ಕುಶಾಲನಗರ ಬಳಿ 100 ಹಾಸಿಗೆ ಸುಸಜ್ಜಿತ ಇಎಸ್ಐ ಆಸ್ಪತ್ರೆ ನಿರ್ಮಾಣಕ್ಕೆ ಸಂಸದ ಪ್ರತಾಪ್ ಸಿಂಹ ಮನವಿ

ಮಡಿಕೇರಿ.ಫೆ.26 : ಕಾರ್ಮಿಕರ ಆರೋಗ್ಯದ ಹಿತದೃಷ್ಠಿಯಿಂದ ಸರ್ಕಾರದ ವತಿಯಿಂದ ಸುಮಾರು 100 ಹಾಸಿಗೆಗಳುಳ್ಳ ಸುಸಜ್ಜಿತ ಇಎಸ್ಐ ಆಸ್ಪತ್ರೆಯನ್ನು ಸ್ಥಾಪನೆ ಮಾಡಿದಲ್ಲಿ ಕಾರ್ಮಿಕರಿಗೆ ಅನುಕೂಲವಾಗುತ್ತದೆ. ಪ್ರಸ್ತುತ ಕೊಡಗು ಜಿಲ್ಲೆಯಲ್ಲಿ ಯಾವುದೇ ಇಎಸ್ಐ ಆಸ್ಪತ್ರೆಗಳು ಇರುವುದಿಲ್ಲ. ಕೊಡಗು ಜಿಲ್ಲೆಯ ಕುಶಾಲನಗರ ಸಮೀಪ ಒಂದು ಕಾರ್ಮಿಕ ರಾಜ್ಯ ವಿಮಾ(ಇಎಸ್ಐ) ಆಸ್ಪತ್ರೆಯನ್ನು ಮಂಜೂರು ಮಾಡಿಕೊಡುವಂತೆ ಸಂಸದ ಪ್ರತಾಪ್ ಸಿಂಹ ಅವರು ಕಾರ್ಮಿಕ ಇಲಾಖೆ ಸಚಿವ ಶಿವರಾಮ್ ಹೆಬ್ಬಾರ್ ಅವರಲ್ಲಿ ಮನವಿ ಮಾಡಿದ್ದಾರೆ.
ಕೊಡಗಿನ ಕುಶಾಲನಗರದಲ್ಲಿ 100 ಹಾಸಿಗೆಗಳ ಇಎಸ್ಐ ಆಸ್ಪತ್ರೆ ತೆರೆಯುವಂತೆ ಮಾನ್ಯ ಕಾರ್ಮಿಕ ಖಾತೆ ಸಚಿವ ಶಿವರಾಮ್ ಹೆಬ್ಬಾರರಿಗೆ ಮನವಿ ಮಾಡಿಕೊಂಡಾಗ ಸಕರಾತ್ಮಕ ಸ್ಪಂದನೆ ಸಿಕ್ಕಿದೆ ಎಂದು ಸಂಸದರು ತಿಳಿಸಿದ್ದಾರೆ.
ಕೊಡಗು ಜಿಲ್ಲೆಯ ಕುಶಾಲನಗರ ತಾಲ್ಲೂಕು ಕೂಡ್ಲೂರು ಗ್ರಾಮದ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಮಂಡಳಿಯ(ಕೆಐಎಡಿಬಿ) ವ್ಯಾಪ್ತಿಗೆ ಬರುವ ಸುಮಾರು 120 ಅತೀ ಸಣ್ಣ, ಮಧ್ಯಮ ಮತ್ತು ಬೃಹತ್ ಕೈಗಾರಿಕೆಗಳಲ್ಲಿ ಸುಮಾರು 4,500 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದು,
ಕಾರ್ಮಿಕರ ಆರೋಗ್ಯದ ಹಿತದೃಷ್ಠಿಯಿಂದ ಕಾರ್ಮಿಕ ರಾಜ್ಯ ವಿಮಾ(ಇಎಸ್ಐ) ಆಸ್ಪತ್ರೆಯನ್ನು ತೆರೆಯುವ ಅತ್ಯಾವಶ್ಯಕತೆ ಇದ್ದು, ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಖಾನೆಗಳು, ಕೈಗಾರಿಕೆಗಳ ಸ್ಥಾಪನೆಯಾಗುವುದರಿಂದ ದುಡಿಯುವ ಕಾರ್ಮಿಕರ ಸಂಖ್ಯೆಯು ಹೆಚ್ಚುತ್ತದೆ ಎಂದು ಮನವಿಯಲ್ಲಿ ಕೋರಲಾಗಿದೆ.
