ಸಣ್ಣ ಕತೆ : *****ಪ್ರೀತಿಗೊಂದು ಬಣ್ಣ *****

March 3, 2021

‘ ಹೇ. ನಾಳೆ ಹೋಳಿ ಹಬ್ಬ ಅಲ್ವೇನೋ. ಒಂದಿಷ್ಟು ನಿನಗೆ ಬಣ್ಣ ಹಚ್ಚಿ ಖುಷಿ ಪಡಬೇಕು ಅಂತಾ ಇದ್ದೇನೆ. ಹಚ್ಚಿದ ಬಣ್ಣ ಎರಡು ವಾರ ಆದರೂ ಇರಬೇಕು, ಆ ರೀತಿ ಹಚ್ಚಬೇಕು ಅನ್ನೋದು ನನ್ನ ಆಸೆ .. ಹ್ಹಾ ಹ್ಹಾ ‘

ಆಕೆ ಫೋನ್ ನಲ್ಲಿ ದೊಡ್ಡದಾಗಿ ಗಹಗಹಿಸಿ ನಕ್ಕಿದ್ದನ್ನು ಕೇಳಿ ರಾಜೇಶ್ ತುಟಿಯಲ್ಲೂ ನಗು ಮೂಡಿತು. ‘ ಅದಕ್ಕೇನಂತೆ. ನಿನ್ನ ಮನೆಗೆ ಬರ್ತೇನೆ. ಅಲ್ಲೇ ಹಚ್ಚುವಿಯಂತೆ. ಓಕೆ ನಾ ‘ ಉತ್ತರಿಸಿದ.

‘ ವೆಲ್ ಕಮ್ ‘ ಎಂದು ಉಲಿದು ಮತ್ತೆ ಇನ್ನೇನೋ ಒಂದಿಷ್ಟು ಹರಟಿ ಫೋನ್ ಆಫ್ ಮಾಡಿದ ಭಾವನಾಳ ಮನದ ತುಂಬಾ ಏನೇನೋ ನವಿರು ಭಾವನೆಗಳು. ‘ ನಾನು ಮಾಡ್ತಾ ಇರೋದು.. ಸರಿಯೋ.. ತಪ್ಪೋ .. ಎನ್ನುವ ಕಳವಳ ಕೂಡಾ ಮೂಡಿತು. ಹಾಗೆಯೇ ಆರಾಮ ಕುರ್ಚಿಯಲ್ಲಿ ಒರಗಿದವಳಿಗೆ ಹಿಂದಿನದೆಲ್ಲಾ ಮನದ ತುಂಬಾ ಚಲನ ಚಿತ್ರದ ತೆರದಿ ಮೂಡಿತು.

ಮಗಳು ಕಾಲೇಜ್ ಓದುವಾಗಲೇ ತನ್ನ ಗಂಡ ತೀರಿಕೊಂಡದ್ದು, ಮಗಳು ಡಾಕ್ಟರಿಕೆ ಮುಗಿಸಿ ತಮ್ಮ ನೆಂಟರ ಪೈಕಿಯೇ ಒಬ್ಬಾತನನ್ನು ಮೆಚ್ಚಿ ಮದುವೆ ಆಗಿದ್ದು, ಆಮೇಲೆ ಅವರಿಬ್ಬರೂ ಆಸ್ಟ್ರೇಲಿಯಾಕ್ಕೆ ಹೋಗಿ ನೆಲೆಸಿದ್ದು. ‘ ಇಲ್ಲೇ ಬಂದು ನಮ್ಮನೊಡನೆಯೇ ಇದ್ದು ಬಿಡು ಎಂದು ಮಗಳು ಒತ್ತಾಯಿಸಿದರೂ, ವರ್ಷಕ್ಕೊಮ್ಮೆ ಒಂದೆರಡು ತಿಂಗಳು ಮಾತ್ರ ಅಲ್ಲಿದ್ದು ಬರುವ ಪರಿಪಾಠ ಬೆಳೆಸಿಕೊಂಡದ್ದು, ಈ ಮಣ್ಣಿನ ಆಪ್ತತೆ ಅಲ್ಲಿ ಮೂಡದೇ ಇದ್ದಿದ್ದು ಎಲ್ಲಾ ನೆನಪಾಯ್ತು.

ಏಕಾಂಗಿತನ ಹೊಡೆದೋಡಿಸಲು ಫೇಸ್ ಬುಕ್ ನಲ್ಲಿ ರಿಜಿಸ್ಟರ್ ಮಾಡಿಕೊಂಡಾಗ ದೊರೆತ ಫ್ರೆಂಡ್ಸ್ ಪೈಕಿ, ಇದೇ ಊರಿನಲ್ಲಿ ಇದ್ದ ರಾಜೇಶ್ ತುಂಬಾ ಕ್ಲೋಸ್ ಆದ ಮೇಲೆ, ತನ್ನ ಯಾಂತ್ರಿಕ ಜೀವನದಲ್ಲಿ ಏನೋ ಬದಲಾವಣೆ ಕಾಣಿಸಿಕೊಂಡಿದ್ದು ಆಕೆಗೆಯೇ ಆಶ್ಚರ್ಯ ಆಗಿತ್ತು. ಆತನ ಮಗ, ಸೊಸೆ, ಮೊಮ್ಮಕ್ಕಳು ಸ್ಟೇಟ್ಸ್ ನಲ್ಲೆ ಸೆಟ್ಲ್ ಆಗಿದ್ದು, ಡಿಸೆಂಬರ್ ನಲ್ಲಿ ಬಂದು ಒಂದೆರಡು ವಾರ ಬಂದು ಜೊತೆಗಿದ್ದು ಹೋಗ್ತಾ ಇರೋದು ಬಿಟ್ರೆ, ಆತನಿಗೂ ಬೇರೆ ಯಾವುದೇ ಹತ್ತಿರದ ಸಂಬಂಧಗಳು ಇಲ್ಲಾ ಎಂದು ತಿಳಿದ ಮೇಲೆ ಈ ಇಳಿವಯಸ್ಸಿನಲ್ಲೂ ಏನೇನೋ ಭಾವನೆಗಳು ಮೂಡಿ, ಆತನ ನೆನಪುಗಳೇ ಕಾಡಲು ಆರಂಭಿಸಿದಾಗ, ಏನೋ ಹಿತವಾದ ಗಲಿಬಿಲಿ ಅನುಭವಿಸಿದ್ದು ಎಣಿಸಿ ಮುಗುಳ್ನಗೆಯೊಂದು ಮೂಡಿತು.

ವಾರಕ್ಕೊಮ್ಮೆ ಭೇಟಿ ಆಗುತಿತ್ತು. ಜೊತೆಯಲ್ಲಿ ಒಂದಿಷ್ಟು ವಾಕ್ ಮಾಡಿ, ರೆಸ್ಟುರಾದಲ್ಲೋ ಇಲ್ಲಾ ಐಸ್ ಕ್ರೀಮ್ ಪಾರ್ಲರ್ ನಲ್ಲೋ ಸಂಭಾಷಣೆ ಮುಕ್ತಾಯವಾಗುತಿತ್ತು. ದಿನಾಲೂ ಫೋನ್ ನಲ್ಲಿ ಮಾತುಕತೆ ಅಂತೂ ಇದ್ದೇ ಇರುತಿತ್ತು. ಆದರೂ, ಏನೋ ಹೇಳಲಾಗದ ಭಾವ. ಏನೋ. ಹೀಗೆ ದಿನವಿಡೀ ಆತನ ಜೊತೆ ಹರಟುತ್ತಾ ಇರಬೇಕು ಎನ್ನುವ ಗೀಳು, ಬಿಡಲಾಗದ ವ್ಯಸನವಾದೀತೇ ಎಂಬ ಅಳುಕು ಕೂಡಾ ಆಗಾಗ ಕಾಡುತಿತ್ತು. ಆದರೂ, ಮನಸ್ಸು ಎಂಬುದು ಕಡಿವಾಣ ಇಲ್ಲದ ಹುಚ್ಚು ಕುದುರೆಯಂತೆ ಕೆನೆಯುತ್ತಲಿತ್ತು.

ನಾಳೆ ಆತ ಬಂದಾಗ ಹಾಗೆ ಮಾಡಬೇಕು, ಹೀಗೆ ಮಾಡಬೇಕು, ಆತನ ಪ್ರತಿಕ್ರಿಯೆ ಹೇಗಿರುತ್ತೋ ಎಂಬ ಯೋಚನೆಯಲ್ಲೇ ದಿನ ಕಳೆದು ಹೋಯ್ತು. ಪ್ರಾಯ ಕಳೆದಂತೆ ಅರಳು ಮರಳು ಆಗುತ್ತಂತೆ… ಹಾಗೆ ತನಗೇನಾದರೂ ಆಯ್ತೋ… ಯಾಕೆ ಹೀಗೆ ತನ್ನಲ್ಲಿ ಈ ಬದಲಾವಣೆ .. ಅದೇ ಉತ್ತರವಿಲ್ಲದ ಪ್ರಶ್ನೆ .. ಪುನಃ ತಿವಿಯಲು ಆರಂಭಿಸಿದಾಗ ಮುಖಕ್ಕೆ ದಿಂಬು ಅವುಚಿ ನಿದ್ದೆಗೆ ಶರಣಾಗಿದ್ದಳು ಭಾವನಾ.

ಬೆಳಗಾಯ್ತು. ರಾಜೇಶ್ ಮನದಲ್ಲೂ ಏನೋ ಕಂಪನ. ಆಕೆಯ ಸಾಮಿಪ್ಯ, ಯೋಚನೆ ಬಿಡಬೇಕು ಎಂದುಕೊಂಡರೂ ಬಿಡಲಾಗದ ಸೆಳೆತ. ಆಕೆಯ ತುಂಟತನದ ಮಾತುಗಳು, ಹೊಳೆಯುವ ಕಣ್ಣುಗಳು, ವಯಸ್ಸಾದರೂ ಅದನ್ನು ಒಪ್ಪದ ಆಕೆಯ ಉತ್ಸಾಹದ ಪರಿ ಆತನಲ್ಲೂ ಬದಲಾವಣೆ ತಂದಿತ್ತು. ಎಂದೋ ಗತಿಸಿಹೋದ ಪತ್ನಿಯ ನಂತರ ಹೆಣ್ಣಿನ ಸಂಪರ್ಕವೇ ಇರದ ಆತನಿಗೆ ಈಕೆ ಒಂದು ಆಕರ್ಷಣೆ ಆಗಿದ್ದೂ ಸಹಜವೇ ಆಗಿತ್ತು. ನೀಟಾಗಿ ಶೇವ್ ಮಾಡಿದ ತನ್ನ ಮುಖವನ್ನು, ಕನ್ನಡಿಯಲ್ಲಿ, ವಿವಿಧ ಕೋನಗಳಲ್ಲಿ ನೋಡಿಕೊಂಡು ಹೊರ ಬಿದ್ದ ರಾಜೇಶ್.

ದಾರಿಯುದ್ದಕ್ಕೂ ಅಲ್ಲಲ್ಲಿ ತರುಣರು, ತರುಣಿಯರು ಪರಸ್ಪರ ಒಂದಷ್ಟು ಬಣ್ಣ ಎರಚಿ ಸಂಭ್ರಮ ಪಡುತಿದ್ದನ್ನು ನೋಡುತ್ತಾ, ಕಾರು ಚಲಾಯಿಸುತ್ತಿದ್ದ ರಾಜೇಶ್ ಮನದ ತುಂಬಾ, ತನಗೆ ಆಕೆ ಹೇಗೆ ಬಣ್ಣ ಬಳಿಯಬಹುದು ? ತಾನೂ ಆಕೆಗೆ ಬಣ್ಣ ಬಳಿಯುವುದು ಬೇಡವೇ ಎಂಬ ಯೋಚನೆ ಮನೆಮಾಡಿತ್ತು. ತನಗೂ ಅವಳ ಮೇಲೆ ಆಸೆ ಇದೆ, ಆಕೆ ತನಗೆ ತಕ್ಕ ಜೋಡಿ ಎನ್ನುವುದು ಅರಿವಿತ್ತು. ಕೇಳಿದರೆ ಇಲ್ಲಾ ಎನ್ನಲಾರಳು ಎನ್ನುವ ಹುಂಬ ಧೈರ್ಯವೂ ಇತ್ತು. ಅಲ್ಲೇ ಎದುರಲ್ಲಿ ಒಂದು ಸಣ್ಣ ಗುಡಿ ಕಂಡಿತು. ಕಾರು ನಿಲ್ಲಿಸಿ ಪಕ್ಕದಲ್ಲಿದ್ದ ಗೂಡಂಗಡಿಯಲ್ಲಿ ಒಂದೆರಡು ಸಣ್ಣ ಸಣ್ಣ ಬಣ್ಣದ ಪ್ಯಾಕೆಟ್ ಪರ್ಚೆಸ್ ಮಾಡಿದ. ಕಂಪೌಂಡ್ ಹೊರಗಡೆ ಕಾರು ಪಾರ್ಕ್ ಮಾಡಿ, ಕಿಸೆಯಲ್ಲಿದ್ದ ಬಾಚಣಿಗೆ ತೆಗೆದು, ತಲೆಕೂದಲ ಮೇಲೆ ಓಡಿಸಿ, ಆಕೆಯ ಮನೆಯ ಡೋರ್ ಬೆಲ್ ಪ್ರೆಸ್ ಮಾಡಿದಾಗ ಆತನ ಎದೆಯೂ ನಗಾರಿ ಬಾರಿಸಿತ್ತು.

ಬಾಗಿಲು ತೆರೆದವಳು ಹಾರ್ದಿಕವಾಗಿ ನಕ್ಕು ವೆಲ್ ಕಮ್ ಹೇಳಿದಾಗ ‘ ಹ್ಯಾಪಿ ಹೋಳಿ ‘ ಎಂದು ಮುಗುಳ್ನಗೆ ಬೀರಿದ. ಆಮೇಲೆ ಅದೂ ಇದೂ ಮಾತಾಡ್ತಾ ಒಂದರ್ಧ ಘಂಟೆ ಕಳೆಯಿತು. ಕಾಫಿ, ಬಿಸ್ಕತ್ ಸಮಾರಾಧನೆ ಕೂಡಾ ಆಯ್ತು. ಕುಳಿತಿದ್ದವನು ಎದ್ದು ನಿಂತು ‘ ಬರ್ತೇನೆ ‘ ಎಂದು ಹೊರಡಲು ಅನುವಾದ.

‘ ಒಂದೈದು ನಿಮಿಷ ಕುಳಿತುಕೊಳ್ಳೋ .. ‘ ಆಕೆಯ ಕೋರಿಕೆ ಕೇಳಿ ಪುನಃ ಕುಳಿತ.

ಆಕೆ ಒಂದು ಟವೆಲ್ ತಂದು ಆತನ ಕುತ್ತಿಗೆಯ ಸುತ್ತ ಹಾಕಿದಳು. ‘ ಕಣ್ಣು ಮುಚ್ಚಿಕೋ ‘ ಹೇಳಿದ್ದನ್ನು ಕೇಳಿ ಆಶ್ಚರ್ಯವಾದರೂ ಕಣ್ಣು ಮುಚ್ಚಿ ಕುಳಿತ. ತಲೆಗೆ ಏನೋ ಸವರಿದಂತೆ, ಕೈ ಬೆರಳುಗಳಲ್ಲಿ ನಯವಾಗಿ ತೀಡಿದಂತೆ ಅನುಭವ. ‘ ಯಸ್ .. ಬಾಸ್..ಆಯ್ತು.. ‘ ಎಂದು ಆಕೆ ಹೇಳಿದ್ದು ಕೇಳಿ ಕಣ್ಣು ತೆರೆದ.

‘ ಶವರ್ ಆನ್ ಮಾಡಿ ತಲೆ ತೊಳೆದುಕೊಂಡು ಬಾ ‘ ಹೇಳಿದ್ದು ಕೇಳಿ, ಕೈಗಳಿಂದ ತಲೆ ಮುಟ್ಟಲು ಹೋದ. ‘ ಹೇ.. ಬೇಡಾ.. ಏನೂ ಹೆದರಿಕೊಳ್ಳಬೇಡಾ. ಅಲ್ಲಲ್ಲಿ ಬಿಳಿ ಬಿಳಿಯಾದ ಕೂದಲು ಕಾಣದಂತೆ ಫುಲ್ ಕಪ್ಪು ಹೇರ್ ಕಲರ್ ಹಚ್ಚಿದ್ದೇನೆ ಅಷ್ಟೇ . ಚೆನ್ನಾಗಿ ತಲೆ ವಾಷ್ ಮಾಡಿಕೊಂಡ ಬಾ ‘ ಎಂದು ನಕ್ಕವಳನ್ನೇ ನೋಡಿ ತಾನೂ ನಗುತ್ತಾ ವಾಷ್ ರೂಮ್ ಗೆ ಹೋದಾ. ಎಲ್ಲಾ ಮುಗಿಸಿ ಅಲ್ಲೇ ಇದ್ದ ಕನ್ನಡಿಯಲ್ಲಿ ಮುಖ ನೋಡಿಕೊಂಡರೆ, ತಾನು ಸುಮಾರು ಹತ್ತು ಹದಿನೈದು ವರ್ಷಗಳಷ್ಟು ಹಿಂದೆ ಇದ್ದಂತೆ ಕಾಣಿಸಿತು.

ಒಂಥರಾ ಸಂಕೋಚದಿಂದಲೇ ಹೊರಗೆ ಬಂದ ರಾಜೇಶ್ ನನ್ನು ನೋಡಿ, ಸಣ್ಣಗೇ ವಿಸಿಲ್ ಹಾಕಿ ಕಣ್ಣು ಹೊಡೆದಳು ಭಾವನಾ. ‘ ನಾನು ಇಲ್ಲಿಗೆ ಬಂದಿದ್ದೇ ತಪ್ಪಾಯ್ತು. ನಿನ್ನ ಕೈಲಿ ಸಿಕ್ ಹಾಕ್ಕೊಂಡೆ ‘ ರಾಜೇಶ್ ಹುಸಿಗೋಪ ಪ್ರದರ್ಶಿಸಿದ.

‘ ಕಪ್ಪು ಬಣ್ಣದಲ್ಲೂ ಸಂತೋಷ ಸಿಗುತ್ತೆ ಅಂತಾ ಗೊತ್ತಾಗಿದ್ದೇ ಇವತ್ತು ‘ ವೇದಾಂತ ಮಾತಾಡಿದವಳನ್ನೇ ದಿಟ್ಟಿಸಿದ ರಾಜೇಶ್ . ಕೇಳಿದ ‘ ನಾನೂ. ನಿನಗೆ ಬಣ್ಣ ಹಾಕಲಾ ? ‘

‘ ಹೂಂ. ವೆಲ್ ಕಮ್ ‘ ಎಂದವಳ ಮುಖವನ್ನೇ ದಿಟ್ಟಿಸುತ್ತಾ ರಾಜೇಶ್ ಕಿಸೆಯಿಂದ ಅರಶಿನ, ಕುಂಕುಮದ ಪ್ಯಾಕೆಟ್ ಹೊರಗೆ ತೆಗೆದು ‘ ಓಕೆ ನಾ ‘ ಎಂದ.

ಸಣ್ಣಗೇ ನಡುಗಿದ ಆಕೆ ‘ ಯಾರಾದ್ರೂ ಏನಾದಾರೂ ಅಂದರೆ …. ‘

‘ ಬೇರೆಯವರ ವಿಷಯ ಆಮೇಲೆ. ನನ್ನ ಮಗ, ಸೊಸೆ ಏನೂ ಅನ್ನಲಿಕ್ಕಿಲ್ಲಾ ಅನ್ನೋದು ನನ್ನ ಭಾವನೆ… ‘ ಮಾತನ್ನು ಅಲ್ಲೇ ನಿಲ್ಲಿಸಿದ.

‘ ನನ್ನ ಮಗಳದ್ದೂ ಆಕ್ಷೇಪಣೆ ಇರಲಿಕ್ಕಿಲ್ಲಾ .. ಆದರೂ … ‘ ತಲೆ ತಗ್ಗಿಸಿದವಳ ಗದ್ದ ಹಿಡಿದೆತ್ತಿದವ ಹೇಳಿದ ‘ ನಿನ್ನ ಅಭಿಪ್ರಾಯ ಮೊದಲು ಹೇಳು… ‘

‘ … ಹೂಂ .. ‘ ಮೆಲ್ಲನೆ ಉಲಿದವಳ ಹಣೆಗೆ ಕುಂಕುಮ ಇರಿಸಿ, ಗಲ್ಲದ ತುಂಬಾ ಅರಸಿನ ಹಚ್ಚಿದ.

ಕುಮಾರ್ ಕೆ. ವಿ
ಮಂಗಳೂರು
kvkumarmr@ gmail.com

error: Content is protected !!