ಎಸಿಬಿ ರದ್ದು ಮಾಡಿ ಲೋಕಾಯುಕ್ತವನ್ನು ಸಕ್ರಿಯಗೊಳಿಸಿ : ಕೊಡಗು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ಒತ್ತಾಯ

March 1, 2021

ಮಡಿಕೇರಿ ಮಾ.1 : ಭ್ರಷ್ಟಾಚಾರ ನಿಗ್ರಹ ದಳವನ್ನು ರದ್ದುಗೊಳಿಸಿ ಲೋಕಾಯುಕ್ತ ಸಂಸ್ಥೆಯನ್ನು ಸಕ್ರಿಯಗೊಳಿಸಬೇಕೆಂದು ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆಯ ಕೊಡಗು ಜಿಲ್ಲಾ ಘಟಕ ಒತ್ತಾಯಿಸಿದೆ.
ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ ವೇದಿಕೆಯ ಪ್ರಮುಖರು, ಮುಖ್ಯಮಂತ್ರಿಗಳು ಚುನಾವಣೆಯ ಸಂದರ್ಭ ನೀಡಿದ್ದ ಭರವಸೆಯನ್ನು ತಕ್ಷಣ ಈಡೇರಿಸಬೇಕೆಂದು ಆಗ್ರಹಿಸಿದರು.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ಚುನಾವಣೆ ವೇಳೆ ಸರ್ಕಾರದ ಹಿಡಿತದಲ್ಲಿರುವ ಎಸಿಬಿಯನ್ನು ಮುಖ್ಯಮಂತ್ರಿಯಾದ ಮರುಕ್ಷಣ ರದ್ದು ಮಾಡಿ ಲೋಕಾಯುಕ್ತ ಸಂಸ್ಥೆಗೆ ಮತ್ತಷ್ಟು ಶಕ್ತಿ ತುಂಬುವುದಾಗಿ ಹೇಳಿದ್ದರು.
ಆದರೆ ಸಿಎಂ ಪದವಿಗೇರಿ ಸುಮಾರು 2 ವರ್ಷ ಕಳೆದರೂ ಎಸಿಬಿಯನ್ನು ರದ್ದು ಮಾಡಿಲ್ಲ, ಲೋಕಾಯುಕ್ತ ಸಂಸ್ಥೆಗೆ ಪೂರ್ಣ ಸ್ವಾತಂತ್ರ್ಯ ನೀಡಿಲ್ಲ ಎಂದು ಆರೋಪಿಸಿದರು.
ತಕ್ಷಣ ಮುಖ್ಯಮಂತ್ರಿಗಳು ತಾವು ನೀಡಿದ ಭರವಸೆಯಂತೆ ನಡೆದುಕೊಂಡು ಲೋಕಾಯುಕ್ತ ಸಂಸ್ಥೆಗೆ ಈ ಹಿಂದಿನ ಲೋಕಾಯುಕ್ತರಾದ ವೆಂಕಟಾಚಲ, ಸಂತೋಷ್ ಹೆಗ್ಗಡೆ, ಉಪಲೋಕಾಯುಕ್ತ ಸುಭಾಷ್ ಬಿ.ಆಡಿಯವರಂತಹ ದಕ್ಷ ಅಧಿಕಾರಿಗಳನ್ನು ನೇಮಕ ಮಾಡುವ ಮೂಲಕ ಶಕ್ತಿ ತುಂಬಬೇಕು ಮತ್ತು ಎಸಿಬಿಯನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಿದರು.
ಈ ಹಿಂದೆ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಬಳ್ಳಾರಿಗೆ ಪಾದಯಾತ್ರೆ ಮಾಡಿ ಅಧಿಕಾರಕ್ಕೆ ಬಂದರೆ ಗಣಿ ಹಗರಣಗಳ ವಿರುದ್ಧ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿ ಅಧಿಕಾರಕ್ಕೆ ಬಂದರು. ಆದರೆ ಮುಖ್ಯಮಂತ್ರಿಗಳಾದ ನಂತರ ಭರವಸೆಯನ್ನು ಈಡೇರಿಸಿಲ್ಲ, ಈ ಕಾರಣದಿಂದ ಮತ್ತೆ ಮುಖ್ಯಮಂತ್ರಿಯಾಗಲು ಅವರಿಗೆ ಜನ ಅವಕಾಶ ನೀಡಲಿಲ್ಲ. ಅಲ್ಲದೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಸ್ತಿತ್ವ ಕಳೆದುಕೊಳ್ಳುತ್ತಾ ಬರುತ್ತಿದೆ. ಇದನ್ನು ಮನಗಂಡು ಈಗಿನ ಮುಖ್ಯಮಂತ್ರಿಗಳು ನುಡಿದಂತೆ ನಡೆದುಕೊಳ್ಳಲಿ ಎಂದು ಪ್ರಮುಖರು ಆಗ್ರಹಿಸಿದರು.
ಮಡಿಕೇರಿ ತಾಲ್ಲೂಕು ಅಧ್ಯಕ್ಷ ಅಜಿತ್ ಕೊಟ್ಟಕೇರಿಯನ, ಉಪಾಧ್ಯಕ್ಷ ಪ್ರದೀಪ್ ಮರಗೋಡು, ಪ್ರಧಾನ ಕಾರ್ಯದರ್ಶಿ ಯೋಗೇಶ್ ಟಿ.ನೆಕ್ಕಿಲ, ಕಾರ್ಯದರ್ಶಿ ಉಮೇಶ್ ಗೌಡ ಹಾಗೂ ಸದಸ್ಯರು ಮನವಿ ನೀಡುವ ಸಂದರ್ಭ ಹಾಜರಿದ್ದರು.

error: Content is protected !!