ಕಿತ್ತಳೆ ಬೆಳೆ ಪುನಶ್ಚೇತನಕ್ಕೆ ಪ್ರೋತ್ಸಾಹಧನ: ಸಚಿವ ಆರ್.ಶಂಕರ್ ಭರವಸೆ

March 5, 2021

ಮಡಿಕೇರಿ ಮಾ.5 : ರಾಜ್ಯದಲ್ಲಿ ಕಿತ್ತಳೆ ಬೆಳೆಯನ್ನು ಬೆಳೆಯುತ್ತಿರುವ ಜಿಲ್ಲೆಗಳು ಯಾವುವು, ಮತ್ತು ಅಲ್ಲಿನ ಕಿತ್ತಳೆ ಬೆಳೆಯ ವಿಸ್ತೀರ್ಣದ ವಿವರಗಳನ್ನು ಒಳಗೊಂಡಂತೆ ತಾಲ್ಲೂಕುವಾರು ವಿವರ ನೀಡುವಂತೆ ವಿಧಾನ ಪರಿಷತ್ತು ಸದಸ್ಯರಾದ ಸುನಿಲ್ ಸುಬ್ರಮಣಿ ಅವರು ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ಆರ್.ಶಂಕರ್ ಅವರಿಂದ ಮಾಹಿತಿ ಪಡೆದಿದ್ದಾರೆ.
ರಾಜ್ಯದಲ್ಲಿ ಕಿತ್ತಳೆ ಬೆಳೆಯನ್ನು ಪ್ರಮುಖವಾಗಿ ಕೊಡಗು, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೆಳೆಯಾಗುತ್ತಿದೆ. ಕಿತ್ತಳೆ ಬೆಳೆಯ ವಿಸ್ತೀರ್ಣದ ವಿವರ ನೀಡಿದರು.
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನಲ್ಲಿ 1692.20 ಹೆಕ್ಟೇರ್, ಸೋಮವಾರಪೇಟೆ ತಾ. 872.15 ಹೆಕ್ಟೇರ್, ವಿರಾಜಪೇಟೆಯಲ್ಲಿ 666.61 ಹೆಕ್ಟೇರ್ ಪ್ರದೇಶ ಒಟ್ಟು 3,230.96 ಹೆಕ್ಟೇರ್ ಪ್ರದೇಶಗಳಲ್ಲಿ ಕಿತ್ತಳೆ ಬೆಳೆ ಬೆಳೆಯಲಾಗುತ್ತದೆ.
ಕೊಡಗು ಜಿಲ್ಲೆಯಲ್ಲಿ ಕೊಡಗಿನ ಕಿತ್ತಳೆಯನ್ನು ಉಳಿಸಲು ಮತ್ತು ಬೆಳೆಸಲು ಸರ್ಕಾರ ನೀಡುವ ಪ್ರೋತ್ಸಾಹದಾಯಕ ಕ್ರಮಗಳೇನು ಎಂದು ಸುನಿಲ್ ಸುಬ್ರಮಣಿ ಅವರು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವರು ಕೊಡಗು ಜಿಲ್ಲೆಯ ಕೊಡಗಿನ ಕಿತ್ತಳೆಯನ್ನು ಉಳಿಸಲು ಮತ್ತು ಬೆಳೆಸಲು ಪ್ರೋತ್ಸಾಹದಾಯಕ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಕಿತ್ತಳೆ ಹಳೆ ತೋಟಗಳ ಪುನಃಶ್ಚೇತನ ಕಾರ್ಯಕ್ರಮದಡಿ ಕೊಡಗು ಜಿಲ್ಲೆಯಲ್ಲಿ ಪ್ರತಿ ಹೆಕ್ಟೇರ್‍ಗೆ ಶೇ.50 ರಂತೆ ರೂ.20 ಸಾವಿರ ಗರಿಷ್ಠ 2 ಹೆಕ್ಟೇರ್‍ವರೆಗೆ ಸಹಾಯಧನ ನೀಡಲಾಗುತ್ತಿದೆ. ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಕಿತ್ತಳೆ ಪ್ರದೇಶ ವಿಸ್ತರಣೆ ಕಾರ್ಯಕ್ರಮದಡಿ ಪ್ರತಿ ಹೆಕ್ಟೇರ್‍ಗೆ ಶೇ.50 ರಂತೆ ರೂ.10 ಸಾವಿರ ಸಹಾಯಧನ ನೀಡಲಾಗುತ್ತಿದೆ ಎಂದು ತೋಟಗಾರಿಕೆ ಸಚಿವರು ತಿಳಿಸಿದ್ದಾರೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯ ಕೀಟ ಮತ್ತು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ಕೀಟ ಮತ್ತು ರೋಗಗಳ ನಿಯಂತ್ರಣಕ್ಕಾಗಿ 1 ಹೆಕ್ಟೇರ್‍ಗೆ ರೂ.1,200 ರಂತೆ ಗರಿಷ್ಠ 4 ಹೆಕ್ಟೇರ್ ವರೆಗೆ ಸಹಾಯಧನವನ್ನು ನೀಡಲಾಗುತ್ತಿದೆ. ರಾಜ್ಯ ವಲಯ ಯೋಜನೆಯಡಿ ಕಿತ್ತಳೆ ಸೇರಿದಂತೆ ಇತರೆ ತೋಟಗಾರಿಕೆ ಬೆಳೆಗಳ ಕೀಟ ಹಾಗೂ ರೋಗ ನಿಯಂತ್ರಣಕ್ಕಾಗಿ ಸಾಮಾನ್ಯ ವರ್ಗದ ರೈತರಿಗೆ ಪ್ರತಿ ಹೆಕ್ಟೇರ್‍ಗೆ ರೂ.7,500 ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಪ್ರತಿ ಹೆಕ್ಟೇರ್‍ಗೆ ರೂ.9 ಸಾವಿರ ದಂತೆ ಸಹಾಯಧನ ವಿತರಿಸಲಾಗುತ್ತಿದೆ.
ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕಿತ್ತಳೆ ಜಾತಿಯ ಬೆಳೆಗಳ ಪ್ರದೇಶ ವಿಸ್ತರಣೆಯನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಸಣ್ಣ ಮತ್ತು ಅತಿ ಸಣ್ಣ ರೈತರ ತೋಟಗಳಲ್ಲಿ ಕೈಗೊಳ್ಳಲು ಪ್ರತಿ ಹೆಕ್ಟೇರ್‍ಗೆ ಕೂಲಿ ವೆಚ್ಚ ರೂ.49,604 ಹಾಗೂ ಸಾಮಾಗ್ರಿ ವೆಚ್ಚ ರೂ.26,181 ನೀಡಲಾಗುತ್ತಿದೆ ಎಂದು ತೋಟಗಾರಿಕೆ ಮತ್ತು ರೇಷ್ಮೆ ಸಚಿವರಾದ ಆರ್.ಶಂಕರ್ ಅವರು ಮಾಹಿತಿ ನೀಡಿದ್ದಾರೆ.

error: Content is protected !!