ಮಾ.8 ರಂದು “ಉಸಾರ್” ಕೊಡವ ಚಲನಚಿತ್ರ ಬಿಡುಗಡೆ

March 2, 2021

ಮಡಿಕೇರಿ ಮಾ.2 : ಪಿ ಅಂಡ್ ಜಿ ಕ್ರಿಯೇಷನ್ ನಿರ್ಮಿಸಿರುವ ಸಾಮಾಜಿಕ ಕಳಕಳಿಯ ಮತ್ತು ಯುವ ಮನಸ್ಸುಗಳ ಮೇಲೆ ಬೆಳಕು ಚೆಲ್ಲಿರುವ “ಉಸಾರ್” ಇದ್ ಕಾಲತ್‍ರ ಕಳಿ….” ಕೊಡವ ಚಲನಚಿತ್ರ ಮಾ.8 ರಂದು ನಾಪೋಕ್ಲುವಿನಲ್ಲಿ ಬಿಡುಗಡೆಯಾಗಲಿದೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿತ್ರ ತಂಡದ ಪ್ರಮುಖರು ವಿಭಿನ್ನ ಕಥಾ ವಸ್ತುವೊಂದು ಚಲನಚಿತ್ರವಾದ ಬಗ್ಗೆ ಮಾಹಿತಿ ನೀಡಿದರು.
ನಾಪೋಕ್ಲುವಿನ ಶ್ರೀರಾಮಮಂದಿರದ ಸಭಾಂಗಣದಲ್ಲಿ ಬೆಳಗ್ಗೆ 11 ಗಂಟೆಗೆ ಚಿತ್ರ ಬಿಡುಗಡೆಯಾಗಲಿದ್ದು, ಮಾ.10ರ ವರೆಗೆ ಪ್ರತಿದಿನ ಬೆಳಗ್ಗೆ 11 ಗಂಟೆ, ಮಧ್ಯಾಹ್ನ 2 ಮತ್ತು 6 ಗಂಟೆಗೆ ಮೂರು ಪ್ರದರ್ಶನವಿರುತ್ತದೆ. ನಂತರದ ದಿನಗಳಲ್ಲಿ ಜಿಲ್ಲೆಯ ವಿವಿಧ ಭಾಗಗಳಲ್ಲಿ ಚಿತ್ರ ಪ್ರದರ್ಶನ ಕಾಣಲಿದೆ. ಚಿತ್ರದ ಪ್ರೀಮಿಯರ್ ಶೋ ಮಾ.5 ರಂದು ಹೊದ್ದೂರಿನ ಪ್ರತಿಷ್ಠಿತ ರೆಸಾರ್ಟ್‍ವೊಂದರÀಲ್ಲಿ ನಡೆಯಲಿದೆ.
ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಇಂದಿನ ಯುವಕ, ಯುವತಿಯರಲ್ಲಿ ಜಾಗೃತಿ ಮೂಡಿಸುವ ಮತ್ತು ಸಮಾಜಕ್ಕೊಂದು ಉತ್ತಮ ಸಂದೇಶ ನೀಡುವ ಪ್ರಯತ್ನವನ್ನು “ಉಸಾರ್” ಮೂಲಕ ಮಾಡಲಾಗಿದೆ ಎಂದು ಪ್ರಮುಖರು ತಿಳಿಸಿದರು.
ನಿರ್ಮಾಪಕರಾಗಿ ರಮ್ಯ ನಾಣಯ್ಯ ಕಾರ್ಯನಿರ್ವಹಿಸಿದ್ದು, ಬಾಳೆಯಡ ಪ್ರತೀಶ್ ಪೂವಯ್ಯ ಹಾಗೂ ಆಚೇಯಡ ಗಗನ್ ಗಣಪತಿ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ಸಹ ನಿರ್ಮಾಪಕರಗಿಯೂ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ ಇಬ್ಬರೂ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ಸುಮಾರು 100 ಕ್ಕೂ ಹೆಚ್ಚಿನ ಕಲಾವಿದರು ಅಭಿನಯಿಸಿದ್ದಾರೆ. ಗುಣಮಟ್ಟದ ಚಿತ್ರವನ್ನು ತೆರೆಯ ಮೇಲೆ ತರಬೇಕೆನ್ನುವ ಉದ್ದೇಶದಿಂದ ಏಳು ತಿಂಗಳುಗಳ ಕಾಲ ಚಿತ್ರೀಕರಣ ಮಾಡಲಾಗಿದೆ ಎಂದು ನಿರ್ದೇಶಕ ಪ್ರತೀಶ್ ಪೂವಯ್ಯ ತಿಳಿಸಿದರು. ಜಿಲ್ಲೆಯ ವಿವಿಧೆಡೆ ಇರುವ ಕೊಡವ ಸಮಾಜಗಳು ಮತ್ತಿತರ ಸಭಾಂಗಣದಲ್ಲಿ ಚಿತ್ರ ಪ್ರದರ್ಶನವಾಗಲಿದೆ ಎಂದರು.
ಚಿತ್ರದಲ್ಲಿ ಮೂರು ಹಾಡುಗಳಿದ್ದು, ಅಮ್ಮುಣಿಚಂಡ ಪ್ರವೀಣ್ ಚೆಂಗಪ್ಪ, ಚೊಟ್ಟಂಡ ಪ್ರಭು ಹಾಗೂ ಚೊಟ್ಟೆಯಂಡಮಾಡ ವಿಜು ಸಾಹಿತ್ಯ ಬರೆದಿದ್ದಾರೆ. ರಿಮೇಕ್ ಸಂಗೀತಕ್ಕೆ ಮಾರು ಹೋಗದೆ ಹೊಸ ರೀತಿಯ ರಾಗ ಸಂಯೋಜನೆ ಮಾಡಲಾಗಿದೆ.
ವಿರಾಜಪೇಟೆಯ ಟಿ.ಡಿ.ಮೋಹನ್ ಸಂಗೀತ ನೀಡಿದ್ದು, ಸಂಕೇತ್ ಶಿವಪ್ಪ ಸಂಕಲನ ಮಾಡಿದ್ದಾರೆ. ಬಿಜೆಎಂ ಆಗಿ ವಿಲ್ಸನ್ ಗೊನ್ಸಾಲ್‍ವಿಸ್ ಕಾರ್ಯ ನಿರ್ವಹಿಸಿದ್ದು, ಜಾರಿಮಂಡ ಬೋಪಣ್ಣ ನಿರ್ವಹಣಾ ವ್ಯವಸ್ಥಾಪಕರಾಗಿದ್ದಾರೆ. ಛಾಯಗ್ರಾಹಕರಾಗಿ ವಿರಾಜಪೇಟೆಯ ಪಾಪು, ನೃತ್ಯ ಸಂಯೋಜಕರಾಗಿ ಮಲ್ಲಮಾಡ ಶಾಮಲ ಸುನೀಲ್ ಹಾಗೂ ಮುಂಡಚಾಡಿರ ರಿನ್ನಿ ಭರತ್ ಕಾರ್ಯನಿರ್ವಹಿಸಿದ್ದಾರೆ.
ಜಿಲ್ಲೆಯ ಸುಂದರ ತಾಣಗಳಾದ ಚೆಂಬೆಬೆಳ್ಳೂರು, ವಿರಾಜಪೇಟೆ, ತಾಳತ್ತಮನೆ, ಬೇತ್ರಿ, ಮಡಿಕೇರಿ, ಕಕ್ಕಬ್ಬೆ, ಬಿರುನಾಣಿ, ಟಿ.ಶೆಟ್ಟಿಗೇರಿ, ಹೊದ್ದೂರು, ನಾಪೋಕ್ಲು ಸೇರಿದಂತೆ ಮೈಸೂರಿನ ಹಲವು ಭಾಗಗಳಲ್ಲಿ “ಉಸಾರ್” ಚಿತ್ರವನ್ನು ಚಿತ್ರೀಕರಿಸಲಾಗಿದೆ. ಕೊಡವ ಸಿನಿಮಾದಲ್ಲಿ ಇದೇ ಮೊದಲ ಬಾರಿಗೆ ಪೊಲೀಸ್ ಠಾಣೆ ಮತ್ತು ನ್ಯಾಯಾಲಯದ ಮಾದರಿ ಸೆಟ್ ನ್ನು ಬಳಸಲಾಗಿದೆ ಎಂದು ಮತ್ತೊಬ್ಬ ನಿರ್ದೇಶಕ ಗಗನ್ ಗಣಪತಿ ತಿಳಿಸಿದರು.
ಸಿನಿಮಾದಲ್ಲಿ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದ್ದು, ಇಬ್ಬರು ನಾಯಕರು ಹಾಗೂ ಇಬ್ಬರು ನಾಯಕಿಯರಿದ್ದಾರೆ. ಬಲ್ಲಾರಂಡ ರಾಜೇಶ್, ಅಮ್ಮಾಟಂಡ ದಿಲೀಪ್ ನಾಯಕ ನಟರಾಗಿ ಮತ್ತು ಕುಪ್ಪಣಮಾಡ ಭೂಮಿಕಾ ಹಾಗೂ ತಾತಂಡ ಮೋನಿಕಾ ನಾಯಕಿಯರಾಗಿ ತಮ್ಮ ಪಾತ್ರಗಳಿಗೆ ಜೀವ ತುಂಬಿದ್ದಾರೆ ಎಂದು ಅವರು ಹೇಳಿದರು.
ಚಿತ್ರದಲ್ಲಿ ತಾತಂಡ ಪ್ರಭಾ ನಾಣಯ್ಯ, ಪಟ್ಟಡ ಧನು ರಂಜನ್, ಕೋಳೇರ ಸನ್ನು ಕಾವೇರಪ್ಪ, ಚೆರುವಾಳಂಡ ಸುಜಲಾ ನಾಣಯ್ಯ, ಬಿದ್ದಂಡ ಉತ್ತಮ್, ವಾಂಚೀರ ವಿಠಲ ನಾಣಯ್ಯ, ವಾಂಚೀರ ಜಯ ನಂಜಪ್ಪ, ತೇಲಪಂಡ ಪವನ್, ಚಮ್ಮಟೀರ ಪ್ರವೀಣ್ ಉತ್ತಪ್ಪ, ಚೊಟ್ಟಂಡ ರೇಣಾ ಸೋಮಯ್ಯ, ಮುಂಡಚಾಡೀರ ರಿನಿ, ಬಲ್ಯಂಡ ವಿಜಯ, ಮಲ್ಲಮಾಡ ಶ್ಯಾಮಲ, ಕುಪ್ಪಣಮಾಡ ಜಾನ್ಸಿ, ಕೊಂಗಾಂಡ ವದನ್, ಕೇಚಮಾಡ ಪ್ರಮಿತ ಗಣಪತಿ, ತಾತಂಡ ಮಿನ್ನು, ಚಾರಿಮಂಡ ಬೋಪಣ್ಣ, ಮಣವಟ್ಟೀರ ಸಂಗೀತ ಈರಪ್ಪ, ಬಿಜ್ಜಂಡ ಕುಶ್ಮಿತಾ, ಬೊಳಕಾರಂಡ ಕಾರ್ಯಪ್ಪ, ಪಾಡಿಯಂಡ ಸುಬ್ಬಯ್ಯ ಬೊಟ್ಟೋಳಂಡ ಜಗ, ಪಾಸುರ ಇಷಾ, ಮಲ್ಲಮಾಡ ಗ್ರೀಷ್ಮಾ, ಬೊಳಕಾರಂಡ ಬೋಪಣ್ಣ, ಅಮ್ಮಾಟಂಡ ಶಾಶ್ವಿತ್, ಪುಟ್ಟಿಚಂಡ ಬೋಪಣ್ಣ, ರಿಶಿಕಾ, ಶಿವಣ್ಣ, ಕುಪ್ಪಣಮಾಡ ಮೇಘನಾ, ಪಟ್ಟಡ ಮೇಘನಾ ಪ್ರವೀಣ್, ಅಪ್ಪನೆರವಂಡ ಕಿರಣ್ ಕಾರ್ಯಪ್ಪ ಸೇರಿದಂತೆ ಸಹ ಕಲಾವಿದರು ಕೂಡ ವಿವಿಧ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.
ಚಿತ್ರದಲ್ಲಿ ಪಾತ್ರ ನಿರ್ವಹಿಸಿರುವ ಪತ್ರಕರ್ತ ಚಮ್ಮಟ್ಟಿರ ಪ್ರವೀಣ್ ಮಾತನಾಡಿ ಅತ್ಯಂತ ಪರಿಶ್ರಮದಿಂದ “ಉಸಾರ್” ಸಿನಿಮಾವನ್ನು ಸಿದ್ಧಗೊಳಿಸಲಾಗಿದ್ದು, ಕೊಡಗಿನ ಜನ ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕೆಂದು ಮನವಿ ಮಾಡಿದರು. ತೆರೆ ಮೇಲೆ ಪ್ರದರ್ಶನಗೊಳ್ಳುವ ಚಿತ್ರಗಳಿಗಷ್ಟೇ ಸಬ್ಸಿಡಿ ಮತ್ತು ಪ್ರಶಸ್ತಿಯನ್ನು ನೀಡಬೇಕು. ಪ್ರದರ್ಶನಗೊಳ್ಳದ ಚಿತ್ರಗಳನ್ನು ಪರಿಗಣಿಸುವುದರಿಂದ ಕಷ್ಟಪಟ್ಟು ಸಿನಿಮಾ ಮಾಡಿದವರಿಗೆ ಅನ್ಯಾಯ ಮಾಡಿದಂತ್ತಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ವಿರಾಜಪೇಟೆ ಕೊಡವ ಸಮಾಜದ ಅಧ್ಯಕ್ಷ ಹಾಗೂ ಹಿರಿಯ ನಟ ವಾಂಚಿರ ವಿಠಲ್ ನಾಣಯ್ಯ ಅವರು ಮಾತನಾಡಿ ಇದು 14 ನೇ ಕೊಡವ ಚಿತ್ರವಾಗಿದ್ದು, ನನ್ನ ಪಾತ್ರವನ್ನು ಉತ್ತಮ ರೀತಿಯಲ್ಲಿ ಪೋಷಿಸಲಾಗಿದೆ ಎಂದರು. ಕೊಡವ ಭಾಷೆಯ ಸಿನಿಮಾಗಳನ್ನು ನೋಡುವ ಅಭಿರುಚಿಯನ್ನು ಬೆಳೆಸಿಕೊಳ್ಳುವ ಮೂಲಕ ಎಲ್ಲಾ ಭಾಷಿಕರು ಸಿನಿಮಾಭಿಮಾನ ತೋರಬೇಕು ಮತ್ತು ಚಿತ್ರ ತಂಡಗಳನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ನಿರ್ಮಾಪಕಿ ರಮ್ಯಾ ನಾಣಯ್ಯ ಹಾಗೂ ನೃತ್ಯ ಸಂಯೋಜಕಿ ಮಲ್ಲಮಾಡ ಶಾಮಲ ಸುನೀಲ್ ಅವರುಗಳು ಮಾತನಾಡಿ “ಉಸಾರ್” ಚಿತ್ರದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಚಿತ್ರದಲ್ಲಿ ಮೂರು ಹಾಡುಗಳನ್ನು ಅಳವಡಿಸಿಕೊಳ್ಳಲಾಗಿದ್ದು, ಸುಂದರವಾದ ಲೊಕೇಶನ್ ಗಳಲ್ಲಿ ನೃತ್ಯ ಸಂಯೋಜನೆಯಾಗಿದೆ. ವಿಭಿನ್ನ ಕಥಾವಸ್ತುವಿದ್ದು, ಸಂಸಾರ ಸಹಿತ ನೋಡಬಹುದಾದ ಸುಂದರ ಸಿನಿಮಾವೊಂದು ತೆರೆಗೆ ಬರುತ್ತಿದೆ ಎಂದು ತಿಳಿಸಿದರು.

error: Content is protected !!