ಸೋಮವಾರಪೇಟೆಯಲ್ಲಿ ಸರಣಿ ಬೈಕ್ ಕಳ್ಳತನ : ಆರೋಪಿ ಬಂಧನ

March 1, 2021

ಸೋಮವಾರಪೇಟೆ ಮಾ.1 : ಸೋಮವಾರಪೇಟೆ ಸುತ್ತ ಮುತ್ತ ಸರಣಿ ಬೈಕ್ ಕಳವು ಮಾಡುತ್ತಿದ್ದ ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸುವಲ್ಲಿ ಸೋಮವಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೋಮವಾರಪೇಟೆಯ ಗಾಂಧಿ ನಗರ ನಿವಾಸಿ ಸಂಜಯ್ ಕುಮಾರ್(22) ಬಂಧಿತ ಆರೋಪಿ.
ಇತ್ತೀಚೆಗೆ ಸೋಮವಾರಪೇಟೆ ಸುತ್ತಮುತ್ತಲಿನಲ್ಲಿ ನಿಲ್ಲಿಸಿದ್ದ ಬೈಕ್ ಗಳನ್ನು ಕಳವು ಮಾಡುತ್ತಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣಗಳು ದಾಖಲಾಗಿತ್ತು.
ಕಾರ್ಯ ಪ್ರವೃತ್ತರಾದ ಸೋಮವಾರಪೇಟೆ ವೃತ್ತದ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಸರಣಿ ಬೈಕ್ ಕಳವು ಮಾಡುತ್ತಿದ್ದ ಆರೋಪಿಯನ್ನು ಬಂಧಿಸಿದ್ದಾರೆ. ಸುಮಾರು 2.61 ಲಕ್ಷ ರೂ. ಮೌಲ್ಯದ ಮೂರು ಟಿ.ವಿ.ಎಸ್. ಹಾಗೂ ಒಂದು ಹೀರೋ ಹೋಂಡಾ ಬೈಕ್ ಸೇರಿ 4 ಬೈಕ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಸಂಜಯ್ ಕುಮಾರ್ ವಿರುದ್ಧ ಸೋಮವಾರಪೇಟೆ, ಕುಶಾಲನಗರ ಪೊಲೀಸ್ ಠಾಣೆಗಳಲ್ಲಿ ಈ ಹಿಂದೆ ಹಲವು ಮನೆ ಕಳವು ಪ್ರಕರಣಗಳು ದಾಖಲಾಗಿದೆ. 12 ಕಳವು ಪ್ರಕರಣಗಳಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸಿದ್ದು, ಕಳೆದ ತಿಂಗಳು ಮಡಿಕೇರಿ ಜೈಲಿನಿಂದ ಈತ ಬಿಡುಗಡೆಯಾಗಿದ್ದ.
ಎಸ್.ಪಿ ಕ್ಷಮಾ ಮಿಶ್ರಾ ಅವರ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕರಾದ ಹೆಚ್.ಎಂ. ಶೈಲೇಂದ್ರ, ರವರ ನೇತೃತ್ವದಲ್ಲಿ ಸೋಮವಾರಪೇಟೆ ವೃತ್ತ ನಿರೀಕ್ಷಕರಾದ ಮಹೇಶ್ ಬಿ.ಜಿ., ಹಾಗೂ ಸೋಮವಾರಪೇಟೆ ಪೊಲೀಸ್ ಠಾಣೆಯ ಪಿ.ಎಸ್.ಐ. ಶ್ರೀಧರ್.ಎಂ.ಸಿ., ಸಹಾಯಕ ಪೊಲೀಸ್ ಉಪ ನಿರೀಕ್ಷಕರಾದ ಖತೀಜಾ. ಮತ್ತು ಸಿಬ್ಬಂದಿಗಳಾದ ಶಶಿಧರ್, ಶಿವಕುಮಾರ್ ಮಧು, ಪ್ರವೀಣ್, ಬಸಪ್ಪ, ನವೀನ್ ಕುಮಾರ್, ಜಗದೀಶ್, ಕೇಶವ, ಧನಲಕ್ಷ್ಮಿ, ವೀಣಾ, ಚಾಲಕ ಹರ್ಷಿತ್ ಹಾಗೂ ಉಪ ವಿಭಾಗದ ಕ್ರೈಂ ಸಿಬ್ಬಂದಿ ದಯಾನಂದ್ ಹಾಗೂ ಸಿಡಿಆರ್’ ಘಟಕದ ಗಿರೀಶ್ ಹಾಗೂ ರಾಜೇಶ್ ಪಾಲ್ಗೊಂಡಿದ್ದರು. ತಂಡದ ಕಾರ್ಯಾಚರಣೆಯನ್ನು ಎಸ್.ಪಿ ಕ್ಷಮಾ ಮಿಶ್ರ ಶ್ಲಾಘಿಸಿದ್ದಾರೆ.

error: Content is protected !!