ಅಂಕನಹಳ್ಳಿ ಆಲಿಕಲ್ಲು ಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ : ಸೂಕ್ತ ಪರಿಹಾರದ ಭರವಸೆ

March 2, 2021

ಮಡಿಕೇರಿ ಮಾ.2 : ಇತ್ತೀಚೆಗೆ ಅಕಾಲಿಕ ಆಲಿಕಲ್ಲು ಮಳೆಗೆ ಹಾನಿಗೊಳಗಾದ ಉತ್ತರ ಕೊಡಗಿನ ಸೋಮವಾರಪೇಟೆ ತಾಲೋಕಿನ ಆಲೂರುಸಿದ್ದಾಪುರ ಗ್ರಾ.ಪಂ.ಗೆ ಸೇರಿದ ಅಂಕನಹಳ್ಳಿ ವ್ಯಾಪ್ತಿಯ 11 ಗ್ರಾಮಗಳಿಗೆ ಮಂಗಳವಾರ ಕೊಡಗು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಭೇಟಿ ನೀಡಿ ಆಲಿಕಲ್ಲು ಮಳೆಯಿಂದ ಹಾನಿಗೊಳಗಾಗ ರೈತರು ಬೆಳೆದ ಬೆಳೆಯನ್ನು ಪರಿಶೀಲನೆ ನಡೆಸಿದರು.
ಫೆ.18 ರಂದು ಆಲೂಸಿದ್ದಾಪುರ ಗ್ರಾ.ಪಂ.ಯ ಅಂಕನಹಳ್ಳಿ, ಮೆಣಸ, ಕೈಸಾರವಳ್ಳಿ, ಸೀಗೆಮರೂರು, ಹಂಬಳ್ಳಿ, ಮನೆಹಳ್ಳಿ, ಬೆಟ್ಟದಹಳ್ಳಿ, ಮೈಲಾದಪುರ, ನಾಗವಾರ ಮುಂತಾದ 11 ಗ್ರಾಮಗಳ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಾಗಿತ್ತು ಇದರಿಂದ ಈ ವ್ಯಾಪ್ತಿಯ ಸುಮಾರು 2 ಸಾವಿರದ 400 ಏಕರೆ ಪ್ರದೇಶದಲ್ಲಿ ಕಾಫಿ, ಕಾಳು ಮೆಣಸು, ಬಾಳೆ, ಅಡಿಕೆ, ಸೇರಿದಂತೆ ಹೊಲಗಳಲ್ಲಿ ಬೆಳೆದಿದ್ದ ಜೋಳ, ಹಸಿರು ಮೆಣಸು, ಸಿಹಿ ಗೆಣಸು, ಮರ ಗೆಣಸು ಮುಂತಾದ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿತ್ತು. ಈ ಸಂಬಂಧ ಉಪ ವಿಭಾಗಧಿಕಾರಿ, ಸೋಮವಾರಪೇಟೆ ತಾಹಶೀಲ್ದಾರರು, ಕಂದಾಯ, ಕೃಷಿ, ತೋಟಗಾರಿಕೆ ಇಲಾಖೆ, ಕಾಫಿ ಮಂಡಳಿ ಅಧಿಕಾರಿಗಳ ತಂಡ ಹಾನಿಗೊಳಗಾದ ಪ್ರದೇಶಗಳಿಗೆ ಬೆಳೆ ಹಾನಿಗೊಳಗಾದ ಬಗ್ಗೆ ಪ್ರಾಥಮಿಕ ಸಮೀಕ್ಷೆ ನಡೆಸಿದ್ದರು ಆಲಿಕಲ್ಲು ಮಳೆಗೆ ಶೇ ನೂರರಷ್ಟು ಬೆಳೆ ಹಾನಿಯಾಗಿರುವ ಬಗ್ಗೆ ಅಧಿಕಾರಿಗಳು ಸರಕಾರಕ್ಕೆ ವರದಿ ನೀಡಿದ್ದರು.
ಮಂಗಳವಾರ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಹಾನಿಗೊಳಗಾದ 11 ಗ್ರಾಮಗಳಿಗೆ ಬೇಟಿ ನೀಡಿದರು. ಆಲಿಕಲ್ಲು ಮಳೆಗೆ ಹಾನಿಗೊಳಗಾದ ಜೋಳ, ಹಸಿರು ಮೆಣಸು, ಶುಂಠಿ, ಸಿಹಿ ಗೆಣಸು, ಮರಗೆಣಸು ತೋಟದ ಬೆಳೆಯಾದ ಕಾಫಿ ಕಾಳು ಮೆಣಸು, ಬಾಳೆ, ಅಡಿಕೆ ಬೆಳೆಯನ್ನು ವೀಕ್ಷಣೆ ಮಾಡಿದರು. ರೈತರು ಬೆಳೆದ ಬೆಳೆಗಳ ಬಗ್ಗೆ ಹಾನಿಗೊಳಗಾದ ರೈತರಿಂದ ಮಾಹಿತಿಯನ್ನು ಪಡೆದುಕೊಂಡರು. ಇದೆ ಸಂದರ್ಭದಲ್ಲಿ ಅವರು ತೋಟಗಾರಿಕೆ, ಕೃಷಿ, ಕಂದಾಯ ಮತ್ತು ಕಾಫಿ ಮಂಡಳಿ ಅಧಿಕಾರಿಗಳಿಂದ ವಿವರಣೆ ಪೆದುಕೊಂಡರು. ಈ ವ್ಯಾಪ್ತಿಯಲ್ಲಿ ಆಲಿಕಲ್ಲು ಮಳೆಯಿಂದಾಗಿ ಪ್ರತಿಯೊಂದು ಕೃಷಿ ಬೆಳೆಗಳು ಸಂಪೂರ್ಣವಾಗಿ ಹಾನಿಗೊಳಗಾಗಿದೆ ಶೇ ನೂರಷ್ಟು ಬೆಳೆ ಹಾನಿಯಾಗಿದೆ ಎಂದು ತೋಟಗಾರಿಕೆ ಇಲಾಖೆ ಸೋಮವಾರಪೇಟೆ ತಾಲೋಕು ಅಧಿಕಾರಿ ಶೋಭ ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು. ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಕಡಿಮೆ ಮಳೆ ಬೀಳುತ್ತದೆ, ರೈತರು ಕೊಳವೆ ಬಾವಿ ಮೂಲಕ ಕೃಷಿ ಮಾಡುತ್ತಾರೆ ಈಗ ಅಕಾಲಿಕ ಆಲಿಕಲ್ಲು ಮಳೆಯಿಂದ ಬೆಳೆ ಹಾನಿಗೊಳಗಾಗಿದೆ ಎಂದು ತಾಹಶೀಲ್ದಾರ ಗೋವಿಂದ್‍ರಾಜು ಜಿಲ್ಲಾಧಿಕಾರಿಗೆ ಮಾಹಿತಿ ನೀಡಿದರು. ಆಲಿಕಲ್ಲು ಮಳೆಯಿಂದ ಬೆಳೆ ಹಾನಿಗೊಳಗಾದ ರೈತರಿಗೆ ಸೂಕ್ತ ಪರಿಹಾರ ನೀಡುವ ಬಗ್ಗೆ ಸರಕಾರಕ್ಕೆ ವರದಿ ನೀಡುವುದಾಗಿ ಜಿಲ್ಲಾಧಿಕಾರಿ ರೈತರಿಗೆ ಮನವಿ ನೀಡಿದರು.
ಈ ಸಂದರ್ಭ ತಾಹಸೀಲ್ದಾರ ಗೋವಿಂದ್‍ರಾಜು, ತೋಟಗಾರಿಕೆ ತಾಲೋಕು ಅಧಿಕಾರಿ ಶೋಭ, ಶನಿವಾರಸಂತೆ ಡಿಟಿ ಮಧುಸೂಧನ್, ಆರ್‍ಐ ಕೆ.ಎಂ.ಮಂಜುನಾಥ್, ಗ್ರಾಮಲೆಕ್ಕಾಧಿರಿಗಳಾದ ಸಂತೋಷ್, ವಿಶ್ವವಾಣಿ, ತೋಟಗಾರಿಕೆ ಶನಿವಾರಸಂತೆ ಹೋಬಳಿ ಅಧಿಕಾರಿ ಸಿಂಧು, ಶನಿವಾರಸಂತೆ ಕೃಷಿ ಸಂಪರ್ಕ ಕೇಂದ್ರದ ಸಹಾಯಕ ಅಧಿಕಾರಿ ವೇದಪ್ರಿಯ, ಕಾಫಿ ಮಂಡಳಿ ಸಂಪರ್ಕಧಿಕಾರಿ ವಿಶ್ವನಾಥ್, ಆಲೂರುಸಿದ್ದಾಪುರ ಗ್ರಾ.ಪಂ.ಪಿಡಿಒ ಪೂರ್ಣಿಮ, ಕಾರ್ಯದರ್ಶಿ ಚಂದ್ರೇಗೌಡ, ಕಂದಾಯ ಇಲಾಖೆಯ ರುದ್ರಯ್ಯ ಮುಂತಾದವರಿದ್ದರು.

error: Content is protected !!