ಕೆದಕಲ್ ಶ್ರೀಭದ್ರಕಾಳಿ ದೇವಿ ಶಕ್ತಿಗೆ ಸಾಕ್ಷಿಯಾಯಿತು ಈ ಘಟನೆ

March 1, 2021

ಮಡಿಕೇರಿ ಮಾ.1 : ಹಸಿರ ಪರಿಸರದ ಕೊಡಗು ಜಿಲ್ಲೆ ದೈವ ಶಕ್ತಿಗಳ ನೆಲೆಬೀಡು ಎನ್ನುವ ಮಾತಿದೆ. ಅನೇಕ ದೇವರಕಾಡಿನ ಆಸುಪಾಸಿನಲ್ಲಿ ದೇವರ ಗುಡಿಗಳಿವೆ, ದೈವ ಶಕ್ತಿಯೂ ಅಲ್ಲಿದೆ.
ದೇವರಕಾಡು ವ್ಯಾಪ್ತಿಗೆ ಒಳಪಡುವ ಮಡಿಕೇರಿ ಸಮೀಪದ ಕೆದಕಲ್ ಶ್ರೀಭದ್ರಕಾಳಿ ದೇವಾಲಯ ಹಲವು ಪವಾಡಗಳಿಗೆ ಹೆಸರುವಾಸಿಯಾಗಿದೆ. ಈ ಹೆದ್ದಾರಿಯಲ್ಲಿ ಸಾಗುವ ಪ್ರತಿಯೊಂದು ವಾಹನ ಚಾಲಕರು ರಸ್ತೆ ಬದಿಯಲ್ಲೇ ದೇವಿಗೆ ನಮಿಸಿ, ಕಾಣಿಕೆ ಸಲ್ಲಿಸಿ ಭಕ್ತಿಭಾವ ಮೆರೆಯುತ್ತಾರೆ.
ರಸ್ತೆ ಬದಿಯಲ್ಲಿರುವ ಕಾಣಿಕೆ ಹುಂಡಿಯಲ್ಲಿ ಭಕ್ತರ ಕಾಣಿಕೆ ಪ್ರತಿದಿನ ಸಲ್ಲಿಕೆಯಾಗುತ್ತದೆ. ಆದರೆ ಯಾರೋ ಚೋರರು ಭಾನುವಾರ ರಾತ್ರಿ ಈ ಹುಂಡಿಗೆ ಕನ್ನ ಹಾಕಿದ್ದಾರೆ. ಹುಂಡಿ ಇದ್ದ ಭಾಗವನ್ನು ಹಾನಿಗೊಳಿಸಿದ್ದಾರೆ.
ಸಾವಿರಾರು ರೂಪಾಯಿ ಇರಬಹುದೆಂದು ಕನ್ನ ಹಾಕಿದ ಕಳ್ಳರಿಗೆ ಅಲ್ಲಿ ಸಿಕ್ಕಿದ್ದು ಚಿಲ್ಲರೆ ಕಾಸು ಮಾತ್ರ. ಇದಕ್ಕೂ ಒಂದು ಕಾರಣವಿದೆ, ಯಾಕೆಂದರೆ ದೇವಾಲಯ ಸಮಿತಿಯ ಪದಾಧಿಕಾರಿಗಳು ಭಾನುವಾರ ಸಂಜೆಯೇ ಹುಂಡಿಯಲ್ಲಿದ್ದ ಕಾಣಿಕೆಯ ಹಣವನ್ನು ತೆಗೆದು ದೇವಾಲಯದ ಸುಪರ್ದಿಗೆ ಪಡೆದಿದ್ದರು.
ಸ್ಥಳೀಯರ ಅಭಿಪ್ರಾಯದ ಪ್ರಕಾರ ಇದು ಶ್ರೀಭದ್ರಕಾಳಿ ದೇವಿಯ ಪ್ರಭಾವ. ಇದು ಚೋರರ ಎರಡನೇ ಪ್ರಯತ್ನವಾಗಿದ್ದು, ಯಾರಿಗೂ ಕಾಣಿಕೆಯ ದೊಡ್ಡ ಮೊತ್ತ ದೊರೆತ್ತಿಲ್ಲ. ಇಲ್ಲೇ ಇರುವ ಸಿಸಿ ಕ್ಯಾಮರಾದಲ್ಲಿ ಎಲ್ಲಾ ದೃಶ್ಯಾವಳಿಗಳು ಸೆರೆಯಾಗಿದ್ದು, ಚೋರನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಶ್ರೀಭದ್ರಕಾಳಿ ದೇವಿಯ ರಾತ್ರಿ ಸಂಚಾರದ ಬಗ್ಗೆ ಅನೇಕ ಚಾಲಕರು ಉಲ್ಲೇಖಿಸಿದ್ದಾರೆ.

error: Content is protected !!