ಮಡಿಕೇರಿಯಲ್ಲಿ ಜನ ಔಷಧಿ ದಿನಾಚರಣೆ : ಯೋಜನೆಯ ಲಾಭ ಪಡೆಯಲು ತೇಜಸ್ವಿನಿ ರಮೇಶ್ ಸಲಹೆ

March 6, 2021

ಮಡಿಕೇರಿ ಮಾ.6 : ಜನ ಸಾಮಾನ್ಯರಿಗೆ ಕೈಗೆಟುಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆಯನ್ನು ಒದಗಿಸುವ ಉದ್ದೇಶದಿಂದ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯರಾದ ತೇಜಸ್ವಿನಿ ರಮೇಶ್ ಅವರು ಹೇಳಿದರು.
ಕೊಡಗು ಜಿಲ್ಲಾ ಜನೌಷಧಿ ಕೇಂದ್ರದ ಮಾಲೀಕರ ಒಕ್ಕೂಟದ ಸಹಯೋಗದೊಂದಿಗೆ ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಜನೌಷಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ದೇಶದಲ್ಲಿ ಈಗಾಗಲೇ 7495 ಜನ ಔಷಧಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ. ಆರೋಗ್ಯಕರ ದೇಶ ಕಟ್ಟುವಲ್ಲಿ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಅವರು ತಿಳಿಸಿದರು.
ಕಡಿಮೆ ದರದಲ್ಲಿ ಗುಣಮಟ್ಟದ ಔಷಧಗಳು ಜನೌಷಧಿ ಕೇಂದ್ರಗಳಲ್ಲಿ ಸಿಗುತ್ತವೆ. ಇವುಗಳ ಪ್ರಯೋಜನವನ್ನು ಜನಸಾಮಾನ್ಯರು ಪಡೆಯಬೇಕು ಎಂದು ಅವರು ಮನವಿ ಮಾಡಿದರು.
ವೈದ್ಯಕೀಯ ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಕೇವಲ ನಗರಗಳಿಗೆ ಸೀಮಿತವಾಗಿರದೆ ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ವೈದ್ಯಕೀಯ ಸೇವೆ ತಲುಪಿಸುವ ಮನೋಭಾವನೆಯನ್ನು ಬೆಳಸಿಕೊಳ್ಳಬೇಕು ಎಂದು ಅವರು ಹೇಳಿದರು.
ಕೋವಿಡ್-19 ಲಸಿಕೆಯನ್ನು ಜಗತ್ತಿನ ವಿವಿಧ ರಾಷ್ಟ್ರಗಳಿಗೆ ನೀಡುವುದರ ಮೂಲಕ ಭಾರತ ವೈದ್ಯಕೀಯ ಕ್ಷೇತ್ರದಲ್ಲಿ ಹೆಮ್ಮೆ ಪಡುವಂತೆ ಮಾಡಿದೆ. ನಾಗರಿಕತೆ ಬದಲಾದಂತೆ ವೈದ್ಯಕೀಯ ಕ್ಷೇತ್ರದಲ್ಲಿ ಅನೇಕ ಸಂಶೋಧನೆ ನಡೆಸಿ ಸುಧಾರಣೆ ತರಲಾಗಿದೆ ಎಂದು ಅವರು ಹೇಳಿದರು.
ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡುವ ಗುಣವನ್ನು ಪ್ರತಿಯೊಬ್ಬರೂ ಬೆಳಸಿಕೊಳ್ಳಬೇಕು. ಬಡ ಜನರಿಗೆ ಮೀಸಲಿಟ್ಟ ಯೋಜನೆಗಳನ್ನು ಅವರಿಗೆ ತಲುಪಿಸುವ ಕಾರ್ಯವಾಗಬೇಕು ಎಂದು ಅವರು ಹೇಳಿದರು.
ಶಾಸಕರಾದ ಕೆ.ಜಿ.ಬೋಪಯ್ಯ ಅವರು ಮಾತನಾಡಿ ಜನ ಔಷಧಿ ದಿನಾಚರಣೆಯ ಅಂಗವಾಗಿ ಕಳೆದ ಒಂದು ವಾರದಿಂದ “ಜನೌಷಧಿ ಸಪ್ತಾಹ” ಕಾರ್ಯಕ್ರಮ ನಡೆಸಲಾಗುತ್ತಿದ್ದು, ಶಾಲೆಗಳಲ್ಲಿ ಮಕ್ಕಳಿಗೆ ಜಾಗೃತಿ, ಹಿರಿಯ ನಾಗರಿಕರಿಗೆ ಮಾಹಿತಿ, ಆರೋಗ್ಯ ಶಿಬಿರಗಳನ್ನು ಹಮ್ಮಿಕೊಳ್ಳುವುದರ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು.
ಪ್ರತಿಯೊಬ್ಬರೂ ಸ್ವಾವಲಂಬನೆಯ ಜೀವನ ನಡೆಸಬೇಕು. ಎಲ್ಲರೂ ಆರೋಗ್ಯವಾಗಿದ್ದರೆ ದೇಶವು ಆರೋಗ್ಯಕರವಾಗಿರುತ್ತದೆ. ಜನರಿಗೆ ಕಡಿಮೆ ದರದಲ್ಲಿ ಔಷಧಗಳು ಜನ ಔಷಧಿ ಕೇಂದ್ರದಲ್ಲಿ ಸಿಗುತ್ತವೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ಹೇಳಿದರು.
ಜನೌಷಧಿಯ ಗುಣಮಟ್ಟದ ಬಗ್ಗೆ ಯಾರು ಸಂಶಯ ಪಡಬಾರದು. ಪ್ರತಿಯೊಬ್ಬರು ಜನೌಷಧಿ ಪಡೆಯಬಹುದಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 8 ಜನ ಔಷಧಿ ಕೇಂದ್ರಗಳನ್ನು ತೆರೆಯಲಾಗಿದೆ. ಇನ್ನೂ ಹೆಚ್ಚು ಜನೌಷಧಿ ಕೇಂದ್ರ ಪ್ರಾರಂಭವಾಗಿ ಜನರಿಗೆ ಇದರ ಪ್ರಯೋಜನ ಪಡೆಯುವಂತಾಗಲಿ ಎಂದು ಅವರು ಹೇಳಿದರು.
ಶಾಸಕರಾದ ಅಪ್ಪಚ್ಚು ರಂಜನ್ ಅವರು ಮಾತನಾಡಿ ಜನೌಷಧಿ ಯೋಜನೆಯು ಆರೋಗ್ಯವಂತ ಭಾರತದ ಕೂಸಾಗಿದೆ. ಇದರ ಮೂಲಕ ಸುಸ್ಥಿರ ಭಾರತದ ನಿರ್ಮಾಣಕ್ಕೆ ಅಡಿಪಾಯ ಹಾಕಲಾಗುವುದು ಎಂದು ಅವರು ಹೇಳಿದರು.
ಬಡ ಜನತೆ ಆರೋಗ್ಯ ಸೇವೆಯಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಯೋಜನೆ ಜಾರಿಗೆ ತರಲಾಗಿದೆ ಇದರ ಸದುಪಯೋಗವನ್ನು ಪ್ರತಿಯೊಬ್ಬರೂ ಪಡೆಯಬೇಕು. ಎಲ್ಲರೂ ಆರೋಗ್ಯವಂತರಾಗಿರಬೇಕು ಎಂಬುದು ಪ್ರಧಾನಿಯವರ ಆಶಯವಾಗಿದೆ ಎಂದು ಅವರು ಹೇಳಿದರು.
ಮಕ್ಕಳ ತಜ್ಞರಾದ ಡಾ.ಬಿ.ಸಿ ನವೀನ್ ಅವರು ಮಾತನಾಡಿ ಜನ ಔಷಧಿ ದರ ಕಡಿಮೆ ಎಂದಾಕ್ಷಣ ಗುಣಮಟ್ಟದಲ್ಲಿ ಯಾವುದೇ ರೀತಿಯ ರಾಜಿಯಾಗುವುದಲ್ಲ. ಔಷಧ ಗುಣಮಟ್ಟದ ಎಲ್ಲ ಮಾನದಂಡಗಳು ಜನೌಷಧಿಗಳಿಗೆ ಅನ್ವಯವಾಗುತ್ತದೆ ಎಂದು ಹೇಳಿದರು.
ಸಾಮಾನ್ಯ ಔಷಧ ಅಂಗಡಿಗಳಲ್ಲಿ ಸಿಗುವ ಔಷಧಕ್ಕೂ ಜನೌಷಧಿ ಕೇಂದ್ರದಲ್ಲಿ ಸಿಗುವ ಔಷಧಗಳಿಗೂ ಯಾವುದೇ ವ್ಯತ್ಯಾಸವಿಲ್ಲ. ಸಾಮಾನ್ಯ ಔಷಧ ಅಂಗಡಿಗಳಲ್ಲಿ ಕಂಪನಿ ಬ್ರ್ಯಾಂಡ್‍ನಲ್ಲಿ ಔಷಧಗಳನ್ನು ಮಾರಾಟ ಮಾಡಲಾಗುತ್ತದೆ. ಅದೇ ಗುಣಮಟ್ಟದ ಔಷಧಗಳು ಜನೌಷಧಿ ಕೇಂದ್ರಗಳಲ್ಲಿ ಶೇ.10 ರಿಂದ 70 ರಷ್ಟು ಕಡಿಮೆ ದರಗಳಿಗೆ ಜನ ಸಾಮಾನ್ಯರಿಗೆ ನೀಡಲಾಗುತ್ತಿದೆ ಎಂದು ಅವರು ಹೇಳಿದರು.
‘ಸುಗಮ್’ ಆ್ಯಪ್ ಮೂಲಕ ಜನೌಷಧಿ ಕೇಂದ್ರಗಳಲ್ಲಿ ಲಭ್ಯವಿರುವ ಔಷಧ ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ. ಜನೌಷಧಿ ಅಂಗಡಿಗಳ ಮೂಲಕ ಮಹಿಳೆಯರ ಅನುಕೂಲಕ್ಕಾಗಿ ಕೇವಲ ಒಂದು ರೂಪಾಯಿಗೆ ‘ಸುವಿಧಾ’ ಹೆಸರಿನ ಸ್ಯಾನಿಟರಿ ಪ್ಯಾಡ್ ಮಾರಾಟ ಮಾಡಲಾಗುತ್ತಿದೆ(ಬ್ರಾಂಡೆಂಡ್ ಸ್ಯಾನಿಟರಿ ಪ್ಯಾಡ್‍ನ ಬೆಲೆ ರೂ.4, ಒಂದು ಪ್ಯಾಡ್‍ಗೆ 1 ರೂ.ನಂತೆ) ಎಂದು ಅವರು ಹೇಳಿದರು.

ಇದೇ ಸಂದರ್ಭದಲ್ಲಿ ಜನೌಷಧಿ ಪರಿಯೋಜನೆ ಉಪಲಬ್ಧತೆ ಮತ್ತು ಅದರ ಸಾದಕ ಬಾಧಕಗಳ ಬಗ್ಗೆ ಮೆಡಿಕಲ್ ಕಾಲೇಜಿನಲ್ಲಿ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಡಾ.ಮನೋಹರ್ ಜಿ. ಪಾಟ್ಕರ್ ಮತ್ತು ಮಕ್ಕಳ ತಜ್ಞರಾದ ಡಾ.ಬಿ.ಸಿ.ನವೀನ್ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮ ಪ್ರಾರಂಭಕ್ಕೂ ಮೊದಲು ನಗರದ ಚೌಡೇಶ್ವರಿ ದೇವಾಲಯದಿಂದ ಜಾಗೃತಿ ಜಾಥಾವು ಜನರಲ್ ತಿಮ್ಮಯ್ಯ ವೃತ್ತದ ಮೂಲಕ ನಗರಸಭೆ ತಲುಪಿತು.
ಕಾರ್ಯಕ್ರಮದಲ್ಲಿ ವೈದ್ಯರಾದ ಡಾ.ಮನೋಹರ್ ಜಿ.ಪಾಟ್ಕರ್, ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ವಿಶಾಲ್ ಕಾರ್ಯಪ್ಪ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಮೇಶ್ ಹೊಳ್ಳ, ಜನೌಷಧಿ ಅಂಗಡಿಗಳ ಮಾಲೀಕರಾದ ಕೆ.ಕೆ.ದಿನೇಶ್ ಕುಮಾರ್, ಕೆ.ಪಿ.ಹರೀಶ್, ಮಂಜುನಾಥ್, ಚಂಗಪ್ಪ, ಗಣಪತಿ, ಶಶಾಂಕ ಭೀಮಯ್ಯ, ಕೀರ್ತನ್, ಇತರರು ಇದ್ದರು. ಹರೀಶ್ ಸ್ವಾಗತಿಸಿದರು. ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯರಾದ ಧನಂಜಯ ಅಗೋಳಿಕಜೆ ಅವರು ನಿರೂಪಿಸಿದರು. ಕೆ.ಕೆ.ದಿನೇಶ್ ಕುಮಾರ್ ವಂದಿಸಿದರು.

error: Content is protected !!