ಸಣ್ಣ ಕಥೆ : *****ಅರ್ಥ ಮಾಡಿಸಿದ ವೃದ್ಧರು..*****

March 5, 2021

ಲೇಬರ್ ವಾರ್ಡಿಗೆ ದಿನ ತುಂಬಿದ ಹೆಂಡತಿಯನ್ನ ಕರೆದುಕೊಂಡು ಹೋಗುವುದನ್ನ ನೋಡಿದ ಗಂಡ “ಈ ಸಲನಾದ್ರೂ ಗಂಡು ಮಗು ಆಗಲಿ” ಎಂದು ಬೇಡಿಕೊಳ್ಳುತ್ತಾನೆ. ಆಗ ಅವನ ಅಕ್ಕಪಕ್ಕ ತನ್ನ ಮೂವರು ಹೆಣ್ಣು ಮಕ್ಕಳು ಬಂದು ನಿಂತಿದ್ದನ್ನು ನೋಡಿ ಅವರಿಗೂ ಧೈರ್ಯ ಹೇಳಿ ಅವರನ್ನು ಅಲ್ಲೆ ಬೆಂಚಿನ ಮೇಲೆ ಕುಳ್ಳರಿಸಿ ತಾನು ಆಸ್ಪತ್ರೆಯ ಹೊರಗೆ ಬಂದನು. ಎದುರಿನಲ್ಲೆ ಟೀ ಕಾಫಿ ಮಾರುತ್ತಿದ್ದ ಸಣ್ಣ ಗಾಡಿಯ ಬಳಿ ಹೋಗಿ ಒಂದು ಟೀ ಹಾಗೂ ಒಂದು ಸ್ಮಾಲ್ ಸಿಗರೇಟ್ ಕೊಡಿ ಎಂದು ಕೇಳಿದನು. ಆ ವೃದ್ಧ ದಂಪತಿಗಳು ಅವನಿಗೆ ಟೀ ಹಾಗೂ ಸಿಗರೇಟ್ ಕೊಟ್ಟು ಮಾತನಾಡಿಸಿದರು. 
“ಏನಪ್ಪ ಹೆಂಡ್ತಿನ ಹೆರಿಗೆಗೆ ಕರ್ಕೊಂಡ್ ಬಂದಿದೀಯ” “ಹೂಂ. ಕಣಯ್ಯ” “ಮೊದಲನೆದಾ…?” “ಇಲ್ಲ ಕಣಯ್ಯ ನಾಲ್ಕನೆಯದು” “ಈ ಕಾಲದಲ್ಲಿ ಒಂದ್ ಮಗೂನೆ ಸಾಕು ಅನ್ನೊವಾಗ ನಾಲಕ್ ನಾಲಕ್ ಮಕ್ಳಾ..?” “ಮೊದಲ ಮೂರೂ ಹೆಣ್ಣೇ ಆದ್ವು. ಅದಕ್ಕೆ ವಂಶ ಬೆಳಗೋಕೆ ಒಂದ್ ಗಂಡ್ ಆಗ್ಲಿ ಅಂತ” “ಯೋ.. ಗಂಡು ಗಂಡು ಅಂತ ಯಾಕಿಂಗ್ ಸಾಯ್ತೀರಪ್ಪ. ಹೆಣ್ಮಕ್ಳೇ ಕಣಯ್ಯ ಕಡೆಗೆ ಆಗೋದು ಯಾವ್ ಗಂಡ್ ಮಗನೂ ಆಗಲ್ಲ” “ಗಂಡ್ ಮಗ ಆದ್ರೆ ಮನೇಗೆ ಧೈರ್ಯ ಅಲ್ವಾ” “ಯಾವ್ ಧೈರ್ಯನಯ್ಯ.. ನನಗೂ ಮೂರು ಗಂಡು ಮಕ್ಳು. ನಮ್ ಕಥೆ ನೋಡು. ನನಗೆ ನನ್ ಹೆಂಡ್ತೀನೆ ಆಗಬೇಕು. ಅವಳಿಗೆ ನಾನೇ ಆಗಬೇಕು” “ಏನೂ ಮೂರ್ ಗಂಡ್ ಮಕ್ಳಾ. ಮತ್ತೆ ನೀವ್ಯಾಕ್ ಈ ರೀತಿ ಟೀ ಮಾರ್ಕೊಂಡಿದೀರಾ” “ಒಬ್ಬೊಬ್ರು ಒಳ್ಳೊಳ್ಳೆ ಬದುಕೇ ನಡಿಸ್ತಾರೆಕಣಯ್ಯ. ಆದ್ರೂ ನಮ್ಮನ್ನ ಯಾರೂ ನೋಡ್ಕೊಳಲ್ಲ. ಗಂಡ್ ಮಕ್ಳು ಅಂತ ಹೊತ್ಕೊಂಡ್ ಮೆರೆದ್ವಿ. ಈಗ ಅನ್ನಿಸ್ತಿದೆ ಮೂರ್ ಗಂಡ್ ಮಕ್ಳು ಆಗೊ ಬದಲು ಹೆಣ್ ಮಕ್ಳುನಾದ್ರೂ ಆಗಿದ್ದಿದ್ರೆ ಒಂಚೂರ್ ಕಣ್ಣೀರ್ ಆದ್ರೂ ಹಾಕ್ತಿದ್ವು ಅಂತ” “ಹೌದಾ!” “ನೀನು ಗಂಡ್ ಮಗ ಆಗಿ ನಿಮ್ಮಪ್ಪ ಅಮ್ಮನ ಹೆಂಗ್ ನೋಡ್ಕೊತಿದೀ ಏನ್ ಸಾಧಿಸಿದೀ ಅಂತ” “ಹ್ಮ್.. ನಮ್ಮಪ್ಪ ಅಮ್ಮ ಇನ್ನೂ ಕೂಲಿ ಮಾಡ್ತಾರೆ. ನನಗೆ ವಿದ್ಯೆ ಹತ್ಲಿಲ್ಲ ನೋಡಿ. ನಾನೂ ಕೂಲಿ ಮಾಡ್ಕೊಂಡಿದೀನಿ” “ಅಯ್ಯೋ ಗಂಡಾಗಿ ಹುಟ್ಟಿ ನೀನೇ ಏನೂ ಸಾಧಿಸಕ್ಕಾಗಿಲ್ಲ. ಗಂಡ್ ಬೇಕಾ ನಿಂಗೆ? ನಿನಗೆ ನಿನ್ ಹೆಂಡ್ತಿನೇ ಕಡೆವರೆಗೂ ಆಗೋದು. ನೋಡಿಲ್ಲಿ ಮದ್ವೆ ಆದಾಗ್ಲಿಂದ ನನ್ ಜೊತೆಲೆ ಇದಾಳೆ ಇವಳು. ಅದೇ ಗಂಡ್ ಮಕ್ಳು ಅಂತ ಅನ್ನುಸ್ಕೊಂಡೋವು ಬುಟ್ಟೋದೋ” “ಸರಿಕಣಯ್ಯ ತಗೊ ಟೀ ಸಿಗರೇಟ್ದು ದುಡ್ಡು. ಹಂಗೆ ಮೂರು ಬಿಸ್ಕೇಟ್ ಪ್ಯಾಕೂ ಕೊಡು” 
ದುಡ್ಡು ಕೊಟ್ಚು ಮತ್ತೆ ಮೂರು ಬಿಸ್ಕೇಟ್ ಪ್ಯಾಕ್ ತಗೊಂಡು ಆಸ್ಪತ್ರೆ ಒಳಗೆ ಬಂದು ಮೂರೂ ಹೆಣ್ಣು ಮಕ್ಕಳಿಗೂ ಒಂದೊಂದು ಬಿಸ್ಕೇಟ್ ಕೊಟ್ಟು ದೇವರ ನೆನೆದುಕೊಂಡು ಕುಳಿತುಕೊಳ್ಳುತ್ತಾನೆ. ನರ್ಸ್ ಇವನ ಬಳಿ ಬಂದೂ “ಸಾರಿ ಮಗುನ ಉಳಿಸೋಕಾಗಲಿಲ್ಲ. ಗರ್ಭಕೋಶದಲ್ಲಿ ನೀರು ಕಡಿಮೆಯಾಗಿ ಮಗು ಬದುಕಲಿಲ್ಲ. ಆದರೆ ತಾಯಿ ಬದುಕಿದಳುˌ ವಾರ್ಡಿಗೆ ಶಿಫ್ಟ್ ಮಾಡ್ತೀವಿ ಆಮೇಲೆ ಅಲ್ಲಿ ಹೋಗಿ ನೀವು ಮಾತನಾಡಬಹುದು” ಅಂತ ಹೇಳಿ ಹೋಗುತ್ತಾಳೆ. 
ವಾರ್ಡಿಗೆ ಮೂರೂ ಹೆಣ್ಣು ಮಕ್ಕಳನ್ನು ತನ್ನ ಜೊತೆಯಲ್ಲಿ ಕರ್ಕೊಂಡು ಹೋಗಿ ಅವಳನ್ನು ನೋಡಲು ಹೋದಾಗˌ ಹೆಂಡತಿ “ನನ್ನ ಕ್ಷಮಿಸಿಬಿಡಿˌ ನಿಮಗೆ ಗಂಡು ಮಗು ಕೊಡಕ್ಕಾಗಲಿಲ್ಲ” ಅಂದಾಗ ಅವನ ಕಣ್ಣಲ್ಲಿ ನೀರು ತುಂಬಿ ಬಂತು. “ಲೇ ಇವಳೆ ನನಗೆ ಗಂಡು ಮಗೂನೆ ಬೇಡಕಣೆ. ಸಾಕು. ಆಪರೇಷನ್ ಮಾಡಿಸುತ್ತೇನೆ. ನನಗೆ ಈಗಿರುವ ಈ ಮೂರು ಹೆಣ್ಣು ಮಕ್ಕಳೇ ಸಾಕು. ನನಗೆ ನನ್ನ ತಪ್ಪು ಅರ್ಥವಾಗಿದೆ. ಆ ವೃದ್ಧ ದಂಪತಿಗಳಿಂದ ನನ್ನ ಕಣ್ಣು ತೆರೆಯಿತು. ಇನ್ನು ನಿನ್ನ ಕಾಡಿಸುವುದಿಲ್ಲ. ಪೀಡಿಸುವುದಿಲ್ಲ. ಚನ್ನಾಗಿ ನೋಡ್ಕೊತೀನಿ. ಮಕ್ಕಳೇ ಇವತ್ತಿಂದ ನೀವೆಲ್ಲ ಹೊಸ ಅಪ್ಪನನ್ನ ನೋಡ್ತೀರಿ. ಯಾವ ಗಂಡು ಮಕ್ಕಳಿಗಿಂತಲೂ ನೀವು ಕಡಿಮೆಯಾಗದಂತೆ ನಿಮ್ಮನ್ನ ಬೆಳೆಸುತ್ತೇನೆ. ನನ್ನ ಅಜ್ಞಾನ ಸರಿಯಿತು ಮಕ್ಕಳೇ” ಎಂದು ಹೇಳುತ್ತಾನೇ. ಮಕ್ಕಳಲ್ಲಿ ಹೆಂಡತಿಯ ಕಣ್ಣಲ್ಲಿ ಆನಂದ ಭಾಷ್ಪ ಸುರಿಯುವುದನ್ನ ನೋಡಿ ತಾನೂ ಬದಲಾದ ಖುಷಿಯಲ್ಲೀ ಕಣ್ಣಲ್ಲಿ ಆನಂದ ಭಾಷ್ಪ ಸುರಿಸುತ್ತಾನೆ. 
—ದೊಚ್ಚು (ಮಹದೇವ ದೊಡ್ಡಚಾರಿ) ಮೈಸೂರು mahadeva.doddachari@gmail.com

error: Content is protected !!