ಸರಕಾರದಿಂದ ಹಣ ಬಿಡುಗಡೆ : ಪ್ರತಿಭಟನೆ ಕೈಬಿಟ್ಟ ಗುತ್ತಿಗೆದಾರರು

ಮಡಿಕೇರಿ ಮಾ. 1 : ಕೊಡಗು ಜಿಲ್ಲಾ ಗುತ್ತಿಗೆದಾರರ ಸಮಸ್ಯೆಗೆ ಸ್ಪಂದಿಸಿ ಶೇ.75 ರಷ್ಟು ಬಿಲ್ ಪಾವತಿಯಾಗಲು ಜಿಲ್ಲಾಡಳಿತ ಹಾಗೂ ಸರಕಾರ ಅನುವು ಮಾಡಿಕೊಟ್ಟಿದ್ದು, ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಹಮ್ಮಿಕೊಳ್ಳಲು ಉದ್ದೇಶಿಸಿದ್ದ ಕೆಲಸ ಸ್ಥಗಿತ ಪ್ರತಿಭಟನೆಯನ್ನು ಕೈಬಿಡಲಾಗಿದೆ ಎಂದು ಕೊಡಗು ಜಿಲ್ಲಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಎ.ರವಿಚಂಗಪ್ಪ ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018 ಹಾಗೂ 2019ರಲ್ಲಿ ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ ರಸ್ತೆಗಳೆಲ್ಲ ಕುಸಿದು ಭಾರೀ ತೊಂದರೆಯುಂಟಾಗಿತ್ತು. ಈ ಸಂದರ್ಭ ಸರಕಾರ ಮಳೆಹಾನಿ ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಗೊಂಡಿದ್ದು, ಜಿಲ್ಲೆಯ ಎಲ್ಲಾ ಗುತ್ತಿಗೆದಾರರು ಸೇರಿ ಎರಡು ವರ್ಷಗಳಲ್ಲಿ ಕೊಚ್ಚಿ ಹೋಗಿದ್ದ ರಸ್ತೆ, ಸೇತುವೆ ಮತ್ತು ತಡೆಗೋಡೆಗಳನ್ನು ಹಗಲು ರಾತ್ರಿಯೆನ್ನದೆ ಕಾಮಗಾರಿಗಳನ್ನು ನಿರ್ವಹಿಸಿ ಎಲ್ಲಾ ರಸ್ತೆ ಸೇತುವೆಗಳನ್ನು ಯಥಾಸ್ಥಿತಿಗೆ ತಂದು ವಾಹನ ಹಾಗೂ ನಾಗರಿಕರಿಗೆ ಸಂಚರಿಸಲು ಅನುವು ಮಾಡಿಕೊಟ್ಟಿದ್ದರು.
ಆದರೆ ಈ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಸ್ವಲ್ಪ ಬಿಲ್ ಮೊತ್ತವನ್ನು ಪಾವತಿಸಿ,ಇನ್ನುಳಿದ ಬಿಲ್ ಮೊತ್ತವನ್ನು ಶೇ.25ರ ಅನುಪಾತದಲ್ಲಿ ಬಿಡುಗಡೆ ಮಾಡಬೇಕೆಂದು ಆದೇಶ ಹೊರಡಿಸಿತ್ತು. ಇದರಿಂದಾಗಿ ಗುತ್ತಿಗೆದಾರರು ಮುಂದಿನ ಕಾಮಗಾರಿಗಳನ್ನು ನಿರ್ವಹಿಸಲು ಸಮಸ್ಯೆಯಾಗಿತ್ತಲ್ಲದೆ, ಅವರ ಜೀವನೋಪಾಯಕ್ಕೂ ಕೂಡ ತೊಂದರೆ ಅನುಭವಿಸುವಂತಾಗಿತ್ತು ಎಂದು ವಿವರಿಸಿದರು.
ಈ ಕುರಿತು ಗುತ್ತಿಗೆದಾರರ ಸಂಘದ ವತಿಯಿಂದ ಸಮಸ್ಯೆಗಳನ್ನು ಜಿಲ್ಲಾಡಳಿತದ ಗಮನನಕ್ಕೆ ತರಲಾಗಿತ್ತಲ್ಲದೆ,ಫೆ.19ರಂದು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಹಣ ಬಿಡುಗಡೆಯಾಗದಿದ್ದಲ್ಲಿ ಕೆಲಸ ಸ್ಥಗಿತಗೊಳಿಸುವ ಎಚ್ಚರಿಕೆಯನ್ನೂ ನೀಡಲಾಗಿತ್ತು ಎಂದು ರವಿಚಂಗಪ್ಪ ತಿಳಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಚರ್ಚಿಸಿದ ನಂತರ ಸರ್ಕಾರದ ಗಮನ ಸೆಳೆದು ಗುತ್ತಿಗೆದಾರರಿಗೆ ಪಾವತಿಸಬೇಕಾದ ಬಿಲ್ ಮೊತ್ತದಲ್ಲಿ ಶೇ.75ರಷ್ಟು ಹಣವನ್ನು ಕಾಮಗಾರಿ ನಿರ್ವಹಿಸಿದ ಎಲ್ಲಾ ಗುತ್ತಿಗೆದಾರರಿಗೆ ನೀಡುವಂತೆ ಆದೇಶಿಸಿದ್ದಾರೆ.ಅಲ್ಲದೆ ಈಗಾಗಲೇ ಬಿಡುಗಡೆಯಾಗಬೇಕಿದ್ದ 40 ಕೋಟಿ ರೂ.ಬಾಕಿ ಮೊತ್ತದ ಪೈಕಿ 10 ಕೋಟಿ ರೂ.ಗಳನ್ನು ಸರಕಾರ ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಿದ್ದು, ಇದರಿಂದಾಗಿ ಕಾಮಗಾರಿಗಳನ್ನು ನಿರ್ವಹಿಸಿದ ಗುತ್ತಿಗೆದಾರರಿಗೆ ಕಾಮಗಾರಿಗಳನ್ನು ಮುಂದುವರೆಸಲು ಅನುಕೂಲವಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಇನ್ನೆರಡು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿರುವುದರಿಂದ ಗುತ್ತಿಗೆದಾರರು ನಡೆಸಲುದ್ದೇಶಿಸಿದ್ದ ಕೆಲಸ ಸ್ಥಗಿತ ಪ್ರತಿಭಟನೆಯನ್ನು ಕೈಬಿಟ್ಟಿರುವುದಾಗಿ ಸ್ಪಷ್ಟಪಡಿಸಿದರು.
ಗುತ್ತಿಗೆದಾರರ ಮನವಿಗೆ ಸ್ಪಂದಿಸಿ ಸಹಕರಿಸಿದ ಜಿಲ್ಲಾಧಿಕಾರಿಗಳಿಗೆ ಹಾಗೂ ರಾಜ್ಯದ ಮುಖ್ಯಮಂತ್ರಿಯವರಾದ ಬಿ.ಎಸ್. ಯಡಿಯೂರಪ್ಪ ಅವರಿಗೆ ಕೊಡಗು ಜಿಲ್ಲಾ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ಸಂಘದ ವತಿಯಿಂದ ಅಭಿನಂದನೆಗಳನ್ನು ಸಲ್ಲಿಸುವುದಾಗಿ ಹೇಳಿದ ರವಿ ಚಂಗಪ್ಪ ಅವರು, ಮುಖ್ಯಮಂತ್ರಿಯವರು ಕೊಡಗಿಗೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವ ಮೂಲಕ ಮಳೆಗಾಲಕ್ಕೆ ಮುನ್ನ ಅಭಿವೃದ್ಧಿ ಕಾಮಗಾರಿಗಳು ಪೂರ್ಣವಾಗಲು ಸಹಕರಿಸಬೇಕೆಂದು ಮನವಿ ಮಾಡಿದರು.
ಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಆರ್ ರವಿ ಕುಮಾರ್,ಮಡಿಕೇರಿ ತಾಲೂಕು ಅಧ್ಯಕ್ಷ ಬಿ.ಪಿ.ರಾಜೀವಲೋಚನ, ಕಾರ್ಯದರ್ಶಿ ಕೆ.ಬಿ.ಪೂಣಚ್ಚ,ನಿರ್ದೇಶಕ ಬಿ.ಎಸ್.ಡಾಲಿ ಹಾಜರಿದ್ದರು.

