ಬಾಡಗರಕೇರಿಯಲ್ಲಿ ಸಂಪನ್ನಗೊಂಡ ಶ್ರೀ ಮೃತ್ಯುಂಜಯ ದೇವಾಲಯದ ವಾರ್ಷಿಕೋತ್ಸವ

March 6, 2021

ಮಡಿಕೇರಿ ಮಾ.6 : ದಕ್ಷಿಣ ಕೊಡಗಿನ ಬಾಡಗರಕೇರಿ ಗ್ರಾಮದಲ್ಲಿರುವ ರಾಜ್ಯದ ಭಕ್ತರನ್ನು ತನ್ನತ್ತ ಸೆಳೆಯುತ್ತಿರುವ ಶ್ರೀಮೃತ್ಯುಂಜಯ ದೇವಾಲಯದ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಸಂಪನ್ನಗೊಂಡಿದೆ.
ದೇಗುಲದ ಕಟ್ಟುಪಾಡು-ಪದ್ಧತಿಯಂತೆ ಹನ್ನೊಂದು ದಿನಗಳ ಕಾಲ ವಾರ್ಷಿಕ ಉತ್ಸವದ ವಿಧಿವಿಧಾನಗಳು ಜರುಗಿದವು. ಫೆ.22 ರಂದು ಕೊಡಿಮರ ನಿಲ್ಲಿಸುವ ಮೂಲಕ ಆರಂಭಗೊಂಡ ಉತ್ಸವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು.
ಜಿಲ್ಲೆ ಹಾಗೂ ರಾಜ್ಯದ ಹಲವೆಡೆಯಿಂದ ಭಕ್ತಾದಿಗಳು ಆಗಮಿಸಿ, ಶ್ರೀ ಮೃತ್ಯುಂಜಯ ಹೋಮ ಮತ್ತಿತರ ಪೂಜೆ ಪುನಸ್ಕಾರಗಳಲ್ಲಿ ಭಾಗಿಯಾದರು. ತಾ. 3ರಂದು ನೆರಪು ಹಾಗೂ ಅಂದೇ ಸಂಜೆ ಶ್ರೀ ವಿಷ್ಣುದೇವರ ಅಲಂಕಾರ ಪೂಜೆ ಜರುಗಿತು. ಉತ್ಸವದ ಅಂತಿಮ ದಿನವಾಗಿದ್ದ ತಾ. 4ರಂದು ಬೆಳಿಗ್ಗೆಯಿಂದ ಮೃತ್ಯುಂಜಯ ಹೋಮ, ತುಲಾಭಾರ ಮತ್ತಿತರ ಪೂಜೆಗಳು ಜರುಗಿ ಅಪರಾಹ್ನ ತೆಂಗಿನಕಾಯಿಗೆ ಗುಂಡು ಹೊಡೆಯುವ ಮೂಲಕ ಊರುಕಟ್ಟನ್ನು ಮುಕ್ತಾಯಗೊಳಿಸಲಾಯಿತು.
ಬಳಿಕ ಉತ್ಸವಮೂರ್ತಿ ದರ್ಶನ, ದೇವರ ಅವಭೃತಸ್ನಾನ, ರಾತ್ರಿ ಮತ್ತೆ ಉತ್ಸವ ಮೂರ್ತಿಯ ದರ್ಶನ, ಬಳಿಕ ವಸಂತ ಪೂಜೆಯೊಂದಿಗೆ ಉತ್ಸವ ಸಂಪನ್ನಗೊಂಡಿತು. ಈ ಸಂದರ್ಭ ಭಕ್ತಾದಿಗಳಿಗೆ ಪ್ರಸಾದ ವಿತರಣೆ, ಸಂಜೆ ಆಕರ್ಷಕ ಸಿಡಿಮದ್ದಿನ ಪ್ರದರ್ಶನ, ಪೊನ್ನಂಪೇಟೆಯ ಜ್ಞಾನ ವಿನಾಟ್ಯಶಾಲಾ ತಂಡದಿಂದ ದೈವಿಕ ಹಿನ್ನೆಲೆಯ ಸಾಂಸ್ಕøತಿಕ ಪ್ರದರ್ಶನದಂತಹ ಕಾರ್ಯಕ್ರಮಗಳು ನಡೆದವು.
ದೇವತಕ್ಕರಾದ ಅಣ್ಣೀರ ಕುಟುಂಬಸ್ಥರು, ನಾಡ್ ತಕ್ಕರಾದ ಕಾಯಪಂಡ ಸೇರಿದಂತೆ ಗ್ರಾಮವ್ಯಾಪ್ತಿಯ ಇತರ ಕುಟುಂಬಸ್ಥರು, ಆಡಳಿತ ಮಂಡಳಿಯ ಅಧ್ಯಕ್ಷ ಕಾಯಪಂಡ ಎಸ್.ಕಾವೇರಪ್ಪ ಮತ್ತಿತರರು ಪಾಲ್ಗೊಂಡಿದ್ದರು. ಅರ್ಚಕರಾದ ಹರೀಶ್ ಹಾಗೂ ಗಿರೀಶ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳು ಜರುಗಿದವು.

error: Content is protected !!