ಕಲ್ಲುಬಾಣೆ ರಸ್ತೆ ಕಾಮಗಾರಿಗೆ ಚಾಲನೆ : ಮತಗಳ ಆಧಾರದಲ್ಲಿ ಅಭಿವೃದ್ಧಿಯಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ : ಎಂಎಲ್‍ಸಿ ವೀಣಾಅಚ್ಚಯ್ಯ ಅಭಿಪ್ರಾಯ

March 3, 2021

ಮಡಿಕೇರಿ ಮಾ.3 : ಯಾವುದೇ ಪಕ್ಷದಿಂದ ಚುನಾವಣೆಯಲ್ಲಿ ಸ್ಪರ್ಧಿಸಿ ಆಯ್ಕೆಗೊಂಡ ಬಳಿಕ ಜನಪ್ರತಿನಿಧಿಗಳು ‘ಸಮಾಜದ ಪ್ರತಿನಿಧಿ’ಗಳೆನಿಸಿಕೊಳ್ಳುತ್ತಾರೆ. ಈ ಹಿನ್ನೆಲೆ ಯಾವುದೇ ಪ್ರದೇಶವನ್ನು ಮತಗಳ ಆಧಾರದಲ್ಲಿ ಪರಿಗಣಿಸದೆ ಅಭಿವೃದ್ಧಿ ಕಾರ್ಯಗಳನ್ನು ತಾರತಮ್ಯವಿಲ್ಲದೆ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯರಾದ ಶಾಂತೆಯಂಡ ವೀಣಾ ಅಚ್ಚಯ್ಯ ಕರೆ ನೀಡಿದರು.
ವಿರಾಜಪೇಟೆ ತಾಲ್ಲೂಕಿನ ಆರ್ಜಿ ಪಂಚಾಯ್ತಿ ವ್ಯಾಪ್ತಿಯ ಕಲ್ಲುಬಾಣೆಯ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ದಕ್ಷಿಣ ಕೊಡಗಿನ ಹಲವೆಡೆಗಳಲ್ಲಿ, ಅಲ್ಪಸಂಖ್ಯಾತರು ಇರುವ ಕಾರಣದಿಂದಾಗಿ ಅಭಿವೃದ್ಧಿ ಕಾಮಗಾರಿಗಳು ನಡೆದಿಲ್ಲವೆಂದು ಆರೋಪಿಸಿದ ಅವರು. ಇಂತಹ ನಡೆ ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲವೆಂದು ಆಡಳಿತ ಪಕ್ಷದ ಧೋರಣೆಯನ್ನು ಕಟುವಾಗಿ ಟೀಕಿಸಿದರು.
ಜನಪ್ರತಿನಿಧಿಗಳು ಎಂದರೆ ಒಂದು ಜನಾಂಗದ ಅಥವ ಒಂದು ಪಕ್ಷದ ವ್ಯಕ್ತಿಯಲ್ಲವೆಂದು ದೃಢವಾಗಿ ನುಡಿದ ಅವರು, ಮತ ನೀಡಿದವರು ಮತ್ತು ಮತ ನೀಡದವರು ಎಂದು ವರ್ಗೀಕರಣ ಮಾಡುವುದರಿಂದ ಅಭಿವೃದ್ಧಿ ಕಾರ್ಯಗಳು ಮರೆಯಾಗಿ, ಪ್ರಗತಿ ಕಾಣದ ಸ್ಥಿತಿ ನಿರ್ಮಾಣವಾಗುತ್ತದೆ. ಗ್ರಾಮ ಪಂಚಾಯ್ತಿಗಳಲ್ಲಿ ಅಯ್ಕೆಗೊಂಡ ಎಲ್ಲಾ ಜನಪ್ರತಿನಿಧಿಗಳು ಪಕ್ಷ ಭೇದ ಮರೆತು ಗ್ರಾಮದ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಹರಿಸುವಂತೆ ಕಿವಿ ಮಾತುಗಳನ್ನಾಡಿದರು.
ಗ್ರಾಮಸ್ಥರ ಆಗ್ರಹ ಪೂರ್ವಕ ಮನವಿ ಹಿನ್ನೆಲೆಯಲ್ಲಿ, ಒಂದೂವರೆ ದಶಕದಿಂದ ದುರಸ್ತಿ ಕಾಣದ ಕಲ್ಲುಬಾಣೆ ರಸ್ತೆ ಕೆಲಸಕ್ಕೆ 5 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಿದ್ದೇನೆ. ಮುಂದೆಯು ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸುವುದಾಗಿ ಭರವಸೆ ನೀಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಆರ್.ಕೆ. ಅಬ್ದುಲ್ ಸಲಾಂ, ಕಲ್ಲುಬಾಣೆ ರಸ್ತೆ ದುರಸ್ತಿಗಾಗಿ ಸಾಕಷ್ಟು ಹೋರಾಟ ನಡೆಸಿದ್ದರು ತಾಲ್ಲೂಕು ಮತ್ತು ಜಿಲ್ಲಾ ಪಂಚಾಯ್ತಿಗಳಿಂದ ಅನುದಾನ ಬಿಡುಗಡೆಗೊಳಿಸಲು ಜನಪ್ರತಿನಿಧಿಗಳು ವಿಫಲವಾಗಿರುವುದಲ್ಲದೆ, ಗ್ರಾಮವನ್ನು ಕಡೆಗಣಿಸಿದ್ದಾರೆ. ಈ ವಿಭಾಗದಲ್ಲಿ ಅಲ್ಪಸಂಖ್ಯಾತರೇ ಹೆಚ್ಚಾಗಿ ನೆಲೆಸಿರುವ ಕಾರಣದಿಂದಾಗಿ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ಒದಗಿಸಲು ಹಿಂದೇಟು ಹಾಕಿರುವುದಾಗಿ ಆರೋಪಿಸಿದರು.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಆರ್ಜಿ ಗ್ರಾಮ ಪಂಚಾಯ್ತಿ ಸದಸ್ಯರಾದ ಕೆ.ಟಿ.ಬಷೀರ್ ಮತ್ತು ಜಹಶೀರ್ ಆಲಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಆರ್ಜಿ ಗ್ರಾಪಂ ಅಧ್ಯಕ್ಷೆ ಹೆಚ್.ಬಿ.ಪಾರ್ವತಿ, ಉಪಾಧ್ಯಕ್ಷರಾದ ಕೆ.ಎನ್. ಉಪೇಂದ್ರ, ಸದಸ್ಯರಾದ ಆಂಜಿಯೊ ವಿಟ್ಟ, ಅನು ಜೋಸೆಫ್, ಜಮಾಯತ್ ಅಧ್ಯಕ್ಷರಾದ ಪಿ.ಕೆ.ಅಫ್ಸಲ್, ಪಿ.ಕೆ.ಹನೀಫ ಮತ್ತು ಗ್ರಾಮಸ್ಥರು ಪಾಲ್ಗೊಂಡಿದ್ದರು.

error: Content is protected !!