ಅತ್ತೂರು ಗದ್ದೆಮನೆ ಕಾಫಿ ತೋಟದಲ್ಲಿ ಹುಲಿಹೆಜ್ಜೆ : ಗ್ರಾಮದಲ್ಲಿ ಆತಂಕ

March 4, 2021

ಮಡಿಕೇರಿ ಮಾ.4 : ದಕ್ಷಿಣ ಕೊಡಗಿನ ವಿವಿಧ ಗ್ರಾಮಗಳಲ್ಲಿ ಹುಲಿ ಸೆರೆಗೆ ಕಾರ್ಯಾಚರಣೆ ನಡೆಸುತ್ತಿರುವ ನಡುವೆಯೇ ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಗದ್ದೆಮನೆ ಕಾಫಿ ತೋಟದಲ್ಲಿ ಹುಲಿಯ ಹೆಜ್ಜೆ ಗುರುತು ಗೋಚರಿಸಿದ್ದು, ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಗದ್ದೆಮನೆ ನಿವಾಸಿ ನಿವೃತ್ತ ಸೈನಿಕ ಕುಪ್ಪಂಡ ರೋಹಿತ್ ಕುಶಾಲಪ್ಪ ಅವರ ಕಾಫಿ ತೋಟದಲ್ಲಿ ಗುರುವಾರ ಬೆಳಿಗೆ ಹುಲಿಯ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ರೋಹಿತ್ ಕುಶಾಲಪ್ಪ ತೋಟದಲ್ಲಿ ನೀರು ಸಂಗ್ರಹವಾಗಲು ಈ ಹಿಂದೆ ಇಂಗು ಗುಂಡಿ ತೆಗೆದಿದ್ದರು. ಎಂದಿನಂತೆ ಗುರುವಾರ ರೋಹಿತ್ ಕುಶಾಲಪ್ಪ ಅವರು ತೋಟದ ಕಡೆ ತೆರಳಿದಾಗ ಇಂಗು ಗುಂಡಿಯ ದಡದ ಕೆಸರಿನಲ್ಲಿ ಹುಲಿ ಹೆಜ್ಜೆ ಕಂಡು ಬಂದಿದೆ. ಈ ಗುಂಡಿಯಲ್ಲಿ ಹುಲಿ ನೀರು ಕುಡಿದು ಹೋದ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿರುವ ಹಿನ್ನಲೆಯಲ್ಲಿ ಗ್ರಾಮಸ್ಥರು ಜೀವ ಭಯ ಎದುರಿಸುವಂತಾಗಿದೆ.
ಮಾಹಿತಿ ತಿಳಿದ ತಕ್ಷಣವೇ ಅರಣ್ಯ ಇಲಾಖೆ ಅಧಿಕಾರಿಗಳು ಅತ್ತ ಕಡೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ಗ್ರಾಮದ ಸುತ್ತಮುತ್ತಲಿನ ಭಾಗಗಳಲ್ಲಿ ಬಹಳಷ್ಟು ಕೃಷಿಕರು ಹಸು ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಜಾನುವಾರುಗಳನ್ನು ಹುಲಿ ಭಕ್ಷಿಸುವ ಮೊದಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.

error: Content is protected !!