ಬೆಲೆ ಏರಿಕೆ ಕ್ರಮ ಖಂಡಿಸಿ ಮಡಿಕೇರಿಯಲ್ಲಿ ಸಿಪಿಐಎಂ ಪ್ರತಿಭಟನೆ

March 2, 2021

ಮಡಿಕೇರಿ ಮಾ.2 : ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಖಂಡಿಸಿ ಭಾರತ ಕಮ್ಯುನಿಸ್ಟ್ ಪಕ್ಷ(ಮಾಕ್ರ್ಸ್ ವಾದಿ)ದ ನಗರದಲ್ಲಿ ಪ್ರತಿಭಟನೆ ನಡೆಸಿತು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪಕ್ಷದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಅಸಮಾಧಾನ ವ್ಯಕ್ತಪಡಿಸಿದರು.
ಈ ಸಂದರ್ಭ ಮಾತನಾಡಿದ ಪಕ್ಷದ ಕಾರ್ಯದರ್ಶಿ ಡಾ.ಈ.ರಾ. ದುರ್ಗಾಪ್ರಸಾದ್, ಜಿಲ್ಲೆಯಲ್ಲಿ 2018 ನಿರಂತರವಾಗಿ ಸಂಭವಿಸಿದ ಪ್ರಾಕೃತಿಕ ವಿಕೋಪ, ಕೋವಿಡ್, ಕಾಡಾನೆ ದಾಳಿ, ಹುಲಿದಾಳಿಯಿಂದ ಕೊಡಗಿನ ಜನ ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದರೂ ಕೇಂದ್ರ ಸರ್ಕಾರ ಜನಸಾಮಾನ್ಯರಿಗೆ ಸ್ಪಂದಿಸುವ ಕೆಲಸ ಮಾಡಿಲ್ಲ. ಕೇಂದ್ರದ ಬಜೆಟ್ ಕೊಡಗಿನ ಬೆಳೆಗಾರರು ಹಾಗೂ ಜನ ಸಾಮಾನ್ಯರ ನಿರೀಕ್ಷೆಗಳನ್ನು ಹುಸಿಗೊಳಿಸಿದೆ ಎಂದು ಆರೋಪಿಸಿದರು.
ಬಂಡವಾಳಶಾಹಿಗಳ ಪರವಾಗಿರುವ ಸರ್ಕಾರ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸಲು ಮುಂದಾಗಿದೆ. ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ 2014ರಲ್ಲಿ ಪೆಟ್ರೋಲ್‍ನ ಮೂಲ ಬೆಲೆ 47.32 ರೂ., 2021ರಲ್ಲಿ 29.34 ರೂ.ಗೆ ಇಳಿದಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅವುಗಳ ಬೆಲೆ ಶೇ.50ರಷ್ಟು ಕುಸಿದಿರುವ ಸಮಯದಲ್ಲೇ ಕೇಂದ್ರ ಸರಕಾರ ಭಾರತದಲ್ಲಿ ಬೆಲೆ ಹೆಚ್ಚಿಸಿದೆ. ಈ ಬೆಲೆ ಹೆಚ್ಚಳಕ್ಕೆ ಕೇಂದ್ರ ಸಹಕಾರ ಅಬಕಾರಿ ಸುಂಕವನ್ನು ಹೆಚ್ಚಿಸುತ್ತಿರುವುದೇ ಮುಖ್ಯ ಕಾರಣವಾಗಿದೆ ಎಂದು ಡಾ.ದುರ್ಗಾಪ್ರಸಾದ್ ಅಭಿಪ್ರಾಯಪಟ್ಟರು.
2014ರಲ್ಲಿ ನರೇಂದ್ರ ಮೋದಿಯವರ ಸರಕಾರ ಅಧಿಕಾರಕ್ಕೆ ಬಂದ ನಂತರ ಇಂದಿನವರೆಗೆ ಕೇಂದ್ರ ಸರಕಾರ ತೆರಿಗೆ ಪ್ರಮಾಣವನ್ನು ಶೇ.217ರಷ್ಟು ಹೆಚ್ಚಿಸಿದೆ ಎಂದು ದೂರಿದರು.
ಸೆಸ್ ಹೆಚ್ಚಿಸಿ ಅಬಕಾರಿ ಸುಂಕ ಕಡಿಮೆ ಮಾಡಿರುವುದರಿಂದ ರಾಜ್ಯದ ಪಾಲು ಕಡಿತವಾಗಿದೆ. ಕೊಡಗಿಗೆ ವಿಶೇಷ ಪ್ಯಾಕೇಜ್, ಕಾಫಿಗೆ ಬೆಂಬಲ ಬೆಲೆಯಂತಹ ನಿರೀಕ್ಷೆಗಳೂ ಹುಸಿಯಾಗಿದೆ ಎಂದು ಟೀಕಿಸಿದರು. ಕೇಂದ್ರ ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಮುಂದಿನ ದಿನಗಳಲ್ಲಿ ಪಕ್ಷದ ವತಿಯಿಂದ ಹೋರಾಟವನ್ನು ತೀವ್ರಗೊಳಿಸುವುದಾಗಿ ದುರ್ಗಾಪ್ರಸಾದ್ ಎಚ್ಚರಿಕೆ ನೀಡಿದರು.
ಜಿಲ್ಲಾ ಸಮಿತಿ ಸದಸ್ಯರುಗಳಾದ ಜೋಸ್, ಸಾಬು, ಕುಟ್ಟಪ್ಪ, ಮಹದೇವ್, ಶಿವಪ್ಪ, ರಮೇಶ್, ಶಾಖಾ ಕಾರ್ಯದರ್ಶಿ ಭರತ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

error: Content is protected !!