ಅಕ್ರಮ ಮರ ಸಂಗ್ರಹ : ಕುಶಾಲನಗರದಲ್ಲಿ ಸಾ ಮಿಲ್ ಮಾಲೀಕನ ಬಂಧನ

March 2, 2021

ಮಡಿಕೇರಿ ಮಾ.2 : ಕುಶಾಲನಗರದ ಸಾಮಿಲ್ ಒಂದರ ಮೇಲೆ ದಾಳಿ ನಡೆಸಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಮರದ ಹೊಟ್ಟಿನನೊಳಗೆ ಹೂತಿಟ್ಟಿದ್ದ 14 ಬೀಟೆ ಮರದ ನಾಟಾ ಮತ್ತು ರಹದಾರಿ ಇಲ್ಲದೇ ಸಂಗ್ರಹಿಟ್ಟಿಸಿದ್ದ ಬಾಗೆ ಮರದ 5 ನಾಟಾಗಳನ್ನು ವಶಕ್ಕೆ ಪಡೆದಿದ್ದಾರೆ.
ಕುಶಾಲನಗರದ ಸೆಲೆಕ್ಟ್ ಸಾ ಮಿಲ್‍ನಲ್ಲಿ ಈ ಘಟನೆ ನಡೆದಿದ್ದು, ಅರಣ್ಯ ಇಲಾಖೆ ಸಾ ಮಿಲ್ ಅನ್ನು ‘ಸೀಝ್’ ಮಾಡಿದೆ. ಸಾ ಮಿಲ್ ಮಾಲೀಕ ಗುಮ್ಮನಕೊಲ್ಲಿ ನಿವಾಸಿ ನಿಜಾಮುದ್ದೀನ್(35) ಎಂಬಾತನನ್ನು ಬಂಧಿಸಿದ್ದಾರೆ. ಸಾ ಮಿಲ್‍ನಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅರಣ್ಯ ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ. ಬೀಟೆ ಮರ ಮತ್ತು ಬಾಗೆ ಮರದ ನಾಟಾಗಳನ್ನು ಅರಣ್ಯ ಇಲಾಖೆ ವಶಕ್ಕೆ ಪಡೆದಿದ್ದು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಮಡಿಕೇರಿ ಡಿಎಫ್‍ಓ ಪ್ರಭಾಕರನ್ ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಎಸಿಎಫ್ ನೆಹರು, ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್, ಉಪ ವಲಯ ಅರಣ್ಯಾಧಿಕಾರಿ ಸುಬ್ರಮಣಿ, ಅನಿಲ್ ಡಿಸೋಜಾ, ಅರಣ್ಯ ರಕ್ಷಕರಾದ ಮಂಜೇಗೌಡ, ಆನಂದ ಮಲಗುಂದ, ಅರಣ್ಯ ವೀಕ್ಷಕರಾದ ಮೇದಪ್ಪ, ನಾರಾಯಣ ರೈ, ಆರ್.ಆರ್.ಟಿ ತಂಡದ ಸಿಬ್ಬಂದಿಗಳಾದ ಶಾಂತ, ಪ್ರದೀಪ್, ಸುನೀಲ್, ದಿಲೀಪ್, ರವಿ ಅವರುಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!