ನಿಲ್ಲದ ಹುಲಿ ದಾಳಿ : ದಕ್ಷಿಣ ಕೊಡಗಿನಲ್ಲಿ ಸಾಲು ಸಾಲು ಹಸುಗಳ ಸಾವು

March 5, 2021

ಮಡಿಕೇರಿ ಮಾ.5 : ವಿರಾಜಪೇಟೆ ತಾಲ್ಲೂಕಿನ ಮಗ್ಗುಲ ಗ್ರಾಮದ ಪುಲಿಯಂಡ ಜಗದೀಶ್ ಅವರ ತೋಟದಲ್ಲಿ ಹುಲಿ ಹೆಜ್ಜೆಗಳು ಪತ್ತೆಯಾಗಿದ್ದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ. ಗುರುವಾರ ಜಗದೀಶ್ ಅವರು ತಮ್ಮ ತೋಟಕ್ಕೆ ತೆರಳಿದ್ದಾಗ ಯಾವುದೇ ಹೆಜ್ಜೆ ಗುರುತುಗಳು ಕಂಡು ಬಂದಿರಲಿಲ್ಲ. ಎಂದಿನಂತೆ ಶುಕ್ರವಾರ ಬೆಳಿಗ್ಗೆ ತೋಟಕ್ಕೆ ತೆರಳಿದ ಸಂದರ್ಭ ಸುತ್ತ ಮುತ್ತ ಹುಲಿ ಹೆಜ್ಜೆ ಗುರುತು ಗೋಚರಿಸಿದೆ. ತಕ್ಷಣವೇ ಜಗದೀಶ್ ಅವರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಇಲಾಖಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ.
ಸುತ್ತ ಮುತ್ತಲ ಕಾಫಿ ತೋಟಗಳ ಒಳಗೆಯೇ ಹುಲಿ ಅವಿತುಕೊಂಡಿರುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಗೆ 2 ಅಮಾಯಕ ಕಾರ್ಮಿಕ ಜೀವಗಳು ಬಲಿಯಾಗಿದ್ದು, ಇಂತಹ ದುರ್ಘಟನೆಗಳು ತಮ್ಮ ಗ್ರಾಮದಲ್ಲಿ ನಡೆಯಬಹುದು ಎಂಬ ಆತಂಕ ಮಗ್ಗುಲ ಸುತ್ತ ಮುತ್ತಲಿನ ಗ್ರಾಮಸ್ಥರನ್ನು ಕಾಡುತ್ತಿದೆ. ತಕ್ಷಣವೇ ಅರಣ್ಯ ಇಲಾಖೆ ಹುಲಿಯನ್ನು ಸೆರೆ ಹಿಡಿಯಲು ಕಾರ್ಯಾಚರಣೆ ನಡೆಸುವಂತೆ ಮಗ್ಗುಲ ಗ್ರಾಮಸ್ಥರು ಅರಣ್ಯ ಇಲಾಖೆಯನ್ನು ಆಗ್ರಹಿಸಿದ್ದಾರೆ.
ಇನ್ನು ದಕ್ಷಿಣ ಕೊಡಗಿನಲ್ಲಿ ಕಳೆದ 10 ದಿನಗಳಿಗೂ ಮಿಗಿಲಾಗಿ ಹುಲಿ ಸೆರೆ ಕಾರ್ಯಾಚರಣೆ ನಡೆಸಲಾಗುತ್ತಿದೆಯಾದರೂ ಹುಲಿ ಮಾತ್ರ ಅರಣ್ಯ ಇಲಾಖೆಯ ಕಣ್ಣಿಗೆ ಬಿದ್ದಿಲ್ಲ. 15 ದಿನಗಳ ಅವಧಿಯಲ್ಲಿ ಒಟ್ಟು 2 ಮಾನವ ಜೀವ ಹಾನಿ ಹಾಗೂ 8 ಜಾನುವಾರುಗಳು ಹುಲಿಯ ರಕ್ತದಾಹಕ್ಕೆ ಜೀವ ಚೆಲ್ಲಿವೆ. ಇತ್ತ ಬೋನ್ ಕಡೆಗೂ ಸುಳಿಯದ ಹುಲಿ ಮರೆಯಲ್ಲಿಯೇ ರೈತರ ಕೊಟ್ಟಿಗೆಗೆಗಳಿಗೆ ನುಗ್ಗಿ ಜಾನುವಾರುಗಳನ್ನು ಕೊಂದು ಹಾಕುತ್ತಿರುವುದು ರೈತರ ಆಕ್ರೋಷಕ್ಕೆ ಕಾರಣವಾಗಿದೆ. ಪೊನ್ನಂಪೇಟೆ ತಾಲೂಕು ಶ್ರೀಮಂಗಲ ಹೋಬಳಿಯ ಬೀರುಗ ಗ್ರಾಮದ ಅಜ್ಜಮಾಡ ಗಣೇಶ್ ಅವರ ಹಸು ಕಳೆದ ಎರಡು ದಿನಗಳ ಹಿಂದೆ ಕೊಟ್ಟಿಗೆಯಿಂದ ನಾಪತ್ತೆಯಾಗಿತ್ತು. ಸತತ ಹುಡುಕಾಟ ನಡೆಸಿದ ಸಂದರ್ಭ ಶುಕ್ರವಾರ ಮನೆಯ ಪಕ್ಕದ ತೋಟದಲ್ಲಿ ಹಸುವಿನ ಕಳೇಬರ ಪತ್ತೆಯಾಗಿದ್ದು, ಹುಲಿ ಹಸುವಿನ ಅರ್ಧ ದೇಹವನ್ನು ತಿಂದು ಹಾಕಿದೆ.
ಇನ್ನು ತಾವಳಗೇರಿ ಗ್ರಾಮದ ಮಚ್ಚಾಮಾಡ ಗೋಪಿ ಪೆಮ್ಮಯ್ಯ ಹಾಗೂ ಪೂವಣ್ಣ ಅವರುಗಳಿಗೆ ಸೇರಿದ 2 ಹಸುಗಳನ್ನು ಹುಲಿ ಶುಕ್ರವಾರ ಬೆಳಗೆ ಕೊಂದು ಹಾಕಿದೆ. ಮಕ್ಕಳಂತೆ ಸಾಕಿ ಸಲಹಿದ ಜಾನುವಾರುಗಳು ದಿನಕ್ಕೊಂದರಂತೆ ಹುಲಿಯ ರಕ್ತ ದಾಹಕ್ಕೆ ಜೀವ ಬಿಡುತ್ತಿದ್ದು, ಹುಲಿ ಮತ್ತು ಅರಣ್ಯ ಇಲಾಖೆಯ ಕಾರ್ಯಾಚರಣೆಯ ವಿರುದ್ದವೇ ಇದೀಗ ಅಸಮಾಧಾನ ವ್ಯಕ್ತವಾಗುತ್ತಿದೆ. ಜಾನುವಾರುಗಳ ಮೇಲೆ ದಾಳಿ ನಡೆದ ಮಾಹಿತಿ ತಿಳಿದ ತಕ್ಷಣವೇ ಅತ್ತ ಧಾವಿಸುತ್ತಿರುವ ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಗ್ರಾಮಸ್ಥರು ತೀವ್ರ ತರಾಟೆಗೆ ತೆಗೆದು ಕೊಳ್ಳುತ್ತಿದ್ದು, ಹುಲಿಯನ್ನು ಸೆರೆ ಹಿಡಿಯುವಂತೆ ಅಥವಾ ಗುಂಡಿಕ್ಕಿ ಕೊಲ್ಲುವಂತೆ ನೊಂದ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಒಂದು ಕಡೆಯಲ್ಲಿ ಅರಣ್ಯ ಇಲಾಖೆ ಹುಲಿಗಾಗಿ ಕೂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದರೆ, ಅರಣ್ಯ ಇಲಾಖೆಯ ಮೂಗಿನಡಿಯಲ್ಲಿಯೇ ಹುಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಜಾನುವಾರುಗಳ ಮೇಲೆ ದಾಳಿ ನಡೆಸುತ್ತಿದೆ. ಕಾರ್ಯಾಚರಣೆಗಾಗಿ ಈಗಾಗಲೇ ಲಕ್ಷಾಂತರ ರೂ. ವೆಚ್ಚ ಮಾಡಿದ್ದರೂ ಕೂಡ ನಿರೀಕ್ಷಿತ ಪ್ರಗತಿ ಕಂಡು ಬರುತ್ತಿಲ್ಲ. ಹಗಲಿರುಳು ಕಾರ್ಯಾಚರಣೆ ಮಾಡುತ್ತಿದ್ದರೂ ಕೂಡ ಹುಲಿಯ ನೆರಳು ಕೂಡ ಕಂಡು ಬಂದಿಲ್ಲ. ತೋಟಗಳ ನೀರಿನ ಗುಂಡಿಗಳು, ಕೆರೆ ದಡ ಮತ್ತಿತ್ತರ ಕಡೆಗಳಲ್ಲೂ ಹುಲಿಯ ಹೆಜ್ಜೆ ಗುರುತುಗಳು ಕಂಡು ಬರುತ್ತಿದ್ದು, ಹುಲಿ ಕಾಫಿ ತೋಟಗಳನ್ನೇ ತನ್ನ ಭದ್ರ ನೆಲೆಯನ್ನಾಗಿ ಮಾಡಿಕೊಂಡಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

error: Content is protected !!