ಸಣ್ಣ ಕಥೆ : *ಭ್ರಮ ನಿರಸನ*

March 2, 2021

“ವಾಟ್  ಇಸ್ ಯುವರ್ ನೇಮ್ ಮೇಡಮ್..?” ಮೊದಲ ಬಾರಿಗೆ ಆಫೀಸಿಗೆ ಕಾಲಿಟ್ಟಾಗ, ನಾನು ಕೇಳಿದ ಪ್ರಶ್ನೆಗೆ ಅವಳು ‌ನೀಡಿದ ಉತ್ತರ ಹರಿದ. ಹರಿದ, ಹರಿದ ಹೀಗೊಂದು ಹೆಸರು ಇರಬಹುದೇ, ಆಶ್ಚರ್ಯದೊಂದಿಗೆ ಅವಳ ಮೊಗವನ್ನು ದಿಟ್ಟಿಸಿದ್ದೆ. 
      ಎಣ್ಣೆಗಪ್ಪಿನ  ಆ ಮೊಗದಲ್ಲಿ ಮುಗ್ಧತೆಯ ನೋಟ ಬೀರಿ ನನ್ನನ್ನೇ ನೋಡಿದ ಆ ನೋಟಕ್ಕೆ ಅದೆಷ್ಟು ಮರುಳಾಗಿದ್ದೆ ಅಂದ್ರೆ, ಅವಳನ್ನು ಹಾಗೆಯೇ ನೋಡುತ್ತಾ ಕೂರಬೇಕೆಂಬ ಮನಸ್ಸಾಗಿತ್ತು.      “ಹರ್ಷ , ಮಿಸ್ಟರ್ ಹರ್ಷ ”  ಅವಳ ತುಟಿ ಚಲಿಸಿ, ನನ್ನ ಹೆಸರು ಉಚ್ಚರಿಸಲ್ಪಟ್ಟದ್ದು, ನನ್ನ  ಕರಣಗಳಿಗೆ ಸಂಗೀತದ ಅಲೆಯಂತೆ ಇಂಪಾಗಿ ತೂರಿ ಬಂತು. ಆ ಬಟ್ಟಲು ಕಣ್ಣುಗಳನ್ನು ಅರಳಿಸಿ, ಮತ್ತೆ ನನ್ನೇ ದೃಷ್ಟಿಸಿದಾಗ , ನನಗೂ ಸಂಕೋಚವಾಗಿತ್ತು. 
    ಅವಳಿತ್ತ ಪ್ರೊಫೈಲ್ ನತ್ತ ಕಣ್ಣು ಹಾಯಿಸಿದಾಗ ಅವಳ ಹೆಸರು ಹರಿತ ಅಂತ ಗೊತ್ತಾದದ್ದು. ಫ್ರಂ ಕೇರಳ ನೋಡಿದಾಗಲಂತೂ,ಕೇರಳಿಗರು ‘ತ’ವನ್ನು  ದ ಮಾಡಿ ಹೇಳುವುದು ಅದವರ ರಕ್ತದೊಂದಿಗೆ  ಸೇರಿ ಹೋದ ಅಂಶ ಎಂದು ಗೊತ್ತಾದೊಡನೆ, ಉಕ್ಕುತ್ತಿರುವ ನಗುವನ್ನು ಬಲವಂತವಾಗಿ ತಡೆ ಹಿಡಿದು , ನನ್ನನ್ನು ನಾನು ಪರಿಚಯಿಸಿಕೊಂಡಿದ್ದೆ.
      ನನ್ನ ಅವಳ ಪರಿಚಯವಾಗಿ ಐದಾರು ತಿಂಗಳುಗಳು ಕಳೆದು ಹೋಗಿತ್ತು. ಅರ್ಧಂಬರ್ಧ ಕನ್ನಡ ಮಾತಾಡುತ್ತಿದ್ದ ಆಕೆ ಈಗ ನನ್ನ ಕನ್ನಡವನ್ನೇ ಹಿಂದಿಕ್ಕುವ ಅಪ್ಪಟ ಕನ್ನಡತಿಯಾಗಿ ಬದಲಾಗಿದ್ದಳು. ಅರಳು ಹುರಿದಂತೆ ಮಾತನಾಡುವ ಆಕೆಯದು ವಿಶಿಷ್ಟ ಆಕರ್ಷಣೆಯ ವ್ಯಕ್ತಿತ್ವ. ವೈಯಕ್ತಿಕ ಬದುಕಿನ ಬಗ್ಗೆ ಎಂದೂ ಹೇಳಿಕೊಳ್ಳದ ಆಕೆ ಒಂದೆರಡು ಸಲ ಊರಿಗೆ ಹೋಗಿ ಬಂದದ್ದು ಬಿಟ್ಟರೆ , ಬೇರೆಲ್ಲೂ ಹೋಗುತ್ತಿದ್ದದ್ದು ನಾನು ಕಂಡವನೇ‌ ಅಲ್ಲ. ಈ ಊರಿನ ಪ್ರೇಕ್ಷಣೀಯ ಸ್ಥಳಗಳನ್ನು ನೋಡಬೇಕೆಂದರೆ  ನನ್ನ ಜೊತೆ ಬಯಸುತ್ತಿದ್ದಳೇ ಹೊರತು ಬೇರೆ ಯಾರನ್ನೂ ಕರೆಯುತ್ತಿರಲಿಲ್ಲ. ” ಏನಪ್ಪ ಹರ್ಷ, ಮೇಡಮ್ ನಿನ್ನನ್ನು ಭಾರಿ ಹಚ್ಚಿಕೊಂಡಿದ್ದಾರೆ. ? ಏನು ಸಮಾಚಾರ..? ಆಫೀಸಿನಲ್ಲಿ ನನ್ನೊಬ್ಬನನ್ನು ಬಿಟ್ಟರೆ ಉಳಿದವರೆಲ್ಲರೂ ಸಂಸಾರಿಗಳೇ.  ಸಹಜವಾಗಿ ಕಿಚಾಯಿಸುವ ಮಾತುಗಳಿಗೆ ನಾನು ಅವಳು ಆಹಾರವಾಗುತ್ತಿದ್ದು, ಅವಳಿಗೆ ಕೇಳಿಸುತ್ತಿದ್ದರೂ,. “”ಗೋಲಿ ಮಾರೋ ಯಾರ್ ನನ್ನಲ್ಲೂ ನಿನ್ನಲ್ಲೂ ಆ ಭಾವನೆ ಇಲ್ಲದ ಮೇಲೆ ಚಿಂತೆ ಯಾಕೆ?” ಅದೆಷ್ಟು ಸಹಜವಾಗಿ ಹೇಳುತ್ತಿದ್ದಳು ಅಂದ್ರೆ , ಹೆಣ್ಣಾಗಿ ಇಷ್ಟು ಸುಲಭವಾಗಿ ತಗೊಳ್ಳೋದೇ  ನನಗೆ ಆಶ್ಚರ್ಯವಾಗುತ್ತಿತ್ತು. ಏನೇ ಹೇಳಿದರೂ , ಅವಳದು ನಗುಮೊಗದ ಉತ್ತರ. ಅವರೆಲ್ಲಾ ಹಾಗೆ ಕಿಚಾಯಿಸುತ್ತಿದ್ದರಿಂದಲೋ, ಅಥವಾ ನನಗೆ ಅವಳಲ್ಲಿ ಆಸಕ್ತಿ ಬೆಳೆಯುತ್ತಿದ್ದರಿಂದಲೋ, ಅವಳಲ್ಲಿ ಪ್ರೀತಿ ಅಂಕುರಿಸುತ್ತಿರುವುದು ನನ್ನ ಅರಿವಿಗೆ ಬರುತ್ತಿತ್ತು. ಅವಳಿಗೂ ನನ್ನಲ್ಲಿ ಅದೇ ಭಾವನೆ ಇದೆಯೋ ನನಗಂತೂ ಅರ್ಥವಾಗುತ್ತಿರಲಿಲ್ಲ.ಹೇಳಲೇ , ಹೇಳಿಬಿಡಲೇ , ಇದೆಷ್ಟು ದಿನ ನನ್ನ ಕಾಡಿಸಿತ್ತೋ ಏನೋ.?
      ಅದೊಂದು ದಿನ ವಾರದ ಕೊನೆಯ ರವಿವಾರ , ಎಂದಿನಂತೆ ನಮ್ಮದು  ದೇವಸ್ಥಾನಕ್ಕೆ ಭೇಟಿ. ದೇಗುಲದ ಪುಣ್ಯ ಸ್ಥಳದಲ್ಲಿ ಅವಳಿಗೆ ಹೇಳಿದರೆ ಹೇಗೆ ? , ನನ್ನಲ್ಲಿ ಆ ಭಾವನೆ ಬೆಳೆಯುತ್ತಿದ್ದಂತೆ , ಹೇಳಲೇಬೇಕೆಂಬ  ತುಡಿತವುಂಟಾಗಿತ್ತು.  ಪೂಜೆ ಮುಗಿಸಿ, ದೇವಸ್ಥಾನದ ಮೆಟ್ಟಿಲು ಇಳಿಯುತ್ತಾ , ಹೇಳಲೇಬೇಕೆಂದು  ಮಂಡಿಗೆ ತಿನ್ನುತ್ತಿದ್ದವನು, ತನ್ನ ಹಿಂದೆ ಅದೇನನ್ನೋ ಹೇಳುತ್ತಾ, ಇಳಿಯುತ್ತಿದ್ದವಳನ್ನು , ತಿರುಗಿ ನೋಡುವುದು, ಅವಳ ಕಾಲು ಜಾರಿದ್ದು , ಒಂದೇ ಸಮಯವಾಗಿತ್ತು. ಆಧರಿಸಿ ಹಿಡಿಯಲು ಮುಂದಾದವನು , ಸೆರಗ ಮರೆಯಲ್ಲಿ ಅಡಗಿದ್ದ , ಚಿನ್ನದ ಸರದಲ್ಲಿ ಪೋಣಿಸಿದ  ತಾಳಿ  ಮುಂದೆ ಬಂದು ಅವಳೆದೆಯ ಮೇಲೆ ತೂಗಾಡುತ್ತಾ ನನ್ನ ಅಣಕಿಸುತ್ತಾ ನಕ್ಕಾಗ, ನಾನು ನಿಂತಲ್ಲೇ ಶಿಲೆಯಾದೆ , ” ಏನು ಹರ್ಷ ಬೀಳುವಾಗ ಹಿಡಿಯುವುದಲ್ವಾ?”  ಸಾವರಿಸಿ ನಿಂತು , ಹೇಳುತ್ತಾ ಮುಂದೆ ಬಂದ ತಾಳಿಯನ್ನು ಸೆರಗ ಮರೆಯಲ್ಲಿ ಮತ್ತೆ ಅಡಗಿಸಿಕೊಂಡಾಗ  ಭ್ರಮಾ ಲೋಕದಲ್ಲಿ ತೇಲುತ್ತಿದ್ದವನು ವಾಸ್ತವಕ್ಕೆ  ಬಂದು, ನಾಲಿಗೆ ತುದಿಯವರೆಗೆ ಬಂದಿದ್ದ ಮಾತುಗಳನ್ನು ‌ಹಿಂದಕ್ಕೆ ಎಳೆದುಕೊಳ್ಳುತ್ತಾ ಪೆಚ್ಚು ಪೆಚ್ಚಾಗಿ ನಕ್ಕರೆ , ಅವಳ ಮೊಗದಲ್ಲಿ ಇವನಿಗೇನಾಯ್ತು ಎಂಬ ಮುಗ್ಧತೆಯ ಬಾವ ಹಾಗೆ ತೇಲಿ ಹೋಯ್ತು. (ಭಾರತೀ ಪ್ರಸಾದ್ ಕೊಡ್ವಕರೆ) W/O ಕೇಶವ ಪ್ರಸಾದ್, ಕೊಡ್ಲೆಕೆರೆ ಮನೆ, ನೀರ್ಚಾಲು ಅಂಚೆ, ಕುಂಬಳೆ (ವಯ), ಕಾಸರಗೋಡು ೬೭೧೩೨೧

error: Content is protected !!