ಪೌತಿ ಖಾತೆ ಆಂದೋಲನದ ಬಗ್ಗೆ ಮಾಹಿತಿ ಪಡೆದ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ

March 5, 2021

ಮಡಿಕೇರಿ ಮಾ.5 : ರಾಜ್ಯದಲ್ಲಿ ಗ್ರಾ.ಪಂ.ವ್ಯಾಪ್ತಿಯಲ್ಲಿನ ಜಾಗಗಳಿಗೆ, ಮನೆಗಳಿಗೆ ಇಲಾಖೆ ವತಿಯಿಂದ ಪೌತಿಖಾತೆ ಆಂದೋಲನ ನಡೆಸಲಾಗಿದೆಯೇ; ಇಲ್ಲವಾದಲ್ಲಿ ಈ ಪೌತಿ ಖಾತೆ ಮಾಡಿಕೊಡುವ ಆಂದೋಲನ ನಡೆಸಲು ಸರ್ಕಾರದ ಚಿಂತನೆಗಳೇನು ಎಂದು ವಿಧಾನ ಪರಿಷತ್ ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರಿಂದ ಮಾಹಿತಿ ಪಡೆದಿದ್ದಾರೆ.
ರಾಜ್ಯದಲ್ಲಿ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿನ ಭೂಮಿ ಮತ್ತು ಕಟ್ಟಡಗಳಿಗೆ ಪೌತಿ ತೆರಿಗೆ ನಿರ್ಧರಣೆ ಪಟ್ಟಿ ಬದಲಾವಣೆ (ನಮೂನೆ-9 ಮತ್ತು ನಮೂನೆ-11 ಬಿ) ಮಾಡಲು ಆಂದೋಲನವನ್ನು ನಡೆಸಿರುವುದಿಲ್ಲ. ಈ ಪೌತಿ ತೆರಿಗೆ ನಿರ್ಧರಣೆ ಪಟ್ಟಿ ಬದಲಾವಣೆ (ನಮೂನೆ-9 ಮತ್ತು ನಮೂನೆ-11ಬಿ) ಮಾಡಲು ಆಂದೋಲನವನ್ನು ನಡೆಸುವ ಪ್ರಸ್ತಾವನೆ ಪ್ರಸ್ತುತ ಸರ್ಕಾರದ ಮುಂದಿರುವುದಿಲ್ಲ ಎಂದು ಸಚಿವರು ತಿಳಿಸಿದ್ದಾರೆ.
ಈ ಪೌತಿ ಖಾತೆ ಆಂದೋಲನವನ್ನು ಪ್ರತಿ ಮೂರು ವರ್ಷಕ್ಕೊಮ್ಮೆ ಕಡ್ಡಾಯವಾಗಿ ನಡೆಸಲು ಸರ್ಕಾರದ ತೀರ್ಮಾನಗಳೇನು, ಈ ಪೌತಿ ಖಾತೆ ಆಂದೋಲನ ಮಾಡಿದ್ದಲ್ಲಿ ಗ್ರಾಮೀಣ ಭಾಗದ ಜನರಿಗೆ ಅನುಕೂಲವಾಗಿ ಗ್ರಾ.ಪಂ.ಗಳ ಆದಾಯವು ವೃದ್ಧಿಸುವ ಜೊತೆಗೆ ದಾಖಲೆಗಳನ್ನು ಸರಿಪಡಿಸಲು ಸಹಕಾರಿಯಲ್ಲವೆ; ಇದರ ಬಗ್ಗೆ ಸರ್ಕಾರದ ಚಿಂತನೆಗಳೇನು ಎಂದು ಸುನಿಲ್ ಸುಬ್ರಮಣಿ ಅವರ ಮಾಹಿತಿ ಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಚಿವರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಕ್ರಮಬದ್ಧ ಮತ್ತು ಕ್ರಮಬದ್ಧವಲ್ಲದ ಆಸ್ತಿಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ನಮೂನೆ-9, 2ಎ ಮತ್ತು 2ಬಿ ಯನ್ನು ಪಡೆಯಲು ಆಸ್ತಿಯ ಮಾಲೀಕರು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಿದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ನಮೂನೆ-9, 2ಎ ಮತ್ತು 2ಬಿ ವಿತರಿಸುತ್ತಾರೆ ಎಂದರು.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳಿಗೆ ಇ-ಸ್ವತ್ತು ತಂತ್ರಾಂಶದ ಮೂಲಕ ವಿತರಿಸುವುದಕ್ಕೆ ವಿನಾಯಿತಿ ನೀಡಿ ನಮೂನೆ 2ಬಿ ಯನ್ನು ಕೈಬರಹದ ಮೂಲಕ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂ.ರಾಜ್ ಸಚಿವರಾದ ಕೆ.ಎಸ್.ಈಶ್ವರಪ್ಪ ಅವರು ಉತ್ತರಿಸಿದ್ದಾರೆ.

error: Content is protected !!