ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ : ಮಾ.1 ರಂದು ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರತಿಭಟನೆ

ಮಡಿಕೇರಿ ಫೆ.27 : ರಾಜ್ಯದಲ್ಲಿ ಸಮಗ್ರ ಬಾಲವಿಕಾಸ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಹಾಗೂ ಮಾಡುತ್ತಿರುವ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನಿವೃತ್ತಿ ವೇತನ ಘೋಷಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಾ.1 ರಂದು ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಗುವುದೆಂದು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯ ಸಂಘದ ಮಡಿಕೇರಿ ತಾಲ್ಲೂಕು ಅಧ್ಯಕ್ಷೆ ಕೆ.ಎಸ್.ಮುತ್ತಮ್ಮ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸಿ ನಿವೃತ್ತಿಯಾದ ಅಂಗನವಾಡಿ ಕಾರ್ಯಕರ್ತೆಯರಿಗೆ ರೂ.50 ಸಾವಿರ ಹಾಗೂ ಸಹಾಯಕಿಯರಿಗೆ ರೂ.30 ಸಾವಿರ ನಿವೃತ್ತಿ ಇಡಿಗಂಟು ನೀಡಲಾಗುತ್ತಿತ್ತು. ಆದರೆ ಪ್ರಸ್ತುತ ಕಾರ್ಯನಿರ್ವಹಿಸಿ ನಿವೃತ್ತರಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರಿಯರಿಗೆ ಯಾವುದೇ ಇಡಿಗಂಟಾಗಲಿ, ನಿವೃತ್ತಿ ವೇತನವಾಗಲಿ ನೀಡಲಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಕ್ಷಣ ಇಡಿಗಂಟು ಹಾಗೂ ನಿವೃತ್ತಿ ವೇತನ ನೀಡಬೇಕೆಂದು ಒತ್ತಾಯಿಸಿದರು.
ಕೋವಿಡ್ ಸಂದರ್ಭ ಆಶಾ ಕಾರ್ಯಕರ್ತರಂತೆ ಅಂಗನವಾಡಿ ಕಾರ್ಯಕರ್ತರು ಹಾಗೂ ಸಹಾಯಕಿಯರು ಕೂಡ ತಮ್ಮ ಪ್ರಾಣವನ್ನು ಲೆಕ್ಕಿಸದೆ ಕಾರ್ಯನಿರ್ವಹಿಸಿದ್ದಾರೆ. ಆದರೆ ಇಲ್ಲಿಯವರೆಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರ ಗುರುತಿಸುವ ಕೆಲಸ ಮಾಡಿಲ್ಲ ಎಂದು ಆರೋಪಿಸಿದ ಮುತ್ತಮ್ಮ, ಮಾತೃಪೂರ್ಣ ಯೋಜನೆಯ ಬಗ್ಗೆ ಸರ್ಕಾರ ಸಮಗ್ರವಾಗಿ ಅಧ್ಯಯನ ನಡೆಸಿ ಫಲಾನುಭವಿಗಳ ಹಿತದೃಷ್ಟಿಯಿಂದ ಚಾಲ್ತಿಯಲ್ಲಿದ್ದ ಟೇಕ್ಹೋಂ ಅನ್ನು ಗರ್ಭಿಣಿ ಹಾಗೂ ಬಾಣಂತಿಯರಿಗೆ ವಿತರಿಸಬೇಕು ಅಥವಾ ಆ ಫಲಾನುಭವಿಗಳಿಗೆ ಹಣ ಜಮಾ ಮಾಡಬೇಕೆಂದರು.
ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರಿಗೆ ನೀಡುತ್ತಿರುವ ಸಮವಸ್ತ್ರ ಕಳಪೆ ಮಟ್ಟದಿಂದ ಕೂಡಿದೆ ಎಂದು ಆರೋಪಿಸಿದ ಅವರು, ಕಳಪೆ ಮಟ್ಟದ ಸಮವಸ್ತ್ರವನ್ನು ವಾಪಸ್ ಪಡೆಯಬೇಕು ಮತ್ತು ರಾಜ್ಯದ ಎಲ್ಲಾ ಸಮಗ್ರ ಬಾಲ ವಿಕಾಸ ಯೋಜನೆಯಲ್ಲಿ ಕಳೆದ ಐದು ವರ್ಷ ವರ್ಷಕ್ಕೆ ಮೇಲ್ಪಟ್ಟು ಕೆಲಸ ಮಾಡುತ್ತಿರುವ ಎಲ್ಲಾ ಮೇಲ್ವಿಚಾರಕಿಯರನ್ನು ವರ್ಗಾವಣೆ ಮಾಡಬೇಕು, ಗೌರವ ಧನ ಹೆಚ್ಚಳ ಮಾಡುವ ಬಗ್ಗೆ ಘೋಷಿಸಿರುವುದರಿಂದ ಅದನ್ನು ತಕ್ಷಣವೇ ಜಾರಿಗೊಳಿಸಬೇಕೆಂದು ಆಗ್ರಹಿಸಿದರು.
ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮಹಾಮಂಡಳಿಯ ಪದಾಧಿಕಾರಿ ಹಾಗೂ ನಿವೃತ್ತ ಕಾರ್ಯಕರ್ತೆ ಕೆ.ಕೆ.ಶಾರದ ಮಾತನಾಡಿ, ನಿವೃತ್ತಿ ಹೊಂದಿದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಆರೋಗ್ಯ ಸೇರಿದಂತೆ ಅನೇಕ ಮೂಲಭೂತ ಸೌಲಭ್ಯಗಳನ್ನು ಎದುರಿಸುತ್ತಿದ್ದರೂ ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಸ್ಪಂದನೆ ದೊರಕುತ್ತಿಲ್ಲ. ನಿವೃತ್ತಿ ಹೊಂದಿದ ನಂತರ ಯಾವುದೇ ಸೌಲಭ್ಯಗಳು ದೊರೆಯದೆ ಇರುವುದರಿಂದ ಹೊಟ್ಟೆಪಾಡಿಗಾಗಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕೂಲಿ ಕೆಲಸ ಮಾಡುವ ಪರಿಸ್ಥಿತಿ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಕನಿಷ್ಠ ವೇತನಕ್ಕಾಗಿ ಒತ್ತಾಯಿಸಿ ಹಲವು ಬಾರಿ ಪ್ರತಿಭಟನೆ, ಸಭೆಗಳ ಮೂಲಕ ಸರ್ಕಾರದ ಗಮನ ಸೆಳೆಯಲಾಗಿದ್ದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲ. ಇನ್ನಾದರೂ ಸರ್ಕಾರ ಎಚ್ಚೆತ್ತುಕೊಳ್ಳದಿದ್ದಲ್ಲಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಶಾರದ ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಪದಾಧಿಕಾರಿ ಹೆಚ್.ವಿ.ನಾಗರತ್ನ, ಸಂಘದ ಮಡಿಕೇರಿ ತಾಲ್ಲೂಕು ಕಾರ್ಯದರ್ಶಿ ಐ.ಎ.ಅಕ್ಕಮ್ಮ ಹಾಗೂ ನಿವೃತ್ತ ಕಾರ್ಯಕರ್ತೆ ಕೆ.ಎ.ಕಸ್ತೂರಿ ಉಪಸ್ಥಿತರಿದ್ದರು.
