ಸರ್ಕಾರದ ವಿರುದ್ಧ ಮಾ.27 ರಂದು ಮಡಿಕೇರಿಯಲ್ಲಿ ಕಾಂಗ್ರೆಸ್ “ಜನಧ್ವನಿ ” ಕಾರ್ಯಕ್ರಮ

March 4, 2021

ಮಡಿಕೇರಿ ಮಾ.4 : ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಕಾಂಗ್ರೆಸ್ ಪಕ್ಷದ ವತಿಯಿಂದ ಹೋರಾಟದ ಒಂದು ಭಾಗವಾಗಿ “ಜನಧ್ವನಿ” ಕಾರ್ಯಕ್ರಮವನ್ನು ಮಾ.27 ರಂದು ಮಡಿಕೇರಿಯಲ್ಲಿ ಆಯೋಜಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ನಗರದಲ್ಲಿ ಪಕ್ಷದ ಕಚೇರಿಯಲ್ಲಿ ನಡೆದ ಮಡಿಕೇರಿ ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಬಿಜೆಪಿ ನೇತೃತ್ವದ ಸರ್ಕಾರಗಳ ತಪ್ಪು ನಿರ್ಧಾರಗಳಿಂದಾಗಿ ಇಂದು ಜನಸಾಮಾನ್ಯರು ಆರ್ಥಿಕ ಹಿನ್ನಡೆಯೊಂದಿಗೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಆರೋಪಿಸಿದರು. ಪ್ರತಿದಿನ ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಲೇ ಇದ್ದು, ಜನ ನೋವಿನಲ್ಲೇ ದಿನ ದೂಡುತ್ತಿದ್ದಾರೆ. ಆದ್ದರಿಂದ ನೊಂದ ಜನರ ಧ್ವನಿಯಾಗಿ ಕಾಂಗ್ರೆಸ್ ಪಕ್ಷ ಕೆಲಸ ಮಾಡಲು ಹೊರಟಿದೆ ಎಂದು ತಿಳಿಸಿದರು.
ಮಾ.27 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಆಯೋಜಿಸಿರುವ ಜನಧ್ವನಿ ಕಾರ್ಯಕ್ರಮದ ಭಾಗವಾಗಿ ಮಡಿಕೇರಿ ನಗರದಲ್ಲೂ ಹೋರಾಟವನ್ನು ಹಮ್ಮಿಕೊಳ್ಳಲಾಗಿದ್ದು, ರಾಜ್ಯದ ನಾಯಕರುಗಳು ಪಾಲ್ಗೊಳ್ಳಲಿದ್ದಾರೆ ಎಂದರು. ಕಾರ್ಯಕ್ರಮವನ್ನು ಎಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಯಶಸ್ವಿಗೊಳಿಸಬೇಕೆಂದು ಮಂಜುನಾಥ್ ಕುಮಾರ್ ಮನವಿ ಮಾಡಿದರು.À
ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನೀರ ಮೈನಾ ಸ್ವಾಗತಿಸಿ ಜನಧ್ವನಿ ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು.
ಮರಗೋಡು ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ಪಾಂಡನ ವಿವೇಕಾನಂದ ಹಾಗೂ ಹಿಂದೂ ಸಂಘಟನೆಯ ಜಿಲ್ಲಾ ಮುಖಂಡ ಚೆರಿಯಮನೆ ಭಾರ್ಗವ ಬಿ.ಜೆ.ಪಿ ತೊರೆದು ಇದೇ ಸಂದರ್ಭ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.
ಕೆಪಿಸಿಸಿ ಸಂಯೋಜಕ, ಡಿಸಿಸಿ ಖಜಾಂಚಿ ಹೆಚ್.ಎಂ.ನಂದಕುಮಾರ್, ಪ್ರಧಾನ ಕಾರ್ಯದರ್ಶಿ ವಿ.ಪಿ.ಸುರೇಶ್, ನಗರ ಕಾಂಗ್ರೆಸ್ ಅಧ್ಯಕ್ಷ ಅಬ್ದುಲ್ ರಜಾಕ್, ಸೇವಾದಳದ ಬ್ಲಾಕ್ ಅಧ್ಯಕ್ಷ ಕಾನೆಹಿತ್ಲು ಮೊಣ್ಣಪ್ಪ, ಅಲ್ಪಸಂಖ್ಯಾತರ ಘಟಕದ ಬ್ಲಾಕ್ ಅಧ್ಯಕ್ಷ ಕಲೀಲ್ ಬಾಷ, ಡಿಸಿಸಿ ಪ್ರಮುಖ ಮುದ್ದಯ್ಯ, ವಕ್ತಾರ ಸುರೇಶ್ ಟಿ.ಈ.ಸುರೇಶ್, ಪ್ರಮುಖರಾದ ಪುಲಿಯಂಡ ಜಗದೀಶ್, ಚುಮ್ಮಿ ದೇವಯ್ಯ, ಪುಷ್ಪ ಪೂಣಚ್ಚ, ಎಂ.ಇ.ಹನೀಫ್, ಮಂಡೀರ ಸದಾ ಮುದ್ದಪ್ಪ, ಮುಂಡಂಡ ಸುನಿಲ್ ನಂಜಪ್ಪ, ಫ್ಯಾನ್ಸಿ ಪಾರ್ವತಿ, ಮುದ್ದುರಾಜ್, ಜಾನ್ಸನ್ ಪಿಂಟೋ, ಗಿಲ್ಬರ್ಟ ಲೋಬೋ, ಪ್ರಭುರೈ, ಮೋಹನ್ ದಾಸ್, ದಾದ ಬೋಪಯ್ಯ, ಅಂತೋಣಿ ತಂಗಚ್ಚನ್, ಸ್ವರ್ಣಲತಾ, ಪೂರ್ಣಿಮಾ, ಮಮ್ತಾಜ್ ಬೇಗಂ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

error: Content is protected !!