ಕುಶಾಲನಗರ ಮನೆಗಳ್ಳತನ : ಆರೋಪಿ ಬಂಧನ

February 27, 2021

ಮಡಿಕೇರಿ ಫೆ.27 : ಕುಶಾಲನಗರ ಪಟ್ಟಣ ವ್ಯಾಪ್ತಿಯಲ್ಲಿ 2 ಮನೆಗಳ ಕಳ್ಳತನ ಮಾಡಿದ ಆರೋಪಿಯನ್ನು ಬಂಧಿಸುವಲ್ಲಿ ಕುಶಾಲನಗರ ಪೊಲೀಸರು ಯಶಸ್ವಿಯಾಗಿದ್ದಾರೆ. ಸೋಮವಾರಪೇಟೆ ತಾಲ್ಲೂಕಿನ ಹಾನಗಲ್ಲು ಗ್ರಾಮದ ನಿವಾಸಿ ಕಿರಣ್ ಕುಮಾರ್(22) ಎಂಬಾತನೇ ಬಂಧಿತ ಆರೋಪಿ.
ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ನಂಜುಂಡೇಶ್ವರ ಬಡಾವಣೆಯ ಒಂದು ಮತ್ತು ಆದರ್ಶ ದ್ರಾವಿಡ ಕಾಲೋನಿಯ ಒಂದು ಮನೆಯಲ್ಲಿ ಕೆಲ ದಿನಗಳ ಹಿಂದೆ ಬೀಗ ಒಡೆದು ಕಳ್ಳತನ ನಡೆಸಲಾಗಿತ್ತು. ಈ ಘಟನೆಯ ಬಗ್ಗೆ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಅವರು ಒಂದು ತಂಡ ರಚಿಸಿ ತನಿಖೆ ನಡೆಸುವಂತೆ ಸೂಚಿಸಿದ್ದರು. ಪ್ರಕರಣದ ಬೆನ್ನು ಹತ್ತಿದ್ದ ಪೊಲೀಸರು ಕುಶಾಲನಗರ ಮಾರ್ಕೆಟ್ ರಸ್ತೆ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದ ಕಿರಣ್ ಕುಮಾರ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ 2 ಮನೆ ಕಳವು ಪ್ರಕರಣ ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಂಧಿತ ಆರೋಪಿಯಿಂದ ಹೆಚ್.ಸಿ ಕಂಪೆನಿಯ 2 ಲ್ಯಾಪ್ ಟಾಪ್, 6500 ರೂ.ನಗದು, ಒಂದು ಜೊತೆ ಚಿನ್ನದ ಓಲೆ, ಒಂದು ಚಿನ್ನದ ಕೈ ಬಳೆ, ಒಂದು ಚಿನ್ನದ ಕರಿಮಣಿ ಸರ, ಸ್ಯಾಮ್ ಸಂಗ್ ಮೊಬೈಲ್, ವಾಚ್ ಮತ್ತು ಮನೆಗಳ ಬೀಗ ಮುರಿಯಲು ಬಳಸಿದ್ದ ಕಬ್ಬಿಣದ ಹಾರೆಯನ್ನು ವಶಕ್ಕೆ ಪಡೆಯಲಾಗಿದೆ.
ಡಿವೈಎಸ್‍ಪಿ ಶೈಲೇಂದ್ರ ಮಾರ್ಗದರ್ಶನದಲ್ಲಿ ಕುಶಾಲನಗರ ವೃತ್ತ ನಿರೀಕ್ಷಕ ಎಂ.ಮಹೇಶ್, ಟೌನ್ ಠಾಣಾಧಿಕಾರಿ ಗಣೇಶ್, ಎಎಸ್‍ಐ ಗೋಪಾಲ್, ಸುದೀಶ್ ಕುಮಾರ್, ರಂಜಿತ್, ಕ್ರೈಂ ಸಿಬ್ಬಂದಿಗಳಾದ ದಯಾನಂದ, ಸಜಿ, ಪ್ರಕಾಶ್, ಉಮೇಶ್ ಅವರುಗಳು ಪಾಲ್ಗೊಂಡಿದ್ದರು.
ಸಾರ್ವಜನಿಕರು ಮನೆಗಳಿಗೆ ಬೀಗ ಹಾಕಿ ತೆರಳುವ ಸಂದರ್ಭ ಮನೆಯಲ್ಲಿ ತಮ್ಮ ಸಂಬಂಧಿಕರನ್ನು ಉಳಿಸಿಕೊಳ್ಳುವಂತೆ ಅಥವಾ ತುರ್ತು ಸೇವಾ ಸಂಖ್ಯೆ 112ಗೆ ಮಾಹಿತಿ ನೀಡುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರ ಮನವಿ ಮಾಡಿದ್ದಾರೆ.

error: Content is protected !!