ಕೊಡಗು ಜಿಲ್ಲೆಯಲ್ಲಿ ಉಚಿತ ಆಂಬ್ಯುಲೆನ್ಸ್ ಬ್ರಿಗೇಡ್ ಸೇವೆ ಆರಂಭ

February 27, 2021

ಮಡಿಕೇರಿ ಫೆ.27 : ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಕೊಡಗು ಜಿಲ್ಲೆಯಲ್ಲಿ ಆರಂಭಿಸಲಾಗಿರುವ ಉಚಿತ ಆಂಬ್ಯುಲೆನ್ಸ್ ಬ್ರಿಗೇಡ್ ಸೇವೆಗೆ ಶನಿವಾರ ನಗರದಲ್ಲಿ ಚಾಲನೆ ನೀಡಲಾಯಿತು.
ನಗರದ ಓಂಕಾರೇಶ್ವರ ದೇವಾಲಯದ ಮುಂಭಾಗದಲ್ಲಿ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಮೋಹನ್ ಅವರು ಉಚಿತ ಆಂಬ್ಯುಲೆನ್ಸ್ ಸೇವೆಗೆ ಚಾಲನೆ ನೀಡಿದರು.
ಈ ಸಂದರ್ಭ ಮಾತನಾಡಿದ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಮತ್ತು ಹಿರಿಯ ಹೃದ್ರೋಗ ತಜ್ಞ ಡಾ.ಎಂ.ಎಸ್.ರವಿ ಅವರು, ಸಮಯೋಚಿತ ರೋಗ ನಿರ್ಣಯ ಮತ್ತು ಚಿಕಿತ್ಸೆಯು ಯಾವುದೇ ಕಾಯಿಲೆಯನ್ನು ಗುಣಪಡಿಸುವುದನ್ನು ಸುಲಭಗೊಳಿಸುತ್ತದೆ, ಒಂದು ವೇಳೆ ಚಿಕಿತ್ಸೆ ವಿಳಂಬವಾದರೆ ಹೃದಯಾಘಾತ, ಹೃದಯ ವೈಫಲ್ಯ, ಡಯಾಲಿಸಿಸ್, ಕ್ಯಾನ್ಸರ್, ಪಾಶ್ರ್ವವಾಯು ಇತ್ಯಾದಿಗಳಿಂದ ಬಳಲುತ್ತಿರುವವರಿಗೆ, ಅದು ಮಾರಕವಾಗಬಹುದು. ಇದರಿಂದ ರೋಗಿ ಸಾವನ್ನಪ್ಪುವ ಸಂಭವ ಹೆಚ್ಚಾಗಿರುತ್ತದೆ ಎಂದು ಹೇಳಿದರು.
ಸಾವು ನೋವುಗಳ ಪ್ರಮಾಣವನ್ನು ತಗ್ಗಿಸಲು ಸಮಯೋಚಿತ ಚಿಕಿತ್ಸೆ ಹಾಗೂ ಆರೋಗ್ಯ
ಸೇವೆ ಅತ್ಯಗತ್ಯವಾಗಿದ್ದು, ವಾಸ್ತವವಾಗಿ, ಸಮಯೋಚಿತ ವೈದ್ಯಕೀಯ ಆರೈಕೆಯನ್ನು ನೀಡಿದರೆ ಭಾರತದಲ್ಲಿ ಪ್ರತಿವರ್ಷ ಸಂಭವಿಸುವ ಹಲವಾರು ಸಾವು ನೋವಿನ ಪ್ರಮಾಣವನ್ನು ತಗ್ಗಿಸಬಹುದಾಗಿದೆ. ತುರ್ತು ಸಂದರ್ಭದಲ್ಲಿ ಆಸ್ಪತ್ರೆಗೆ ತಲುಪಲು ತೆಗೆದುಕೂಳ್ಳುವ ಸಮಯವನ್ನು ಕಡಿಮೆ ಮಾಡುವ ಪ್ರಯತ್ನದಲ್ಲಿ ನಾರಾಯಣ
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ‘ಆಂಬ್ಯುಬಲೆನ್ಸ್ ಬ್ರಿಗೇಡ್’ ಎಂಬ ಹೊಸ ಸೇವೆಯನ್ನು ಪ್ರಾರಂಭಿಸಿದೆ. ಈ ಉಪಕ್ರಮದ ಮೂಲಕ, ಜನರಿಗೆ ಗುಣಮಟ್ಟದ ತುರ್ತು ಸೇವೆಗಳಿಗೆ ಸಾಧ್ಯವಾದಷ್ಟು ವೇಗವಾಗಿ ಕರೆದೊಯ್ಯುವುದು ನಮ್ಮ
ಉದ್ದೇಶವಾಗಿದೆ ಎಂದು ಹೇಳಿದರು.
ಸಂಪೂರ್ಣ ಸುಸಜ್ಜಿತವಾದ ಆಂಬ್ಯುಲೆನ್ಸ್‍ನ್ನು ಮಡಿಕೇರಿ ಪಟ್ಟಣದಲ್ಲಿ ಸಜ್ಜುಗೊಳಿಸಲಾಗಿದ್ದು, ಅಗತ್ಯ ಸಂಧರ್ಭದಲ್ಲಿ ಈ ಆಂಬ್ಯುಲೆನ್ಸ್‍ನಲ್ಲಿ ರೋಗಿಯನ್ನು ಮೈಸೂರಿನ ಯಾವುದೇ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಸಾಗಿಸಲಾಗುವುದು. ಈ ಅಂಬುಲೆನ್ಸ್ ಬ್ರಿಗೇಡ್ ಸೇವೆಯು ಸಂಪೂರ್ಣ ಉಚಿತ ಸೇವೆಯಾಗಿದ್ದು, ಅಗತ್ಯವಿರುವವರು 9853998539 ಸಂಖ್ಯೆಗೆ ಕರೆ ಮಾಡಿ ಸೇವೆಯನ್ನು ಪಡೆಯಬಹುದೆಂದು ನುಡಿದರು.
ಮೈಸೂರಿನ ತಮ್ಮ ಆಸ್ಪತ್ರೆಯಲ್ಲಿ ಬಡವರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಪ್ರಸಕ್ತ ಜಾರಿಯಲ್ಲಿರುವ ಸರ್ಕಾರೀ ಆರೋಗ್ಯ ಯೋಜನೆಗಳಾದ ಸಿ.ಜಿ.ಹೆಚ್.ಎಸ್, ಅಯುಷ್ಮಾನ್ ಭಾರತ್- ಅರೋಗ್ಯ ಕರ್ನಾಟಕ ಯೋಜನೆಗಳನ್ನು ಅಂಗೀಕರಿಸಿ ಅರ್ಹ ರೋಗಿಗಳಿಗೆ ಈ ಯೋಜನಗಳಡಿ ಚಿಕಿತ್ಸೆ ನೀಡಲಾಗುವುದು ಎಂದು ಅವರು ಇದೇ ಸಂದರ್ಭ ತಿಳಿಸಿದರು.
ಈ ಸಂದರ್ಭ ಹೃದ್ರೋಗ ತಜ್ನರಾದ ಡಾ.ಕೇಶವಮೂರ್ತಿ.ವಿ, ಡಾ.ಆನಂದ್ ಆನಂದ್‍ಲಿಂಗನ್, ಮೂತ್ರಶಾಸ್ತ್ರ ತಜ್ಞ ಡಾ.ಮಂಜುನಾಥ್, ಫೆಸಿಲಿಟಿ ನಿರ್ದೇಶಕ ಪ್ರಶಾಂತ್ ದೇಸಾಯಿ, ಮಾರುಕಟ್ಟೆ ಮುಖ್ಯಸ್ಮ ಕೆ.ವಿ.ಕಾಮತ್ ಹಾಜರಿದ್ದರು.
ಆಂಬ್ಯುಲೆನ್ಸ್‍ನ ವಿಶೇಷತೆಗಳು: ಬಿಪಿ ಉಪಕರಣ, ಸ್ಟ್ರೆಚರ್, ಬಾಗಿಕೊಳ್ಳಬಹುದಾದ ಚಕ್ರ ಕುರ್ಚಿ, ಪ್ರಾಥಮಿಕ ಎಐಡಿ ಕಿಟ್, ಸ್ಟೆತೋಸ್ಕೋಪ್, ಆಮ್ಲಜನಕ ಸಿಲಿಂಡರ್, ಅಂಬು ಬ್ಯಾಗ್ (ಮಕ್ಕಳ / ವಯಸ್ಕರ) ಫಿಂಗರ್‍ಟಿಪ್ ಪಲ್ಸ್ ಆಕ್ಸಿ ಮೀಟರ್ ಅಳವಡಿಸಿರುವ
ಈ ಅತ್ಯಾಧುನಿಕ ಅಂಬುಲೆನ್ಸ್ 24*7 ಸೇವಗೆ ಲಭ್ಯವಿರುತ್ತದೆ. ಹೃದಯ ರಕ್ತನಾಳದ ಕಾಯಿಲೆಗಳ ಇತಿಹಾಸ ಅಥವಾ ಯಾವುದೇ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ,
ಪಾರ್ಶವಾಯು ಮತ್ತು ಆಘಾತ ಪ್ರಕರಣಗಳಂತಹ ಸ್ಥಿತಿಯಲ್ಲಿರುವವರಿಗೆ ಇದು ವರದಾನವಾಗಲಿರುವುದಾಗಿ ಹೇಳಲಾಗಿದೆ.

error: Content is protected !!