ಖಜಾನೆಗೆ ಕಾಲಮಿತಿಯೊಳಗೆ ಬಿಲ್ಲು ಸಲ್ಲಿಸಿ : ಇಲಾಖೆ ಉಪ ನಿರ್ದೇಶಕಿ ಪದ್ಮಜ

ಮಡಿಕೇರಿ.ಮಾ.2 : ಸರ್ಕಾರದ ವಿವಿಧ ಇಲಾಖೆಗಳು ಖಜಾನೆಗೆ ವರ್ಷಾಂತ್ಯದ ಬಿಲ್ಲುಗಳನ್ನು ಸಲ್ಲಿಸುವ ಸಂಬಂಧ ನಗರದ ಜಿಲ್ಲಾಧಿಕಾರಿ ಅವರ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಖಜಾನೆ ಕಚೇರಿಯಿಂದ ಕಾರ್ಯಾಗಾರ ನಡೆಯಿತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಾಗಾರದಲ್ಲಿ ಮಾತನಾಡಿದ ಖಜಾನೆ ಇಲಾಖೆಯ ಉಪ ನಿರ್ದೇಶಕರಾದ ಪದ್ಮಜ ಅವರು ಆರ್ಥಿಕ ಇಲಾಖೆ ಹೊರಡಿಸಿರುವ ವೇಳಾಪಟ್ಟಿಯಂತೆ ವೇತನ ಬಾಕಿ ಬಿಲ್ಲುಗಳು, ಹಬ್ಬದ ಮುಂಗಡ, ಅನುದಾನಿತ ವೇತನ ಬಿಲ್ಲುಗಳು, ಕಚೇರಿ ವೆಚ್ಚಕ್ಕೆ ಸಂಬಂಧಿಸಿದ ಸಾದಿಲ್ವಾರು ಬಿಲ್ಲುಗಳನ್ನು ನಿಗಧಿತ ಅವಧಿಯೊಳಗೆ ಸಂಬಂಧಪಟ್ಟ ಖಜಾನೆಗಳಿಗೆ ಸಲ್ಲಿಸುವಂತೆ ಅವರು ತಿಳಿಸಿದರು.
ಸರ್ಕಾರದಿಂದ ಬಿಡುಗಡೆಯಾದ ಅನುದಾನ ವ್ಯಪಗತವಾಗದಂತೆ ಗಮನಹರಿಸುವುದು ಸಂಬಂಧಪಟ್ಟ ಕಚೇರಿ ಮುಖ್ಯಸ್ಥರದ್ದಾಗಿದೆ. ಆ ನಿಟ್ಟಿನಲ್ಲಿ ನಿಗದಿತ ಅವಧಿಯೊಳಗೆ ಬಿಲ್ಲುಗಳನ್ನು ಸಲ್ಲಿಸಬೇಕು ಎಂದರು.
ಖಜಾನೆ ಇಲಾಖೆಯ ಮುಖ್ಯ ಲೆಕ್ಕಿಗರಾದ ಶ್ಯಾಮ್ಸುಂದರ ಅವರು ಮಾತನಾಡಿ ವರ್ಷಾಂತ್ಯದ ಬಿಲ್ಲುಗಳ ಸಲ್ಲಿಕೆ ಸಂಬಂಧ ಆರ್ಥಿಕ ಇಲಾಖೆಯಿಂದ ಈಗಾಗಲೇ ವೇಳಾಪಟ್ಟಿ ಬಿಡುಗಡೆ ಮಾಡಿದ್ದು, ಅದರಂತೆ ಬಿಲ್ಲುಗಳನ್ನು ಸಲ್ಲಿಸಬೇಕು ಎಂದು ಮಾಹಿತಿ ನೀಡಿದರು.
ವೇತನ ಬಿಲ್ಲುಗಳ ಸಂಬಂಧ 2021 ರ ಜನವರಿ, 31 ರೊಳಗೆ ಬಿಡುಗಡೆ ಆದೇಶ ಹೊರಡಿಸಿ ಅಪ್ಲೋಡ್ ಆಗಿರುವ ವೆಚ್ಚಗಳಿಗೆ ಸಂಬಂಧಿಸಿದಂತೆ ಬಿಲ್ಲು ಸಲ್ಲಿಸಲು ಮಾರ್ಚ್, 05 ಕೊನೆಯ ದಿನವಾಗಿದೆ. 2021 ರ ಜನವರಿ, 31 ರ ನಂತರ ಬಿಡುಗಡೆ ಮಾಡಿದ ಹಾಗೂ ವೆಚ್ಚಗಳಿಗೆ ಸಂಬಂಧಿಸಿದಂತೆ ಮಾರ್ಚ್, 15 ಬಿಲ್ಲು ಸಲ್ಲಿಸಲು ಕಡೆಯ ದಿನವಾಗಿದೆ ಎಂದು ಅವರು ಮಾಹಿತಿ ನೀಡಿದರು.
ಸಂಕ್ಷಿಪ್ತ ಸಾದಿಲ್ವಾರು ಬಿಲ್ಲುಗಳಿಗೆ ಸಂಬಂಧಿಸಿದಂತೆ ಆದಷ್ಟು ತ್ವರಿತವಾಗಿ ಎನ್.ಡಿ.ಸಿ. ಬಿಲ್ಲುಗಳನ್ನು ಖಜಾನೆಗೆ ಸಲ್ಲಿಸಬೇಕು. ಯಾವುದೇ ಗೊಂದಲಗಳಿಗೆ ಅವಕಾಶ ಮಾಡಬಾರದು ಎಂದರು.
ಜಿಲ್ಲಾ ಖಜಾನೆ ಇಲಾಖೆಯ ನವೀನ್ ಕುಮಾರ್ ಅವರು ಬಿಲ್ಲುಗಳಿಗೆ ಸಂಬಂಧಿಸಿದಂತೆ ಡಿಎಸ್ಸಿ ಕೊನೆ ಗೊಳ್ಳುವ ದಿನಾಂಕ ಬಗ್ಗೆ ಆಗಾಗ ಪರಿಶೀಲನೆ ಮಾಡಬೇಕು. ಕೊನೆಯ ದಿನಾಂಕದ ಮುಂಚಿತವಾಗಿ ಒಂದು ತಿಂಗಳೊಳಗೆ ಡಿಎಸ್ಸಿ ಪಡೆಯಲು ಮುಂದಾಗಬೇಕು. ಈ ಸಂಬಂಧ ಆಧಾರ್ ಕಾರ್ಡ್, ಗುರುತಿನ ಚೀಟಿ ಅಥವಾ ವೇತನ ಪ್ರಮಾಣ ಪತ್ರ ಮತ್ತು ಭಾವಚಿತ್ರವನ್ನು ಒದಗಿಸಬೇಕಿದೆ ಎಂದು ಅವರು ಹೇಳಿದರು.
ಜಿ.ಪಂ.ಮುಖ್ಯ ಲೆಕ್ಕಾಧಿಕಾರಿ ಪುಷ್ಪಾವತಿ ಅವರು ಜಿ.ಪಂ.ವ್ಯಾಪ್ತಿಯ ಕಾರ್ಯಕ್ರಮಗಳ ಬಿಲ್ಲುಗಳ ಸಂಬಂಧ ಮೇಲುರುಜು ಮಾಡಲು ಮುಂಚಿತವಾಗಿ ಬಿಲ್ಲುಗಳನ್ನು ಸಲ್ಲಿಸುವಂತೆ ಅವರು ಸಲಹೆ ಮಾಡಿದರು.
ಬಿಸಿಎಂ ಇಲಾಖೆಯ ತಾಲ್ಲೂಕು ಅಧಿಕಾರಿ ಕವಿತಾ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಪಿ.ಎಸ್.ಮಚ್ಚಾಡೋ, ಪಶುಸಂಗೋಪನಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್, ಖಜಾನೆ ಇಲಾಖೆಯ ಮುಖ್ಯ ಲೆಕ್ಕಿಗರಾದ ಬಾಲಕೃಷ್ಣ, ನಾನಾ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು.



