ಕಂದಾಯ ಅಧಿಕಾರಿಗಳ ಸಭೆ : ಕಸ ವಿಲೇವಾರಿಗೆ ಜಾಗ ಗುರುತಿಸಿ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸೂಚನೆ

March 4, 2021

ಮಡಿಕೇರಿ ಮಾ.4 : ಕಸ ವಿಲೇವಾರಿ ಮಾಡಲು ಜಾಗಗಳನ್ನು ಗುರುತಿಸಿ ತ್ವರಿತವಾಗಿ ಸರ್ವೇ ಕಾರ್ಯ ಮುಗಿಸಿ ವರದಿ ನೀಡುವಂತೆ ಜಿಲ್ಲಾಧಿಕಾರಿ ಚಾರುಲತ್ ಸೋಮಲ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ನಡೆದ ಕಂದಾಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಸ ವಿಲೇವಾರಿ ಸಂಬಂಧಿಸಿದಂತೆ ಸರ್ವೇ ಆಗಿರುವ ಜಾಗಗಳ ವರದಿ ಸಲ್ಲಿಸಬೇಕು ಜಾಗವಿಲ್ಲದ ಕಡೆ ಬದಲಿ ಜಾಗ ಗುರುತಿಸಿ ವರದಿ ನೀಡಬೇಕು. ಯಾವುದೇ ರೀತಿಯ ವಿಳಂಬಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಕಸವಿಲೇವಾರಿ ಮತ್ತು ನಿವೇಶನಕ್ಕಾಗಿ ಅವಶ್ಯವಿರುವ ಜಾಗಗಳ ಬಗ್ಗೆ ತಾಲ್ಲೂಕು ಹಾಗೂ ಹೋಬಳಿವಾರು ವರದಿ ನೀಡುವಂತೆ ಜಿ.ಪಂ.ಯೋಜನಾ ನಿರ್ದೇಶಕರಿಗೆ ಜಿಲ್ಲಾಧಿಕಾರಿ ಅವರು ಸೂಚಿಸಿದರು.
ಜಿಲ್ಲೆಯಲ್ಲಿನ ಅಂಗನವಾಡಿ ಮತ್ತು ವಸತಿ ನಿಲಯ ಸಮುದಾಯಗಳಿಗೆ ಸ್ವಂತ ಕಟ್ಟಡವಿಲ್ಲದಿದ್ದರೆ ತಾಲ್ಲೂಕು ಮತ್ತು ಗ್ರಾಮವಾರು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಬೆಳೆ ಸಮೀಕ್ಷೆ ಬಗ್ಗೆ ಈಗಾಗಲೇ ಗ್ರಾಮ ಲೆಕ್ಕಾಧಿಕಾರಿಗಳಿಗೆ ತರಬೇತಿಯನ್ನು ನೀಡಿರುವುದರಿಂದ ಬೆಳೆ ಸಮೀಕ್ಷೆ ಕಾರ್ಯವನ್ನು ಪೂರ್ಣಗೊಳಿಸಲು ಕ್ರಮಕೈಗೊಳ್ಳುವಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅವರು ತಿಳಿಸಿದರು.
ಈಗಾಗಲೇ ಅರಣ್ಯ ಹಕ್ಕು ಪತ್ರ ನೀಡಲಾಗಿರುವುದಕ್ಕೆ ಆರ್‍ಟಿಸಿ ನೀಡಬೇಕು. ಆರ್‍ಟಿಸಿ ಆಗಿರದ ಅರ್ಜಿಗಳನ್ನು ಶಿರ್ಘವೇ ಅರ್‍ಟಿಸಿ ಮಾಡಿಸಲು ಕ್ರಮವಹಿಸುವಂತೆ ಐಟಿಡಿಪಿ ಅಧಿಕಾರಿಗಳಿಗೆ ತಿಳಿಸಿದರು.
ಭೂಮಿ ಮತ್ತು ಸಕಾಲದಲ್ಲಿ ಬಂದ ಅರ್ಜಿಗಳ ವಿಲೇವಾರಿಯಲ್ಲಿ ವಿಳಂಬವಾಗಬಾರದು ಅವುಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.
ಪಿಂಚಣಿ ಅದಾಲತ್ ಹಾಗೂ ಕಂದಾಯ ಅದಾಲತ್ ಗಳನ್ನು ಸರಿಯಾದ ವೇಳೆಯಲ್ಲಿ ಮಾಡಬೇಕು. ಮತ್ತು ಅಲ್ಲಿ ಸ್ವೀಕರಿಸಿದ ಅರ್ಜಿಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು.
ರೈತರ ಆತ್ಮಹತ್ಯೆ ಪ್ರಕರಣದ ಮಾಹಿತಿಯನ್ನು ಒದಗಿಸಲು ವಿಳಂಬವಾಗದಂತೆ ಹಾಗೂ ಸ್ಮಶಾನಗಳಿಗೆ ಜಾಗವಿಲ್ಲದಿದ್ದರೆ ಪರ್ಯಾಯ ಜಾಗ ಗುರುತಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಡಿ.ರೂಪ ಅವರು ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕಾರ ನಿಂಗರಾಜು ಅವರು ಮಾತನಾಡಿ ಜಿಲ್ಲೆಯಲ್ಲಿ 163 ಅಂಗನವಾಡಿ ಕೇಂದ್ರಗಳಿಗೆ ಸ್ವಂತ ಕಟ್ಟಡವಿಲ್ಲ ಎಂದು ಮಾಹಿತಿ ನೀಡಿದರು.
ಐಟಿಡಿಪಿ ಇಲಾಖಾ ಅಧಿಕಾರಿ ಸಿ.ಶಿವಕುಮಾರ್ ಅವರು ಅರಣ್ಯ ಹಕ್ಕು ಪತ್ರ ನೀಡಿರುವುದಕ್ಕೆ ಕೆಲವು ಕಡೆಗಳಲ್ಲಿ ಆರ್‍ಟಿಸಿ ನೀಡಬೇಕಿದೆ ಎಂದು ಜಿಲ್ಲಾಧಿಕಾರಿ ಅವರ ಗಮನಕ್ಕೆ ತಂದರು.
ಬೆಳೆ ಸಮೀಕ್ಷೆ ಬಗ್ಗೆ ತಾಲ್ಲೂಕು ಸಮಿತಿ ಮಾಡಿ ಪ್ರತಿಯೊಂದು ಗ್ರಾಮಕ್ಕೆ ಹೋಗಿ ಸರ್ವೇ ಮಾಡಲು ಈಗಾಗಲೇ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಶಬಾನಾ ಎಂ.ಷೇಕ್ ಅವರು ತಿಳಿಸಿದರು.
ಉಪ ವಿಭಾಗಾಧಿಕಾರಿ ಈಶ್ವರ ಕುಮಾರ್, ಜಿ.ಪಂ.ಯೋಜನಾ ನಿರ್ದೇಶಕರಾದ ಶ್ರೀಕಂಠಮೂರ್ತಿ, ಡಿಡಿಎಲ್‍ಆರ್ ಶ್ರೀನಿವಾಸ್ ಅವರು ಸಭೆಯಲ್ಲಿ ಹಲವು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆಯ ಉಪ ನಿರ್ದೇಶಕರಾದ ಶಶಿಧರ್, ತಹಶೀಲ್ದಾರರಾದ ಮಹೇಶ್, ಗೋವಿಂದರಾಜು, ಯೋಗಾನಂದ, ಭೂದಾಖಲೆಗಳ ಸಹಾಯಕ ನಿರ್ದೇಶಕರಾದ ವಿರೂಪಾಕ್ಷ, ಶಿರಸ್ತೇದಾರರು, ಪಶುಪಾಲನಾ ಇಲಾಖೆಯ ಉಪ ನಿರ್ದೇಶಕರಾದ ಸುರೇಶ್ ಭಟ್, ಇತರರು ಇದ್ದರು.

error: Content is protected !!