ಭಾರೀ ಗಾಳಿಗೆ ಹೆದ್ದಾರಿಗೆ ಉರುಳಿದ ಮರಗಳು : ಸುಂಟಿಕೊಪ್ಪದಲ್ಲಿ ಘಟನೆ

March 4, 2021

ಮಡಿಕೇರಿ ಮಾ.3 : ಸುಂಟಿಕೊಪ್ಪ ಸುತ್ತಮುತ್ತಲ್ಲ ವ್ಯಾಪ್ತಿಯಲ್ಲಿ ಬೀಸಿದ ಭಾರೀ ಗಾಳಿಗೆ ರಾಷ್ಟ್ರೀಯ ಹೆದ್ದಾರಿ ಮತ್ತು ರಾಜ್ಯ ಹೆದ್ದಾರಿಗೆ ಅಡ್ಡಲಾಗಿ ವಿವಿಧ ಕಡೆಗಳಲ್ಲಿ ಒಟ್ಟು 3 ಬೃಹತ್ ಮರಗಳು ಉರುಳಿ ಬಿದ್ದ ಘಟನೆ ನಡೆದಿದೆ. ಇದರಿಂದಾಗಿ ಹೆದ್ದಾರಿ ವಾಹನ ಸಂಚಾರ ಕೆಲ ಕಾಲ ಸ್ಥಗಿತಗೊಂಡಿತ್ತು.
ಮಂಗಳವಾರ ರಾತ್ರಿ ವೇಳೆ ಮಾದಾಪುರ ರಸ್ತೆಯ ಪನ್ಯದ ಸಮೀಪವಿರುವ ಮಾರಿಯಮ್ಮ ದೇವಾಲಯದ ಬಳಿಯಲ್ಲಿ ಬಿರುಗಾಳಿಗೆ ಭಾರಿ ಗಾತ್ರದ ಮರ ಬುಡ ಸಹಿತ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಇದರಿಂದ 3 ವಿದ್ಯುತ್ ಕಂಬಗಳು ಉರುಳಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿತ್ತು. ಸೆಸ್ಕ್ ಇಲಾಖೆಯ ಸುಂಟಿಕೊಪ್ಪ ಮತ್ತು ಮಾದಾಪುರ ಸಿಬ್ಬಂದಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರ ಮತ್ತು ವಿದ್ಯುತ್ ಸಂಪರ್ಕ ಸರಿಪಡಿಸಿದರು.
ರಾಷ್ಟ್ರೀಯ ಹೆದ್ದಾರಿ ಕೊಡಗರಹಳ್ಳಿ ಮಾರುತಿ ನಗರದ ಸಮೀಪ ಬೆಳಿಗ್ಗೆ ಅಂದಾಜು 11 ಗಂಟೆಯ ಸಮಯದಲ್ಲಿ ಬೀಸಿದ ಭಾರಿ ಗಾಳಿಗೆ ಮರವೊಂದು ಹೆದ್ದಾರಿಗೆ ಅಡ್ಡಲಾಗಿ ಬಿದ್ದಿದ್ದು, ದ್ವಿಚಕ್ರ ವಾಹನದಲ್ಲಿ ಕುಶಾಲನಗರದಿಂದ ಮಡಿಕೇರಿ ಕಡೆಗೆ ಆಗಮಿಸುತ್ತಿದ್ದ ದಂಪತಿಗಳು ಕೂಡ ಸಿಲುಕಿಕೊಂಡಿದ್ದರು. ಅದೃಷ್ಟವಶಾತ್ ಯಾವುದೇ ರೀತಿಯ ಗಾಯಗಳಾಗದೇ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಸಂದರ್ಭ ಕೆಲವು ಗಂಟೆಗಳ ಕಾಲ ವಾಹನ ಸಂಚಾರ ಸ್ಥಗಿತಗೊಂಡಿತು. ಬಳಿಕ ಮರವನ್ನು ಕತ್ತರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
ಕೆದಕಲ್ ಭದ್ರಕಾಳೇಶ್ವರಿ ದೇವಸ್ಥಾನದ ಸಮೀಪ ಬಾರಿ ಗಾತ್ರದ ಮರವೊಂದು ಗಾಳಿ ಮಳೆಗೆ ಧರೆಗುರುಳಿದ್ದು ಪೊಲೀಸರು ಗ್ರಾಮಸ್ಥರು ಸೇರಿ ಮರವನ್ನು ತೆರವುಗೊಳಿಸಿ ವಾಹನ ಸಂಚಾರಕ್ಕೆ ರಸ್ತೆಯನ್ನು ಮುಕ್ತಗೊಳಿಸಿದರು.

error: Content is protected !!