ಸಂಭ್ರಮದಿಂದ ಜರುಗಿದ ಮಡಿಕೇರಿಯ ನಾಟ್ಯಕಲಾ ನೃತ್ಯ ಶಾಲೆಯ ವಾರ್ಷಿಕೋತ್ಸವ

ಮಡಿಕೇರಿ ಮಾ.3 : ನಗರದ ನಾಟ್ಯಕಲಾ ನೃತ್ಯ ಶಾಲೆಯ ದ್ವಿತೀಯ ವಾರ್ಷಿಕೋತ್ಸವ ಯುವ ಪ್ರತಿಭೆಗಳ ನೃತ್ಯ ಸಂಭ್ರಮದೊಂದಿಗೆ ನಡೆಯಿತು.
ನೃತ್ಯ ಶಾಲೆಯ ಸಭಾಂಗಣದಲ್ಲಿ ನಡೆದ ವಿವಿಧ ವಿಭಾಗಗಳ ನೃತ್ಯ ಸ್ಪರ್ಧೆಯಲ್ಲಿ ಪುಟಾಣಿಗಳು ಹಾಗೂ ಯುವ ಸಮೂಹ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಫೀ.ಮಾ.ಕೆ.ಎಂ.ಕಾರ್ಯಪ್ಪ ಕಾಲೇಜ್ ನ ಎನ್ಸಿಸಿ ಘಟಕದ ಮೇಜರ್ ಡಾ.ಬಿ.ರಾಘವ ಅವರು ಮಕ್ಕಳಿಗೆ ಶಿಸ್ತಿನ ಪಾಠ ಹೇಳಿದರು. ನೃತ್ಯಾಭ್ಯಾಸವನ್ನು ಮುಂದುವರೆಸಿಕೊಂಡು ಹೋಗುವಂತೆ ಕಿವಿಮಾತು ಹೇಳಿದರು.
ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಪುಟಾಣಿಗಳಲ್ಲಿ ಮಾನಸಿಕ ಮತ್ತು ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸಲು ನೃತ್ಯ ಚಟುವಟಿಕೆಗಳು ಸಹಕಾರಿಯಾಗಿದೆ ಎಂದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ನೃತ್ಯಪಟುಗಳಿಗೆ ಸ್ಫೂರ್ತಿ ತುಂಬಿದರು. ನಾಟ್ಯಕಲಾ ನೃತ್ಯ ಶಾಲೆಯ ನಿರಂತರ ಸಾಂಸ್ಕøತಿಕ ಕಲಾ ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ನೃತ್ಯ ಶಾಲೆಯ ಪ್ರಮುಖ ಹಾಗೂ ನೃತ್ಯ ಸಂಯೋಜಕ ಅಭಿಜಿತ್, ಸಿಗ್ನೆಚರ್ ಡ್ಯಾನ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷ ವಿನೋದ್ ಕರ್ಕೆರ, ರಾಷ್ಟ್ರೀಯ ಕೋಚ್ ಜೋಷಿ ಕುಟ್ಟಪ್ಪ, ಶ್ರೀಸಾಯಿ ಫಿಟ್ನೆಸ್ ಸಂಸ್ಥೆಯ ಪ್ರಮುಖ ಗೋಪಿನಾಥ್ ಮತ್ತಿತರರು ಉಪಸ್ಥಿತರಿದ್ದರು.
ಪ್ರದೀಪ್ ಹಾಗೂ ಅನೂಪ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಭಾಗವಹಿಸಿದ ಎಲ್ಲಾ ಪ್ರತಿಭೆಗಳಿಗೂ ಪದಕ ಮತ್ತು ಪ್ರಮಾಣ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.


