ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿರುವ ಕಾವೇರಿ ನಿಸರ್ಗಧಾಮ

February 26, 2021

ಕಾವೇರಿ ನಿಸರ್ಗಧಾಮವು ಜೀವನದಿ ಕಾವೇರಿ ಸೃಷ್ಟಿಸಿರುವ ದ್ವೀಪಗಳಲ್ಲೊಂದಾಗಿದೆ. ತನ್ನದೇ ಆದಂತಹ ವೈಶಿಷ್ಟ್ಯತೆ ಹಾಗೂ ಮುಖ್ಯರಸ್ತೆಗೆ ಸಮೀಪದಲ್ಲಿಯೇ ಇರುವುದರಿಂದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ. ಹಾಗಾಗಿ ವರ್ಷದ ಎಲ್ಲಾ ದಿನಗಳಲ್ಲಿಯೂ ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಲೇ ಇರುತ್ತಾರೆ.

ಕುಶಾಲನಗರದಿಂದ ಮಡಿಕೇರಿ ಕಡೆಗಿನ ಮುಖ್ಯ ರಸ್ತೆಯಲ್ಲಿ ಸುಮಾರು ಒಂದೂವರೆ ಕಿ.ಮೀ. ಸಾಗಿದರೆ ರಸ್ತೆಯ ಎಡಭಾಗದಲ್ಲಿಯೇ ನಿಸರ್ಗಧಾಮದ ಪ್ರವೇಶ ದ್ವಾರ ಕಾಣಸಿಗುತ್ತದೆ. 1989ರಲ್ಲಿ ನಿರ್ಮಿಸಲ್ಪಟ್ಟ ಕಾವೇರಿ ನಿಸರ್ಗಧಾಮ ಅಲ್ಲಿಂದ ಇಲ್ಲಿಯವರೆಗೆ ದೇಶ, ವಿದೇಶಗಳ ಲಕ್ಷಾಂತರ ಪ್ರವಾಸಿಗರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ. ನಿಸರ್ಗಧಾಮದ ಪ್ರವೇಶ ದ್ವಾರದ ಮೂಲಕ ತೂಗು ಸೇತುವೆಯ ಮೇಲೆ ಹೆಜ್ಜೆ ಹಾಕುತ್ತಾ ಮುನ್ನಡೆದರೆ ನಿಸರ್ಗದ ಕೌತುಕಮಯ ದೃಶ್ಯಗಳು ಕಣ್ಮುಂದೆ ಬಂದು ನಿಲ್ಲುತ್ತದೆ.

ತಳುಕಿ ಬಳುಕಿ ಜುಳು ಜುಳು ಎನ್ನುತ್ತಾ ಹರಿಯುವ ಕಾವೇರಿ ನದಿ… ಬೀಸುವ ತಂಗಾಳಿ… ಪ್ರಕೃತಿಯ ಸೋಜಿಗ ಮೈಪುಳಕಗೊಳಿಸುತ್ತದೆ. ಇಲ್ಲಿ ಮಾರ್ಗಸೂಚಿ ಫಲಕಗಳಿದ್ದು, ನಿಸರ್ಗಧಾಮದ ಬಗ್ಗೆ ಮಾಹಿತಿ ನೀಡುತ್ತದೆ. ಅರಣ್ಯ ಇಲಾಖೆಯು ಪ್ರವಾಸಿಗರ ಅನುಕೂಲಕ್ಕಾಗಿ ಉಪಹಾರ ಗೃಹವನ್ನು ತೆರೆದಿದ್ದು ಇದರ ಸಮೀಪವೇ ಮಕ್ಕಳ ವಿಹಾರಧಾಮವಿದೆ. ಇಲ್ಲಿ ನಿಗದಿತ ಹಣವನ್ನು ನೀಡಿ ಆನೆಯ ಮೇಲೆ ಕುಳಿತು ಸವಾರಿಯನ್ನು ಮಾಡಬಹುದು. ಆನೆ ಸವಾರಿ ಪಕ್ಕದಲ್ಲಿಯೇ ಜಿಂಕೆವನವಿದೆ. ಸುಮಾರು ೫ ಎಕರೆ ಪ್ರದೇಶದಲ್ಲಿ ಸುತ್ತಲೂ ಸುಸಜ್ಜಿತವಾಗಿ ತಂತಿ ಬೇಲಿ ಹಾಕಿ ನಿರ್ಮಿಸಲಾಗಿರುವ ಈ ವನದಲ್ಲಿ ಹಲವಾರು ಜಿಂಕೆ, ಕಡವೆಗಳಿವೆ. ಕಾಲು ದಾರಿಯಲ್ಲಿ ಹೆಜ್ಜೆಯಿಡುತ್ತಾ ಮುನ್ನಡೆದರೆ ಮರದಿಂದ ನಿರ್ಮಿಸಲಾಗಿರುವ ಕುಟೀರಗಳು ಮನಸ್ಸೆಳೆಯುತ್ತವೆ. ಈ ಕುಟೀರಗಳಿಗೆ ಹತ್ತಲು ಏಣಿಗಳನ್ನು ನಿರ್ಮಿಸಿದ್ದು, ಇದರಲ್ಲಿ ಕುಳಿತು ವಿಶ್ರಾಂತಿ ಪಡೆಯಬಹುದು.

error: Content is protected !!