ಕೊಡಗಿನಲ್ಲಿ ಜನೌಷಧಿ ಸಪ್ತಾಹ : ಮಾ.1 ರಂದು ವಿವಿಧ ಕಾರ್ಯಕ್ರಮಗಳಿಗೆ ಚಾಲನೆ

February 26, 2021

ಮಡಿಕೇರಿ ಫೆ.26 : ಪ್ರತೀವರ್ಷ ಮಾ.7 ರಂದು ಆಯೋಜಿಸಲಾಗಿತ್ತಿದ್ದ ಜನೌಷಧಿ ದಿನವನ್ನು ಈ ಸಾಲಿನಿಂದ ಜನೌಷಧಿ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾ.1 ರಿಂದ 7ರವರೆಗೆ ಕೊಡಗು ಜಿಲ್ಲೆಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಜನೌಷಧಿ ಕೇಂದ್ರ ಮಾಲೀಕರ ಸಂಘದ ಪ್ರತಿನಿಧಿಗಳು ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಂಘದ ಪ್ರಮುಖರಾದ ಕೆ.ಕೆ.ದಿನೇಶ್ ಕುಮಾರ್ ಅವರು ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೆ ತಂದಿರುವ ಜನೌಷಧಿ ಪರಿಯೋಜನೆಯಡಿ ಪ್ತಸಕ್ತ ದೇಶದಾದ್ಯಂತ ಸುಮಾರು 7ಸಾವಿರಕ್ಕೂ ಅಧಿಕ ಜನೌಷಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದೆ. ಕೊಡಗು ಜಿಲ್ಲೆಯ ಮಡಿಕೇರಿ, ವೀರಾಜಪೇಟೆ, ಗೋಣಿಕೊಪ್ಪ, ಕುಶಾಲನಗರ, ಚೇರಂಬಾಣೆ ಸೇರಿದಂತೆ 8 ಕೇಂದ್ರಗಳು ಕಾರ್ಯಾಚರಿಸುತ್ತಿವೆ. ಮುಂದಿನ ಎರಡು ತಿಂಗಳುಗಳಲ್ಲಿ ಇನ್ನೂ ನಾಲ್ಕು ಕೇಂದ್ರಗಳು ಆರಂಭವಾಗಲಿವೆ ಎಂದು ಹೇಳಿದರು.
ಜನೌಷಧಿ ಪರಿಯೋಜನೆಯ ಮಹತ್ವವನ್ನು ಜನಸಾಮಾನ್ಯರಿಗೆ ತಿಳಿಸುವ ನಿಟ್ಟಿನಲ್ಲಿ ಪ್ರತಿವರ್ಷ ಮಾ.7ರಂದು ಜನೌಷಧಿ ದಿನವನ್ನಾಗಿ ಆಚರಿಸಲಾಗುತ್ತಿದ್ದು, ಈ ಯೋಜನೆಯ ಮಹತ್ವವನ್ನು ಮತ್ತಷ್ಟು ಜನರಿಗೆ ತಿಳಿಸುವ ಉದ್ದೇಶದಿಂದ ಈ ವರ್ಷದಿಂದ ಸಪ್ತಾಹವನ್ನಾಗಿ ಆಚರಿಸಲಾಗುತ್ತಿದೆ. ಅದರಂತೆ ಮಾ. 1ರಂದು ಆಯಾ ಜನೌಷಧಿ ಕೇಂದ್ರಗಳ ವ್ಯಾಪ್ತಿಯಲ್ಲಿ ಉಚಿತ ಆರೋಗ್ಯ ಶಿಬಿರ, ಮಾ.2ರಂದು ತಜ್ಞ ವೈದ್ಯರು, ತಜ್ಞ ಔಷಧಿ ಜ್ಞಾನಿಗಳೊಂದಿಗೆ ಚರ್ಚಾಕೂಟ, ಮಾ.3ರಂದು ಜನೌಷಧಿ ಪರಿಯೋಜನೆಗೆ ಬಗ್ಗೆ ಯುವಕರಿಗೆ ತಿಳಿಸುವುದಕ್ಕಾಗಿ ಶಾಲಾ ಕಾಲೇಜುಗಳಲ್ಲಿ ಯುವ ಜನರಿಗೆ ಮಾಹಿತಿ ನೀಡುವುದು, ಮಾ.4ರಂದು ಜನರವರೆಗೂ ಜನೌಷಧಿ ಎಂಬ ವಿಷಯದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು, ಫಾರ್ಮಸಿ ವಿದ್ಯಾರ್ಥಿಗಳು, ಪಿಯುಸಿ ವಿದ್ಯಾರ್ಥಿಗಳು ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ ನಡೆಯಲಿರುವುದಾಗಿ ದಿನೇಶ್ ಕುಮಾರ್ ವಿವರಿಸಿದರು.
ಈ ಪ್ತಬಂಧ ಸ್ಪರ್ಧೆಯಲ್ಲಿ ಜಿಲ್ಲಾ ಮಟ್ಟದಲ್ಲಿ ವಿಜೇತರಾದವರು ರಾಜ್ಯಮಟ್ಟಕ್ಕೆ ಹಾಗೂ ರಾಜ್ಯ ಮಟ್ಟದಲ್ಲಿ ಆಯ್ಕೆಯಾದವರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿದ್ದು, ರಾಷ್ಟ್ರ ಮಟ್ಟದಲ್ಲಿ ಆಯ್ಕೆಯಾದವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ನೇರವಾಗಿ ಮಾತನಾಡುವ ಅವಕಾಶ ಪಡೆಯಲಿದ್ದಾರೆ ಎಂದು ತಿಳಿಸಿದರು.
ಮಾ.5ರಂದು ನಮ್ಮ ಹಿರಿಯರಿಗಾಗಿ ಜನೌಷಧಿ ಪರಿಯೋಜನೆ ಕಾರ್ಯಕ್ರಮದಡಿ ಹಿರಿಯ ನಾಗರಿಕರೊಂದಿಗೆ ಒಂದು ದಿನದ ಕಾರ್ಯಕ್ರಮ ನಡೆಯಲಿದ್ದು, ಮಾ.6ರಂದು ಜನೌಷಧಿಯ ನಡೆ ಜನಸಾಮಾನ್ಯರವರೆಗೆ ಕಾರ್ಯಕ್ರಮದಡಿ ಬೆಳಗ್ಗೆ 10.30ಗಂಟೆಗೆ ಮಡಿಕೇರಿಯ ಚೌಡೇಶ್ವರಿ ದೇವಾಲಯದ ಬಳಿಯಿಂದ ಜನರಲ್ ತಿಮ್ಮಯ್ಯ ವೃತ್ತದವರೆಗೆ ಜಾಥಾ ನಡೆಯಲಿದೆ. ಇದರಲ್ಲಿ ಶಾಸಕರುಗಳು, ಜಿ.ಪಂ. ಅಧ್ಯಕ್ಷರಾದಿಯಾಗಿ ಜನಪ್ರತಿನಿಧಿಗಳು ಪಾಲ್ಗೊಳ್ಳಲಿದ್ದಾರೆ.ಅಂದು 11.30ಕ್ಕೆ ಕಾವೇರಿ ಕಲಾ ಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮವೂ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಮಾ.7ರಂದು ಜನೌಷಧಿ ದಿನಾಚರಣೆ ದಿನದಂದು ಪ್ರತೀವರ್ಷದಂತೆ ಪ್ರಧಾನಿ ನರೇಂದ್ರ ಮೋದಿ ಅವರು ನೇರವಾಗಿ ಜನೌಷಧಿ ಕೇಂದ್ರಗಳ ಮಾಲಕರು ಹಾಗೂ ಫಲಾನುಭವಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಲಿದ್ದು, ಈ ಕಾರ್ಯಕ್ರಮ ವೀಕ್ಷಣೆಗಾಗಿ ಪ್ರತಿಯೊಂದು ಜನೌಷಧಿ ಕೇಂದ್ರಗಳ ಬಳಿ ವ್ಯವಸ್ಥೆ ಮಾಡಲಾಗುವುದು ಎಂದು ದಿನೇಶ್ ಕುಮಾರ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಜನೌಷಧಿ ಕೇಂದ್ರಗಳ ಮಾಲಕರಾದ ಕೆ.ಜಿ.ಕೀರ್ತನ್ (ವೀರಾಜಪೇಟೆ), ಸಿ.ಸಿ.ಗಣಪತಿ ಹಾಗೂ ಸುನಿಲ್ ಚಂಗಪ್ಪ(ಗೋಣಿಕೊಪ್ಪ) ಉಪಸ್ಥಿತರಿದ್ದರು.

error: Content is protected !!