ವನ್ಯಜೀವಿಗಳ ದಾಳಿ ತಡೆಯುವಲ್ಲಿ ಸರ್ಕಾರ ವಿಫಲ : ಕಾಂಗ್ರೆಸ್ ವೀಕ್ಷಕ ಟಿ.ಎಂ.ಶಾಹಿದ್ ಆರೋಪ

February 26, 2021

ಮಡಿಕೇರಿ ಫೆ.26 : ಕೊಡಗಿನಲ್ಲಿ ತೀವ್ರಗೊಂಡಿರುವ ವನ್ಯಜೀವಿಗಳ ದಾಳಿಯನ್ನು ತಡೆಯುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದ್ದು, ಅರಣ್ಯ ಇಲಾಖೆ ಭ್ರಷ್ಟಾಚಾರದ ಕೂಪವಾಗಿದೆಯೆಂದು ಕಾಂಗ್ರೆಸ್ ಪಕ್ಷದ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ವೀಕ್ಷಕ ಟಿ.ಎಂ.ಶಾಹಿದ್ ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ವನ್ಯ ಜೀವಿಗಳಿಂದ ಸಾವು ನೋವುಗಳು ಸಂಭವಿಸುತ್ತಿದ್ದರು ಅರಣ್ಯ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡದ ಸರ್ಕಾರ ಇಲಾಖೆಯೊಳಗೆ ವರ್ಗಾವಣೆಯ ದಂಧೆ ನಡೆಸುತ್ತಿದೆಯೆಂದು ಆರೋಪಿಸಿದರು.
ಸರ್ಕಾರ ಎಚ್ಚೆತ್ತುಕೊಂಡು ಕಾಡು ಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸದಿದ್ದಲ್ಲಿ ಪಕ್ಷದ ವತಿಯಿಂದ ತೀವ್ರ ರೀತಿಯ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಅರಣ್ಯ ಇಲಾಖೆಯಂತೆ ಕೊಡಗಿನ ಪೊಲೀಸ್ ಇಲಾಖೆ ಕೂಡ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ವಿಫಲವಾಗುತ್ತಿದ್ದು, ದಿನದಿಂದ ದಿನಕ್ಕೆ ಕಳ್ಳತನ ಮತ್ತು ಅಸಹಜ ಸಾವುಗಳ ಸಂಖ್ಯೆ ಹೆಚ್ಚಾಗುತ್ತಿದೆಯೆಂದು ಟೀಕಿಸಿದರು. ಕಳೆದ ಮೂರು ವರ್ಷಗಳಿಂದ ಪ್ರಾಕೃತಿಕ ವಿಕೋಪದಿಂದ ಜಿಲ್ಲೆಯ ರೈತರು ಹಾಗೂ ಬೆಳೆಗಾರರು ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದರು ಈ ಬಗ್ಗೆ ಕೇವಲ ಸುಳ್ಳು ಭರವಸೆಯನ್ನಷ್ಟೆ ನೀಡುತ್ತಿದ್ದಾರೆ ಎಂದು ಶಾಹಿದ್ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರದ ತಪ್ಪು ನಿರ್ಧಾರಗಳಿಂದಾಗಿ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೆ ಇದೆ. ಜನರು ಸಂಕಷ್ಟಕ್ಕೆ ಸಿಲುಕಿದ್ದು, ಯಾವುದೇ ಪ್ರತಿಭಟನೆಗಳಿಗೆ ಹೃದಯ, ಕಣ್ಣು, ಕಿವಿ ಇಲ್ಲದ ಸರ್ಕಾರ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.
ಶಿಕ್ಷಣ ಸಂಸ್ಥೆಗಳನ್ನು ಕೋವಿಡ್ ಪರಿಸ್ಥಿತಿಯಿಂದಾಗಿ ನಿರ್ವಹಣೆ ಮಾಡುವುದೇ ಕಷ್ಟವಾಗಿದೆ. ವಿದ್ಯಾರ್ಥಿಗಳು ಕೂಡ ಶೈಕ್ಷಣಿಕವಾಗಿ ಅಡೆ ತಡೆಗಳನ್ನು ಎದುರಿಸುತ್ತಿದ್ದಾರೆ. ಸರ್ಕಾರ ಶಿಕ್ಷಣ ಸಂಸ್ಥೆ ಮತ್ತು ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ. ರಾಜ್ಯ ಸರ್ಕಾರದಲ್ಲಿ ಸಮನ್ವಯತೆ ಇಲ್ಲದಾಗಿದ್ದು, ಇಚ್ಛಾಶಕ್ತಿಯ ಕೊರತೆ ಎದ್ದು ಕಾಣುತ್ತಿದೆಯೆಂದು ಟೀಕಿಸಿದರು.
ಮೀಸಲಾತಿಗಾಗಿ ವಿವಿಧ ಜನಾಂಗಗಳು ಹೋರಾಟಕ್ಕೆ ಇಳಿದಿವೆ. ಆದರೆ, ಸರ್ಕಾರ ದುಂಡು ಮೇಜಿನ ಸಭೆ ನಡೆಸಿ ಸಮಸ್ಯೆ ಬಗೆಹರಿಸುವ ಚಿಂತನೆ ನಡೆಸದೆ ಮೌನಕ್ಕೆ ಶರಣಾಗಿದೆ. ಅಲ್ಪಸಂಖ್ಯಾತ ಸಮೂಹಕ್ಕೆ ವೀರಪ್ಪಮೊಯ್ಲಿಯವರು ಅಧಿಕಾರದಲ್ಲಿದ್ದ ಅವಧಿಯಲ್ಲಿ ನೀಡಿರುವ ಶೇ.4ರ ಮೀಸಲಾತಿಯನ್ನು ಕಡಿತಗೊಳಿಸುವ ಪ್ರಯತ್ನ ಈ ಸರ್ಕಾರದಲ್ಲಿ ನಡೆಯುತ್ತಿದೆ ಎಂದು ದೂರಿದರು.
ದೇಶದ ಪ್ರಧಾನಿ ತಾನು ನಡೆದದ್ದೆ ದಾರಿ ಎಂದು ವರ್ತಿಸುತ್ತಿದ್ದು, ಅಮೆರಿಕಾದ ಮಾಜಿ ಅಧ್ಯಕ್ಷ ಟ್ರಂಪ್ ಅವರಿಗೆ ಆದ ಗತಿಯೇ ಇವರಿಗೂ ಆಗಲಿದೆಯೆಂದು ಭವಿಷ್ಯ ನುಡಿದರು. ದೇಶದ ವಿವಿಧ ಭಾಗಗಳಲ್ಲಿ ಕ್ರೀಡಾಂಗಣ ಹಾಗೂ ಇತರ ಸ್ಥಳಗಳಲ್ಲಿ ಪ್ರಧಾನಿಯವರ ಹೆಸರನ್ನು ಮರು ನಾಮಕರಣ ಮಾಡುವುದನ್ನು ವಿರೋಧಿಸುವುದಾಗಿ ಹೇಳಿದರು.
::: ಪಿಎಫ್‍ಐ, ಎಸ್‍ಡಿಪಿಐ ನಿಷೇಧಿಸಿ :::
ಪಿಎಫ್‍ಐ ಮತ್ತು ಎಸ್‍ಡಿಪಿಐ ಸಂಘಟನೆಗಳನ್ನು ನಿಷೇಧಿಸುವುದಾಗಿ ಹೇಳಿಕೊಂಡಿರುವ ಸರ್ಕಾರ, ಕಾಂಗ್ರೆಸ್ ಮತಗಳನ್ನು ವಿಭಜಿಸುವ ಕಾರಣಕ್ಕಾಗಿ ನಿಷೇಧಕ್ಕೆ ಮುಂದಾಗಿಲ್ಲ. ಪರೋಕ್ಷವಾಗಿ ಇದೇ ಸಂಘಟನೆಗಳ ಬೆಂಬಲದಿಂದ ಹೈದರಾಬಾದ್ ಮತ್ತು ಗುಜರಾತ್‍ನಲ್ಲಿ ಬಿಜೆಪಿ ಅಧಿಕಾರವನ್ನು ಗಳಿಸಿಕೊಂಡಿದೆ. ಇಲ್ಲಿಯವರೆಗೆ ಈ ಎರಡು ಸಂಘಟನೆಗಳ ವಿರುದ್ಧ ಹತೋಟಿ ಸಾಧಿಸಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ ಎಂದು ಆರೋಪಿಸಿದ ಶಾಹಿದ್, ತಾಕತ್ತಿದ್ದರೆ ಎರಡು ಸಂಘಟನೆಗಳನ್ನು ನಿಷೇಧಿಸಲಿ ಎಂದು ಸವಾಲು ಹಾಕಿದರು.
ಮುಂಬರುವ ಜಿ.ಪಂ, ತಾ.ಪಂ, ನಗರಸಭೆ ಚುನಾವಣೆಗಳಲ್ಲಿ ಕಾಂಗ್ರೆಸ್ ಬಹುಮತ ಸಾಧಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಮಡಿಕೇರಿ ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹೊಟ್ಟೆಯಂಡ ಪಾರ್ವತಿ ಫ್ಯಾನ್ಸಿ ಮಾತನಾಡಿ, ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಬಿಜೆಪಿಯನ್ನು ನೆಚ್ಚಿಕೊಂಡು ಮತ ಹಾಕಿದವರಿಗೆ ಬಿಜೆಪಿ ಸರ್ಕಾರ ಸರಿಯಾದ ಪಾಠವನ್ನೆ ಕಲಿಸಿದೆಯೆಂದು ವ್ಯಂಗ್ಯವಾಡಿದರು. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪ ಮತ್ತು ವನ್ಯ ಜೀವಿಗಳ ದಾಳಿಯಿಂದ ಬೆಳೆಗಾರರಿಗೆ ಸಾಕಷ್ಟು ಕಷ್ಟನಷ್ಟಗಳು ಎದುರಾಗಿದೆ. ಚಿನ್ನಾಭರಣಗಳನ್ನು ಬ್ಯಾಂಕಿನಲ್ಲಿಟ್ಟು ತೋಟಗಳನ್ನು ನಿರ್ವಹಿಸುತ್ತಿರುವ ಬೆಳೆಗಾರರಿಗೆ ಸಾಲ ತೀರಿಸಲು ಸಾಧ್ಯವಾಗುತ್ತಿಲ್ಲ. ಪರಿಸ್ಥಿತಿ ಹೀಗಿದ್ದರು ಕೇಂದ್ರ ಮತ್ತು ರಾಜ್ಯ ಸರ್ಕಾರ ಕಣ್ಣಿದ್ದು ಕುರುಡಾಗಿದೆಯೆಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಸದಸ್ಯ ಪುಷ್ಪಾ ಪೂಣಚ್ಚ, ಮಡಿಕೆÉೀರಿ ನಗರ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಕಲೀಲ್ ಪಾಷ ಹಾಗೂ ಎಸ್‍ಸಿ ಘಟಕದ ಅಧ್ಯಕ್ಷ ಮುದ್ದು ರಾಜ್ ಉಪಸ್ಥಿತರಿದ್ದರು.

error: Content is protected !!