ಕೇಂದ್ರದ ನಡೆಗೆ ಖಂಡನೆ : ಕಾಂಗ್ರೆಸ್ ಕಿಸಾನ್ ಘಟಕದಿಂದ ಕೊಡಗು ಜಿಲ್ಲೆಯಾದ್ಯಂತ ಪ್ರತಿಭಟನೆ

February 27, 2021

ಮಡಿಕೇರಿ ಫೆ.27 : ತೈಲೋತ್ಪನ್ನ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆ ಹಾಗೂ ಕಾಫಿ ಮಂಡಳಿಯ ಶಾಖೆಗಳನ್ನು ಮುಚ್ಚುತ್ತಿರುವ ಕೇಂದ್ರ ಸರಕಾರದ ನಡೆಯನ್ನು ಖಂಡಿಸಿ ಮಾ.27 ರಂದು ಜಿಲ್ಲೆಯಲ್ಲಿ ರೈತಪರವಾದ ಬೃಹತ್ ಪ್ರತಿಭಟನೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಕಾಂಗ್ರೆಸ್ ಕಿಸಾನ್ ಘಟಕದ ಜಿಲ್ಲಾಧ್ಯಕ್ಷ ನೆರವಂಡ ಉಮೇಶ್ ತಿಳಿಸಿದ್ದಾರೆ.
ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಕಿಸಾನ್ ಘಟಕದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತಾಡಿದರು. ಜಿಲ್ಲೆಯ ಎಲ್ಲಾ ಬ್ಲಾಕ್ ಗಳಲ್ಲಿ ಸರ್ಕಾರದ ರೈತ ಮತ್ತು ಜನವಿರೋಧಿ ಧೋರಣೆಗಳ ವಿರುದ್ಧ ಕಾಂಗ್ರೆಸ್ ಕಿಸಾನ್ ಘಟಕದಿಂದ ನಿರಂತರವಾಗಿ ಮುಂದಿನ ಒಂದು ತಿಂಗಳ ಕಾಲ ಪ್ರತಿಭಟನೆ ನಡೆಯಲಿದೆ ಎಂದರು.
ಬೆಲೆ ಏರಿಕೆ, ಬದಲಾಗುತ್ತಿರುವ ಕೃಷಿ ಕಾಯ್ದೆಗಳು, ಪ್ರಾಕೃತಿಕ ವಿಕೋಪ, ವನ್ಯಜೀವಿಗಳ ಹಾವಳಿ ಸೇರಿದಂತೆ ಎಲ್ಲಾ ವಿಧದಲ್ಲೂ ರೈತಾಪಿ ವರ್ಗ ದೊಡ್ಡ ಹೊಡೆತವನ್ನು ಎದುರಿಸುತ್ತಿದೆ. ಆದರೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಸಮಸ್ಯೆಗಳಿಗೆ ಸ್ಪಂದಿಸದೆ ಜಾಣ ಮೌನಕ್ಕೆ ಶರಣಾಗಿದೆ ಎಂದು ಟೀಕಿಸಿದರು.
ಕಾಫಿ ಮಂಡಳಿಯ ಶಾಖೆಗಳನ್ನು ಮುಚ್ಚುವುದರಿಂದ ಬೆಳೆಗಾರರಿಗೆ ದೊಡ್ಡ ಅನ್ಯಾಯವಾಗಲಿದೆ ಎಂದು ಅಭಿಪ್ರಾಯಪಟ್ಟ ಉಮೇಶ್, ಸಂಕಷ್ಟದಲ್ಲಿರುವ ಕೃಷಿಕ ವರ್ಗಕ್ಕೆ ಬೆಳೆ ಪರಿಹಾರ ನೀಡಬೇಕು ಮತ್ತು ಸಾಲಮನ್ನಾ ಮಾಡಬೇಕೆಂದು ಪ್ರತಿಭಟನೆ ಸಂದರ್ಭ ಒತ್ತಾಯಿಸುವುದಾಗಿ ಹೇಳಿದರು. ಮರದ ಹಕ್ಕಿನ ಬಗ್ಗೆ ಸರ್ಕಾರದಿಂದ ಸ್ಪಷ್ಟತೆಬೇಕೆಂದು ಒತ್ತಾಯಿಸಿದ ಅವರು ಪಿಂಚಣಿ, ವಿಧವಾ ವೇತನ, ವೃದ್ಧಾಪ್ಯ ವೇತನ, ಅಂಗವಿಕಲ ಭತ್ಯೆ ಸೇರಿದಂತೆ ವಿವಿಧ ಇಲಾಖೆಗಳ ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ದೊರೆಯುತ್ತಿಲ್ಲವೆಂದು ಆರೋಪಿಸಿದರು.
ಪಕ್ಷದ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಮಾತನಾಡಿ ಸರ್ಕಾರದ ತಪ್ಪು ನಿರ್ಧಾರಗಳ ವಿರುದ್ಧ ಹೋರಾಟವನ್ನು ತೀವ್ರಗೊಳಿಸುವುದಾಗಿ ತಿಳಿಸಿದರು. ಜನರು ಕೂಡ ಎಚ್ಚೆತ್ತುಕೊಂಡು ಹೋರಾಟವನ್ನು ಬೆಂಬಲಿಸಬೇಕೆಂದು ಮನವಿ ಮಾಡಿದರು.
ಕೆಪಿಸಿಸಿ ಕಾನೂನು ಘಟಕದ ಅಧ್ಯಕ್ಷ ಎ.ಎಸ್.ಪೊನ್ನಣ್ಣ ಅವರು ಸರ್ಕಾರದ ನಿಲುವುಗಳನ್ನು ಖಂಡಿಸಿದರು. ಹಂತ ಹಂತವಾಗಿ ಪ್ರತಿಭಟನೆಗಳನ್ನು ನಡೆಸುವ ಮೂಲಕ ಸರ್ಕಾರದ ಗಮನ ಸೆಳೆಯಬೇಕೆಂದರು.
ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾಅಚ್ಚಯ್ಯ, ಜಿ.ಪಂ ಸದಸ್ಯರಾದ ಕೆ.ಪಿ.ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಅನಂತ್ ಕುಮಾರ್, ಇಸ್ಮಾಯಿಲ್, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ಪ್ರಮುಖರಾದ ಸನ್ನಿ ಕುಶಾಲಪ್ಪ, ಮುಂಚೂಣಿ ಘಟಕಗಳ ಅಧ್ಯಕ್ಷರುಗಳು, ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು, ಕಿಸಾನ್ ಘಟಕದ ಪದಾಧಿಕಾರಿಗಳು, ಬ್ಲಾಕ್, ಬೂತ್ ಮಟ್ಟದ ಪ್ರಮುಖರು ಹಾಗೂ ಕಾರ್ಯಕರ್ತರು ಸಭೆಯಲ್ಲಿ ಹಾಜರಿದ್ದರು.

error: Content is protected !!