ಒಂದು ಜಿಲ್ಲೆ-ಒಂದು ಉತ್ಪನ್ನ ಯೋಜನೆ : ಸದುಪಯೋಗ ಪಡಿಸಿಕೊಳ್ಳಲು ಸಂಸದ ಪ್ರತಾಪ್ ಸಿಂಹ ಕರೆ

March 3, 2021

ಸುಂಟಿಕೊಪ್ಪ,ಮಾ.3 : ಒಂದು ಜಿಲ್ಲೆ ಒಂದು ಉತ್ಪನ್ನದ ಯೋಜನೆಯಡಿ ಕಾಫಿ ಉದ್ಯಮ ಸ್ಥಾಪಿಸಲು ಕೃಷಿಕರಿಗೆ ಶೇಕಡ 35 ರ ಸಬ್ಸಿಡಿಯಲ್ಲಿ ಕೇಂದ್ರ ಸರಕಾರ ಅನುದಾನ ಒದಗಿಸಲಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ಸುಂಟಿಕೊಪ್ಪ ನಾಡು ಕಛೇರಿ ಹಿಂಭಾಗದಲ್ಲಿ ಕೇಂದ್ರ ಸರಕಾರದ ರಾಷ್ಟ್ರೀಯ ಕೃಷಿ ವಿಕಾಸ್ ಯೋಜನೆಯಡಿ 50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕೃಷಿ ಸಂಪರ್ಕ ಕೇಂದ್ರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೃಷಿ ಸಮ್ಮಾನ್ ಯೋಜನೆಯಿಂದ ಬಡ, ಮದ್ಯಮ ವರ್ಗದ ರೈತರ ಖಾತೆಗೆ ವಾರ್ಷಿಕವಾಗಿ 6,000 ನಗದು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಬೆನ್ನೆಲುಬಾದ ಕೃಷಿಕರಿಗೆ ಅನೇಕ ಯೋಜನೆಗಳಲ್ಲಿ ರೂಪಿಸಿ ಸಕಾರಗೊಳಿಸುತ್ತಿದೆ. ಉಚಿತ ವಿದ್ಯುತ್ ಉಚಿತ ಗ್ಯಾಸ್ ಸಿಲಿಂಡರ್‍ನಿಂದ ಈಗಾಗಲೇ ಬಡವರ್ಗದವರು ಪ್ರಯೋಜನ ಪಡೆದು ಕೊಂಡಿದ್ದು, ಜಲ ಮಿಷನ್ ಯೋಜನೆಯಿಂದ ಪ್ರತಿಯೊಬ್ಬರ ಮನೆಗೆ ಮೂರು ನಲ್ಲಿ ಅಳವಡಿಸಿ ನೀರು ಒದಗಿಸುವ ಮಹಾತ್ವಾಕಾಂಕ್ಷೆ ಯೋಜನೆ ಕಾರ್ಯವಾಗುತ್ತಿದೆ. ಸುದೀರ್ಘ ಅವಧಿಯಲ್ಲಿ ಕೇಂದ್ರದಲ್ಲಿ ಆಡಳಿತ ನಡೆಸಿದ ಕಾಂಗ್ರೆಸ್ ಸರಕಾರ ಯೋಜನೆ ಜಾರಿಗೆ ತಂದಿದೆಯೇ ಎಂದು ಪ್ರಶ್ನಿಸಿದರು..
ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್, ಕೊಡಗು ಜಿಲ್ಲೆಗೆ 5 ರೈತ ಸಂಪರ್ಕ ಕೇಂದ್ರ ನೀಡಿದ್ದು, ಇದರಿಂದ ರೈತರ ಕೃಷಿ ಚಟುವಟಿಕೆಗೆ ಸಹಕಾರಿಯಾಗಲಿದೆ. ಕೃಷಿ ಉಪಕರಣಗಳನ್ನು ಸಬ್ಸಿಡಿಯಲ್ಲಿ ಕೃಷಿಕರಿಗೆ ಸರಕಾರ ಒದಗಿಸುತ್ತಿದೆ. ಮುಂದಿನ ಬಜೆಟ್‍ನಲ್ಲಿ ಕೃಷಿಕರಿಗೆ 10 ಹೆಚ್.ಪಿ ವರೆಗಿನ ಪಂಪ್ಸೆಟ್‍ಗೆ ವಿದ್ಯುತ್ ಒದಗಿಸಲು ಮುಖ್ಯ ಮಂತ್ರಿಗಳಿಗೆ ಮನವಿ ಸಲ್ಲಿಸಿದ್ದೇನೆ. ಸಕಾರತ್ಮಕ ಸ್ಪಂದನೆ ಲಭಿಸಿದೆ ಎಂದು ಹೇಳಿದರು.
ವೇದಿಕೆಯಲ್ಲಿ ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಜಿ.ಪಂ.ಸದಸ್ಯರುಗಳಾದ ಕೆ.ಪಿ.ಚಂದ್ರಕಲಾ, ಪಿ.ಎಂ.ಲತೀಫ್, ಜಿ.ಪಂ. ಸದಸ್ಯೆ ಕುಮುದ ಧರ್ಮಪ್ಪ, ತಾ.ಪಂ.ಉಪಾಧ್ಯಕ್ಷ ಎಂ.ಬಿ.ಅಭಿಮನ್ಯು ಕುಮಾರ್, ತಾ.ಪಂ. ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಓಡಿಯಪ್ಪನ ವಿಮಲಾವತಿ, ತಾ.ಪಂ.ಹೆಚ್.ಡಿ.ಮಣಿ, ಗ್ರಾ.ಪಂ.ಅಧ್ಯಕ್ಷೆ ಶಿವಮ್ಮ ಹಾಗೂ ಗ್ರಾ.ಪಂ.ಉಪಾಧ್ಯಕ್ಷ ಪ್ರಸಾದ್ ಕುಟ್ಟಪ್ಪ ಉಪಸ್ಥಿತರಿದ್ದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಬಾನ ಎಂ.ಶೇಕ್ ಪ್ರಾಸ್ತಾವಿಕವಾಗಿ ಮಾತನಾಡಿ ಇಲಾಖೆಯ ವಿವಿಧ ಸೌಲಭ್ಯಗಳು ಹಾಗೂ ಹಣ್ಣು ಶೈತಾಗೃಹ ಸ್ಥಾಪಿಸಲಾಗುವುದು ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

error: Content is protected !!