ಕಾಫಿ ಬೆಳೆಗಾರರ ಸಂಘ, ಸಂಸ್ಥೆಗಳಿಂದ ಸಿಎಂ ಭೇಟಿ : ಅಗತ್ಯ ನೆರವಿಗೆ ಮನವಿ

ಮಡಿಕೇರಿ ಮಾ.3 : ರಾಜ್ಯದ ಬೆಳೆಗಾರರು ಸಹಕಾರಿ ಬ್ಯಾಂಕ್ ಗಳಲ್ಲಿ ಪಡೆದಿರುವ ಸಾಲದ ಸಂಪೂರ್ಣ ಬಡ್ಡಿ ದರವನ್ನು ಶೇ.3ಕ್ಕೆ ಸೀಮಿತಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ರಾಜ್ಯದ ಪ್ರಮುಖ ಬೆಳೆಗಾರ ಸಂಘಟನೆಗಳು ಮನವಿ ಮಾಡಿವೆ.
ರಾಜ್ಯ ಮುಂಗಡ ಪತ್ರ ಮಂಡನೆ ಸಂದರ್ಭ ರಾಜ್ದದ ರೈತರಿಗೆ ಮುಂಗಡ ಪತ್ರದಲ್ಲಿ ಹೊರೆಯಾಗದಂತೆ ಸಾಕಷ್ಟು ವಿನಾಯಿತಿ ನೀಡುವಂತೆಯೂ ಮುಖ್ಯಮಂತ್ರಿಗಳನ್ನು ಬೆಂಗಳೂರಿನಲ್ಲಿ ಶಾಸಕ ಕೆ.ಜಿ.ಬೋಪಯ್ಯ ನೇತೃತ್ವದಲ್ಲಿ ಭೇಟಿ ಮಾಡಿದ ಸಂದರ್ಭ ಕರ್ನಾಟಕ ಬೆಳೆಗಾರರ ಒಕ್ಕೂಟ ಹಾಗೂ ಕೂರ್ಗ್ ಪ್ಲಾಂಟರ್ಸ್ ಅಸೋಸಿಯೇಷನ್ ನ ನಿಯೋಗದ ಪ್ರಮುಖರು ಕೃಷಿ ಉದ್ಯಮಕ್ಕೆ ವಿವಿಧ ರೀತಿಯ ಸೌಲಭ್ಯ ನೀಡುವಂತೆ ಮನವಿ ಸಲ್ಲಿಸಿದರು.
ಪ್ರಸ್ತುತ ಕೈಗಾರಿಕಾ ವಲಯದಲ್ಲಿ (ಎಂಎಸ್ಎಂಇ ವಲಯ) 10 ಕೋಟಿಯವರೆಗೂ ಸಾಲಗಳನ್ನು ಶೇ.4 ರಷ್ಟು ಬಡ್ಡಿ ದರದಲ್ಲಿ ಕೈಗಾರಿಕಾ ಉದ್ಯಮದ ಬೆಳವಣಿಗೆಗೆ ರಾಜ್ಯ ಸರ್ಕಾರ ಕೆಎಸ್ಎಫ್ಸಿ ಮೂಲಕ ನೀಡುವ ರೀತಿಯಲ್ಲಿಯೇ ಕೃಷಿ ವಲಯದ ಸಾಲವನ್ನೂ ಸಹಕಾರಿ ಬ್ಯಾಂಕುಗಳ ಮೂಲಕ ರೈತರಿಗೆ ವಿಸ್ತರಿಸಲು ಕೋರಿಕೊಂಡರು.
ಸಾಲದ ಮೇಲಿನ ಬಡ್ಡಿ ಪಾವತಿಯು ಈ ಸಂಕಷ್ಟದ ಕಾಲದಲ್ಲಿ ಬೆಳೆಗಾರರಿಗೆ ಬಹಳ ದೊಡ್ಡ ಹೊರೆಯಾಗಿದೆ. ಕೋರೋನಾ ರೋಗದಿಂದಾಗಿ ರಾಜ್ಯದ ಕೃಷಿಕರು ಹಲವಾರು ಸವಾಲುಗಳನ್ನು ಎದುರಿಸಿದ್ದಾರೆ. ಪ್ರಾಕೃತಿಕ ವಿಕೋಪದಿಂದಾಗಿ ಸಾಕಷ್ಟು ನಷ್ಟ ಸಂಭವಿಸಿದ್ದು, ಬಡ್ಡಿ ಪಾವತಿಸುವ ಸ್ಥಿತಿಯಲ್ಲಿ ಕೃಷಿಕರಿಲ್ಲ ಎಂದು ಪ್ರಮುಖರು ಗಮನ ಸೆಳೆದರು.
ಹೆಚ್ಚಿನ ಬಡ್ಡಿದರದಿಂದಾಗಿ ಕೃಷಿ ವಲಯವು ದುರ್ಬಲಗೊಂಡಿದೆ, ಇಂದು ನಿಯಮಿತ ಕೃಷಿ ಪದ್ಧತಿಗಳ ಮೇಲೆ ಹೆಚ್ಚುವರಿ ಬಂಡವಾಳದ ಅಗತ್ಯವಿರುವುದರಿಂದ ಕೈಗೆಟುಕುವ ಬಡ್ಡಿದರದಲ್ಲಿ ಸಾಲ ಮಾಡುವಂತೆ ಮನವಿ ಮಾಡಿದರು.
ಮನವಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಭರವಸೆ ನೀಡಿದರು.
ಇದೇ ಸಂದರ್ಭ ನಿಯೋಗದ ಪದಾಧಿಕಾರಿಗಳು ವಾಣಿಜ್ಯ ಇಲಾಖೆಯ ಸಹಾಯಕ ಮುಖ್ಯ ಕಾರ್ಯದರ್ಶಿ ಐ.ಪಿ.ಎಂ.ಪ್ರಸಾದ್ ಅವರನ್ನೂ ಭೇಟಿಯಾಗಿ ಮುಂಗಡ ಪತ್ರದಲ್ಲಿ ಬೆಳೆಗಾರರಿಗೆ ಸೂಕ್ತ ಅನುಕೂಲ ಕಲ್ಪಿಸುವಂತೆ ಮನವಿ ಮಾಡಿದರು.
ಬೆಳೆಗಾರರ ಒಕ್ಕೂಟದ ಉಪಾಧ್ಯಕ್ಷ ನಂದಾಬೆಳ್ಳಿಯಪ್ಪ, ಕಾರ್ಯದರ್ಶಿ ಕೃಷ್ಣಪ್ಪ, ಖಚಾಂಚಿ ರಾಜೀವ್, ಸಂಘಟನಾ ಕಾರ್ಯದರ್ಶಿ ಕೆ.ಕೆ.ವಿಶ್ವನಾಥ್, ರತ್ನಾಕರ್, ಕೊಡಗು ಪ್ಲಾಂಟರ್ಸ್ ಅಸೋಸಿಯೇಷನ್ ಅಧ್ಯಕ್ಷ ರಾಮನಾಥನ್ ನಾಗಪ್ಪನ್, ಮಾಜಿ ಅಧ್ಯಕ್ಷ ಪೀಟು ಕಾರ್ಯಪ್ಪ, ಪದಾಧಿಕಾರಿ ಪ್ರದೀಪ್ ಪೂವಯ್ಯ, ಸದಸ್ಯ ಕೈಬುಲೀರ ಹರೀಶ್ ಅಪ್ಪಯ್ಯ ಮತ್ತಿತರರು ನಿಯೋಗದಲ್ಲಿದ್ದರು.
