ಯರನ್ನು ಹೊಂದಿದ್ದು, ಶಾಸ್ತ್ರೀಯ ನೃತ್ಯ ಪ್ರಕಾರಗಳ ಬಗ್ಗೆ ತರಬೇತಿಯನ್ನು ನೀಡಿಕೊಂಡು ಬರುತ್ತಿದೆ. ನೃತ್ಯ ಕಾರ್ಯಕ್ರಮಗಳು ಕೇವಲ ನಗರ ಪ್ರದೇಶಗಳಿಗಷ್ಟೇ ಸೀಮಿತವಾಗಬಾರದೆನ್ನುವ ಚಿಂತನೆಗಳಡಿ ಈ ಬಾರಿ ರಾಷ್ಟ್ರೀಯ ನೃತ್ಯೋತ್ಸವವನ್ನು ಮಡಿಕೇರಿಯಲ್ಲಿ ಆಯೋಜಿಸುತ್ತಿರುವುದಾಗಿ ತಿಳಿಸಿದರು.
ನಗರದ ಭಾರತೀಯ ವಿದ್ಯಾಭವನದಲ್ಲಿ ಫೆ.28 ರಂದು ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ನೃತ್ಯೋತ್ಸವ ನಡೆಯಲಿದ್ದು, 70 ಕಲಾವಿದರು ಎಂಟು ವಿವಿಧ ಶಾಸ್ತ್ರೀಯ ನೃತ್ಯ ಪ್ರಕಾರಗಳನ್ನು ಪ್ರದರ್ಶಿಸಲಿದ್ದಾರೆ. ರಾಜ್ಯ ಸೇರಿದಂತೆ ನೆರೆಯ ಚೆನ್ನೈ, ಆಂಧ್ರದ ಕಲಾವಿದರು ಇದರಲ್ಲಿ ಪಾಲ್ಗೊಂಡು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ. ನೃತ್ಯೋತ್ಸವದಲ್ಲಿ ಪಾಲ್ಗೊಳ್ಳುವ ಕಲಾವಿದರ ನೋಂದಣಿ ಎರಡು ತಿಂಗಳ ಹಿಂದೆಯೇ ಆರಂಭಗೊಂಡು ಪೂರ್ಣಗೊಂಡಿದೆ. ನಾಲ್ಕೈದು ವರ್ಷದ ಮಕ್ಕಳಿಂದ 50 ವರ್ಷದ ಹಿರಿಯ ಕಲಾವಿದರು ನೃತ್ಯ ಪ್ರದರ್ಶನ ನೀಡಲಿದ್ದಾರೆಂದು ಮಾಹಿತಿ ಒದಗಿಸಿ, ಪಾಲ್ಗೊಂಡ ಕಲಾವಿದರಿಗೆ ಪ್ರಶಸ್ತಿ ಪತ್ರ ಮತ್ತು ಸ್ಮರಣಿಕೆಯನ್ನು ನೀಡಲಾಗುತ್ತದೆಂದು ಮಾಹಿತಿ ಒದಗಿಸಿದರು.
ರಾಷ್ಟ್ರೀಯ ನೃತ್ಯೋತ್ಸವವನ್ನು ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ ಅವರು ಉದ್ಘಾಟಿಸಲಿದ್ದು, ಕಿಗ್ಗಟ್ಟ್ನಾಡು ಹಿರಿಯ ನಾಗರಿಕರ ವೇದಿಕೆಯ ಸ್ಥಾಪಕ ಕಾರ್ಯದರ್ಶಿ ಜಿಮ್ಮಿ ಅಣ್ಣಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಕ್ತಿ ದಿನಪತ್ರಿಕೆಯ ಪ್ರಧಾನ ಸಂಪಾದಕ ಜಿ. ರಾಜೇಂದ್ರ, ಆಕಾಶವಾಣಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ, ಅಕಾಡೆಮಿಯ ಕಾನೂನು ಸಲಹೆಗಾರರಾದ ಡಾ.ವಿ. ಮಂಜುನಾಥ್, ಹಾಸನ ಆರ್ಟಿಒ ಜಯಂತ್, ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯ ಬಿ.ಎನ್.ವೆಂಕಟೇಶ್ ಮೂರ್ತಿ, ಕಲಾವಿದ ರವೀಂದ್ರ ಪಾಲ್ಗೊಳ್ಳಲಿದ್ದಾರೆಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಾಷ್ಟ್ರೀಯ ಶಾಸ್ತ್ರೀಯ ನೃತ್ಯ ಅಕಾಡೆಮಿಯ ಅಧ್ಯಕ್ಷರಾದ ಕೆ.ಆರ್. ಅನಿತಾ, ಕೊಡಗು ಘಟಕದ ಅಧ್ಯಕ್ಷರಾದ ಬಿ.ಎ. ಪ್ರೇಕ್ಷಾ, ಎನ್ಸಿಡಿಎ ಸಂಚಾಲಕರಾದ ಎಂ.ಕೆ.ಪ್ರಕಾಶ್, ಸ್ವಾಗತ ಸಮಿತಿ ಅಧ್ಯಕ್ಷರಾದ ಎನ್.ಸಿ. ಅಶೋಕ್ ಭಟ್ ಹಾಗೂ ವಿಷ್ಣು ಉಪಸ್ಥಿತರಿದ್ದರು.
