ಮಡಿಕೇರಿ ಮೆಡಿಕಲ್ ಕಾಲೇಜ್ ಇಎನ್ ಟಿ ವಿಭಾಗದಲ್ಲಿ‌ ಅತ್ಯಾಧುನಿಕ ವ್ಯವಸ್ಥೆ ಲಭ್ಯ

March 3, 2021

ಮಡಿಕೇರಿ, ಮಾ.3 : ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯ ಇಎನ್‍ಟಿ ವಿಭಾಗವು ಕಿವಿ ಮೂಗು ಗಂಟಲಿಗೆ ಸಂಬಂಧಿತ ರೋಗನಿರ್ಣಯ ಮತ್ತು ಚಿಕಿತ್ಸೆಗೆ ಅಗತ್ಯವಾಗಿ ಬೇಕಾಗಿರುವ ಅತ್ಯಾಧುನಿಕ ಸಾಧನ ಸಲಕರಣೆಗಳನ್ನು ಹೊಂದಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮಾಹಿತಿ ನೀಡಿದೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಡಿಕೇರಿಯಲ್ಲಿ ಇಎನ್‍ಟಿ ವಿಭಾಗವು ಕೊಡಗು ಮತ್ತು ಪಕ್ಕದ ಜಿಲ್ಲೆಗಳ ರೋಗಿಗಳಿಗೆ ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸೆಯ ಸೇವೆಯನ್ನು ಒದಗಿಸುತ್ತಿದ್ದು, 2019ರಲ್ಲಿ ಅಖಿಲ ಭಾರತ ವಾಕ್ ಶ್ರವಣ ಸಂಸ್ಥೆ ಮೈಸೂರು ವತಿಯಿಂದ ಸೇವಾ ಕೇಂದ್ರವನ್ನು ಸೇರಿಸುವ ಮೂಲಕ ಸಂಸ್ಥೆಯಲ್ಲಿನ ರೋಗ ನಿರ್ಣಯ ಸೌಲಭ್ಯಗಳನ್ನು ಉನ್ನತೀಕರಿಸಲಾಗಿದೆ. ನಿಯಮಿತವಾಗಿ ನವಜಾತ ತಪಾಸಣೆ, ಭಾಷಾ ಚಿಕಿತ್ಸಾ ಸೌಲಭ್ಯಗಳು ಮತ್ತು ಕಿವಿಯಲ್ಲಿ ರೋಗಲಕ್ಷಣ ಹೊಂದಿರುವ ರೋಗಿಗಳಿಗೆ, ರೋಗ ನಿರ್ಣಯದ ಪರೀಕ್ಷೆಗಳನ್ನು, ಕಿವಿ ಮೂಗು ಗಂಟಲಿನ ಶಸ್ತ್ರಚಿಕಿತ್ಸೆ ಸೌಲಭ್ಯಗಳನ್ನು ಇತ್ತೀಚಿನ ಸುಧಾರಿತ ಸಲಕರಣೆಗಳೊಂದಿಗೆ ನಡೆಸಲಾಗುತ್ತಿದೆ.

ವಿಭಾಗವು ರೋಗ ನಿರ್ಣಯದ ಎಂಡೋಸ್ಕೋಪಿಕ್ ಸೌಲಭ್ಯಗಳ ಜೊತೆಗೆ ಎಂಡೋಸ್ಕೋಪಿಕ್ ಮತ್ತು ಮೈಕ್ರೋಸ್ಕೋಪಿಕ್ ಶಸ್ತ್ರಚಿಕಿತ್ಸೆಯ ಸೌಲಭ್ಯಗಳನ್ನು ಕೂಡ ಹೊಂದಿದೆ. ಮೆದುಳಿನ ವ್ಯವಸ್ಥೆಯನ್ನು ಪ್ರಚೋದಿಸುವ ಪ್ರತಿಕ್ರಿಯೆ ಅಡಿಯೋಮೀಟರ್ ಪರೀಕ್ಷೆಯನ್ನು ಪ್ರಾರಂಭಿಸುತ್ತಿದ್ದೇವೆ ಎಂದು ತಿಳಿಸುವುದು ನಮ್ಮ ಹೆಮ್ಮೆಯ ಕ್ಷಣವಾಗಿದೆ ಹಾಗೂ ಕೊಡಗಿನ ಜನರಿಗೆ ಆರೋಗ್ಯ ಸೇವೆಗಳನ್ನು ಅತ್ಯುತ್ತಮವಾಗಿ ಒದಗಿಸಲು ವಿಭಾಗದಿಂದ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಈವರೆಗೆ ನಡೆಸಲಾದ ಹಲವಾರು ಶೈಕ್ಷಣಿಕ ಕಾರ್ಯಕ್ರಮಗಳಲ್ಲಿ ವಿಭಾಗವು ಶೈಕ್ಷಣಿಕವಾಗಿ ಸಕ್ರಿಯವಾಗಿದ್ದು, ವೈದ್ಯರನ್ನು ಉನ್ನತಿಕರಿಸಲು ಇತ್ತೀಚಿನ ಪ್ರಗತಿಯೊಂದಿಗೆ ಸಂಶೋಧನಾ ಯೋಜನೆಯನ್ನು ಸಹ ನಡೆಸಲಾಗುತ್ತಿದೆ. ಪ್ರತಿ ವರ್ಷ ಮಾರ್ಚ್ 3 ರಂದು ನಡೆಯುವ ವಿಶ್ವ ಶ್ರವಣ ದಿನಾಚರಣೆಯು ವಿಭಾಗವು ನಡೆಸುವ ಮತ್ತೊಂದು ಪ್ರಮುಖ ಕಾರ್ಯಕ್ರಮವಾಗಿದ್ದು, ಇದು ಶ್ರವಣ ಆರೈಕೆ ಮತ್ತು ಶ್ರವಣ ನಷ್ಟವನ್ನು ತಡೆಗಟ್ಟುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ, ಅಗತ್ಯವಿರುವ ರೋಗಿಗಳಿಗೆ ಶ್ರವಣ ಯಂತ್ರವನ್ನು ವಿತರಿಸುವ ಚಟುವಟಿಕೆಗಳನ್ನು ಒಳಗೊಂಡಿದೆ.

ಈ ವರ್ಷ ವಿಶ್ವ ಶ್ರವಣ ದಿನದ ವಿಷಯವೇನೆಂದರೆ “ಸರ್ವರಿಗೂ ಶ್ರವಣ ಆರೈಕೆ”. ನಿಮ್ಮ ಶ್ರವಣವನ್ನು ರಕ್ಷಿಸಿ ಮತ್ತು ಕಿವಿ ಮೂಗು ಗಂಟಲಿಗೆ ಸಂಬಂಧಿತ ಯಾವುದೇ ಸಮಸ್ಯೆಗಳಿಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ಇಎನ್‍ಟಿ ವಿಭಾಗಕ್ಕೆ ಭೇಟಿ ನೀಡಿ ಸೌಲಭ್ಯವನ್ನು ಪಡೆದುಕೊಳ್ಳಲು ಕೋರಲಾಗಿದೆ.

error: Content is protected !!