ಬಿಎಸ್ವೈಗೆ ಹುಟ್ಟುಹಬ್ಬದ ಸಂಭ್ರಮ : ಗಣ್ಯರಿಂದ ಶುಭಾಶಯ

ಬೆಂಗಳೂರು ಫೆ. 27 : ಎಪ್ಪತ್ತೆಂಟು ವಸಂತಗಳನ್ನು ಪೂರೈಸಿ ಎಪ್ಪತ್ತೊಂಬತ್ತನೇ ವಸಂತಕ್ಕೆ ಕಾಲಿಟ್ಟಿರುವ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಬಿಎಸ್ವೈ ಜನ್ಮದಿನದ ಹಿನ್ನೆಲೆಯಲ್ಲಿ ಗಣ್ಯರು ಹಾಗೂ ವಿವಿಧ ರಾಜಕಾರಣಿಗಳು ಶುಭಕೋರಿದ್ದಾರೆ.
ಬಿಎಸ್ ಯಡಿಯೂರಪ್ಪನವರನ್ನು ಕಾವೇರಿ ನಿವಾಸದಲ್ಲಿ ಶನಿವಾರ ಭೇಟಿ ಮಾಡಿದ ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ರವಿಕುಮಾರ್ ಸೇರಿದಂತೆ ಹಿರಿಯ ಅಧಿಕಾರಿಗಳು ಹೂಗುಚ್ಚ ನೀಡಿ ಶುಭಾಶಯ ಸಲ್ಲಿಸಿದರು.
ಇನ್ನು ಟ್ವಿಟ್ಟರ್ನಲ್ಲೂ ಸಚಿವರು, ಶಾಸಕರು ಶುಭಕೋರಿದ್ದಾರೆ. ಬಿಎಸ್ ಯಡಿಯೂರಪ್ಪ ಅವರ ಪುತ್ರ ಬಿ.ವೈ ವಿಜಯೇಂದ್ರ ಟ್ವೀಟ್ ಮೂಲಕ ಶುಭಕೋರಿದ್ದಾರೆ. ಹೋರಾಟವನ್ನೇ ಬದುಕಾಗಿಸಿಕೊಂಡ ಹುಟ್ಟುಹೋರಾಟಗಾರ, ಜನಸೇವೆಯನ್ನೇ ಬದುಕಿನ ಗುರಿಯಾಗಿಸಿಕೊಂಡ ಧೀಮಂತ, ಸವಾಲುಗಳನ್ನು ಲೆಕ್ಕಿಸದೆ ಮುನ್ನುಗ್ಗುವ ಛಲದಂಕಮಲ್ಲ, ಸರಿಸಾಟಿಯಿಲ್ಲದ ಜನನಾಯಕ, ಮುಖ್ಯಮಂತ್ರಿ ಪೂಜ್ಯ ತಂದೆಯವರಾದ ಬಿಎಸ್ವೈ ಅವರಿಗೆ ಜನ್ಮದಿನದ ಶುಭಾಶಯಗಳು. ದೇವರ ಅನುಗ್ರಹ, ಜನರ ಪ್ರೀತಿ ಸದಾ ನಿಮ್ಮೊಂದಿಗಿರಲಿ ಎಂದು ಶುಭಕೋರಿದ್ದಾರೆ.
