ಮಡಿಕೇರಿ ಟ್ಯಾಕ್ಸಿ ಮಾಲೀಕರ, ಚಾಲಕರ ಪ್ರತಿಭಟನೆ : ಬೆಲೆ ಏರಿಕೆ ವಿರುದ್ಧ ತೀವ್ರ ಅಸಮಾಧಾನ

February 26, 2021

ಮಡಿಕೇರಿ ಫೆ.26 : ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಕ್ರಮವನ್ನು ವಿರೋಧಿಸಿ ಮತ್ತು ಕೊಡಗಿನಲ್ಲಿ ಸಂಚರಿಸುತ್ತಿರುವ ಹಳದಿ ಬೋರ್ಡ್ ದ್ವಿಚಕ್ರ ವಾಹನಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿ ಮಡಿಕೇರಿ ಟೂರಿಸ್ಟ್ ಟ್ಯಾಕ್ಸಿ ಕಾರು ಮಾಲೀಕರ ಮತ್ತು ಚಾಲಕರ ಸಂಘ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಹಳೇ ಖಾಸಗಿ ಬಸ್ ನಿಲ್ದಾಣದಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮಾಲೀಕರು ಹಾಗೂ ಚಾಲಕರು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಸಂಘದ ಅಧ್ಯಕ್ಷ ತೆಕ್ಕಡ ಸಂತು ಕಾರ್ಯಪ್ಪ, ಬೆಟ್ಟಗುಡ್ಡಗಳಿಂದ ಕೂಡಿದ ಹಾಗೂ ಭೌಗೋಳಿಕವಾಗಿ ಇತರ ಜಿಲ್ಲೆಗಳಿಗಿಂತ ಭಿನ್ನವಾಗಿರುವ ಕೊಡಗಿನಲ್ಲಿ ಕಳೆದ 3 ವರ್ಷಗಳಿಂದ ಸಂಭವಿಸಿದ ಪ್ರಾಕೃತಿಕ ವಿಕೋಪ, ಕೊರೋನಾ ಲಾಕ್‍ಡೌನ್‍ಗಳಿಂದಾಗಿ ವಾಹನ ಮಾಲೀಕರು ಹಾಗೂ ಚಾಲಕರು ಆದಾಯವಿಲ್ಲದೆ ಸಂಕಷ್ಟದ ಪರಿಸ್ಥಿತಿಯಲ್ಲಿದ್ದಾರೆ. ಪಡೆದ ಸಾಲವನ್ನು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿಗೆ ಬಂದು ತಲುಪಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಈ ಎಲ್ಲಾ ಸಂಕಷ್ಟದ ನಡುವೆ ಡೀಸೆಲ್ ಮತ್ತು ಪೆಟ್ರೋಲ್ ದರ ಏರಿಕೆಯಿಂದ ಗಾಯದ ಮೇಲೆ ಬರೆ ಎಳೆದಂತಾಗಿದೆ. ಟಯರ್, ಆಯಿಲ್ ಮತ್ತು ಇತರೆ ಬಿಡಿಭಾಗಗಳ ದರ ಕೂಡ ಏರಿಕೆಯಾಗಿದೆ. ಹೀಗಿದ್ದರೂ ಚಾಲಕರು ಬಾಡಿಗೆ ದರ ಏರಿಕೆ ಮಾಡದೆ ಹಿಂದಿನಂತೆ ಗ್ರಾಹಕರೊಂದಿಗೆ ಸಹಕರಿಸುತ್ತಿದ್ದಾರೆ ಎಂದರು.
::: ಬೈಕ್‍ಗಳಿಗೆ ಕಡಿವಾಣ ಹಾಕಿ :::
ಕೊಡಗಿನ ಟ್ಯಾಕ್ಸಿಗಳಿಗೆ ಪ್ರವಾಸಿಗರೇ ಆಧಾರ, ಆದರೆ ಕೆಲವರು ಹಳದಿ ಬೋರ್ಡ್ ಬೈಕ್‍ಗಳಲ್ಲಿ ಹಾಗೂ ಹೋಂ ಸ್ಟೇ ಮಾಲೀಕರು ಬಿಳಿ ಬೋರ್ಡ್ ಕಾರುಗಳನ್ನು ಪ್ರವಾಸಿಗರಿಗೆ ಬಾಡಿಗೆಗೆ ನೀಡುತ್ತಿದ್ದಾರೆ ಎಂದು ಆರೋಪಿಸಿದ ಸಂತು ಕಾರ್ಯಪ್ಪ, ನಿಯಮ ಮೀರುತ್ತಿರುವ ವಾಹನಗಳಿಗೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಮುಂದಿನ ಒಂದು ತಿಂಗಳೊಳಗೆ ಪೆಟ್ರೋಲ್, ಡೀಸೆಲ್ ದರ ಏರಿಕೆಯನ್ನು ನಿಯಂತ್ರಿಸದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
::: ಭಿತ್ತಿಪತ್ರದ ಮೂಲಕ ಅಸಮಾಧಾನ :::
“ಡೀಸೆಲ್, ಪೆಟ್ರೋಲ್, ದಿನನಿತ್ಯದ ಸಾಮಾಗ್ರಿಗಳ ಬೆಲೆ ಹೆಚ್ಚಳವನ್ನು ಖಂಡಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ” ಎಂಬ ಭಿತ್ತಿಪತ್ರವನ್ನು ತಮ್ಮ ತಮ್ಮ ವಾಹನಗಳಿಗೆ ಅಂಟಿಸಿ ಚಾಲಕರು ಅಸಮಾಧಾನ ವ್ಯಕ್ತಪಡಿಸಿದರು.
ಸಂಘದ ಕಾರ್ಯದರ್ಶಿ ಅರಸು, ಕಾವೇರಿ ಚಾಲಕರ ಸಂಘದ ಅಧ್ಯಕ್ಷ ಜೈಜಗದೀಶ್, ಕಾರ್ಯದರ್ಶಿ ಕುಯ್ಯಮುಡಿ ರಾಜೇಶ್, ಕಾಫಿ ನಾಡು ಪ್ರವಾಸಿ ಕಾರು ಮಾಲೀಕರ ಸಂಘದ ಅಧ್ಯಕ್ಷ ರಾಜೇಶ್, ಪ್ರಮುಖರಾದ ಪ್ರಮೋದ್, ವಿರೇಶ್, ಸುಂದರ, ಸ್ವಾಮಿ, ಬಿ.ಎಸ್. ಗಣೇಶ್, ಬೆಳ್ಯಪ್ಪ, ಹರೀಶ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡು ಬೇಡಿಕೆಗಳ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಬಿ.ಆರ್.ರೂಪ ಅವರಿಗೆ ಸಲ್ಲಿಸಿದರು.
ಕಾವೇರಿ ಚಾಲಕರ ಸಂಘ, ಕಾಫಿ ನಾಡು ಪ್ರವಾಸಿ ಕಾರು ಮಾಲೀಕರ ಸಂಘ ಮತ್ತು ಟ್ಯಾಕ್ಸಿ ಚಾಲಕರ ಸಂಘ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದವು.

error: Content is protected !!