ರಾಜ್ಯಮಟ್ಟದ ವಿಜ್ಞಾನ ರಸಪ್ರಶ್ನೆ ಸ್ಪರ್ಧೆ : ವರ್ಷಿತಾ ಗೆ ದ್ವಿತೀಯ ಸ್ಥಾನ

March 2, 2021

ಮಡಿಕೇರಿ, ಮಾ.2 : ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ( ಕೆ.ಜಿ. ವಿ.ಎಸ್.) ವತಿಯಿಂದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಸಂಘಟಿಸಿದ್ದ ರಾಜ್ಯಮಟ್ಟದ ಸರ್ ಸಿ.ವಿ.ರಾಮನ್ ಆನ್ ಲೈನ್ ವಿಜ್ಞಾನ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯ ಅತ್ತೂರು( ಹಾರಂಗಿ) ಜ್ಞಾನಗಂಗಾ ವಸತಿ ಶಾಲೆಯ 9 ನೇ ತರಗತಿ ವಿದ್ಯಾರ್ಥಿನಿ ವರ್ಷಿತಾ ಬಿ.ದಿನೇಶ್ ದ್ವಿತೀಯ ಸ್ಥಾನ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ.
ರಾಜ್ಯಮಟ್ಟದ ಅಂತಿಮ ಸುತ್ತಿನ ಸ್ಪರ್ಧೆಯಲ್ಲಿ ರಾಯಚೂರಿನ ವಂಶಿಕೃಷ್ಣ ಪ್ರಥಮ ಸ್ಥಾನ ಗಳಿಸಿದರೆ , ಕೊಡಗಿನ ಹರ್ಷಿತಾ ಬಿ.ದಿನೇಶ್ ದ್ವಿತೀಯ ಸ್ಥಾನ ಗಳಿಸಿ ಬಹುಮಾನ ಪಡೆದಿದ್ದಾರೆ ಎಂದು ರಸಪ್ರಶ್ನೆ ಸ್ಪರ್ಧೆ ಯ ಜಿಲ್ಲಾ ಸಂಯೋಜಕ ವಿಲ್ಫ್ರೆಡ್ ಕ್ರಾಸ್ತಾ ತಿಳಿಸಿದ್ದಾರೆ.
ಇದಕ್ಕೂ ಮುನ್ನ ನಡೆದ ಜಿಲ್ಲಾ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ವರ್ಷಿತಾ ಪ್ರಥಮ ಸ್ಥಾನ ಗಳಿಸಿ ರಾಜ್ಯ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದರು. ಜಿಲ್ಲಾಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಜಿಲ್ಲೆಯಿಂದ 38 ಸ್ಪರ್ಧಿಗಳು ಭಾಗವಹಿಸಿದ್ದರು.
ರಾಜ್ಯ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುವ ವರ್ಷಿತಾ, ಕುಶಾಲನಗರದ ನಿವಾಸಿಗಳಾದ ಗೌಡಳ್ಳಿ ಪ್ರೌಢಶಾಲೆಯ ಗಣಿತ ಶಿಕ್ಷಕ ಬಿ.ಬಿ.ದಿನೇಶ್ ಹಾಗೂ ಅತ್ತೂರು ಜ್ಞಾನಗಂಗಾ ಶಾಲೆಯ ವಿಜ್ಞಾನ ಶಿಕ್ಷಕಿ ಎಂ.ಪಿ. ರಜನಿ ದಂಪತಿಯ ಪುತ್ರಿ.

error: Content is protected !!