ರಾಜ್ಯ-ಕೇಂದ್ರದ ಜನವಿರೋಧಿ ನೀತಿಗಳಿಗೆ ‘ಜನಧ್ವನಿ’ ಉತ್ತರ : ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್

March 6, 2021

ಮಡಿಕೇರಿ ಮಾ.6 : ಕೇಂದ್ರ ಮತ್ತು ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನಜಾಗೃತರಾಗಬೇಕಾಗಿದ್ದು, ‘ಜನಧ್ವನಿ’ ಯಿಂದಲೇ ತಕ್ಕ ಉತ್ತರ ನೀಡಬೇಕಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ತಿಳಿಸಿದ್ದಾರೆ.
ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಗರದ ಗಣಪತಿ ಆರ್ಕಿಡ್ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ‘ಜನಧ್ವನಿ’ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ರೈತರು ಬೆಳೆದಿರುವ ಬೆಳೆಗಳಿಗೆ ಬೆಂಬಲ ಬೆಲೆ ನೀಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಕೊಡಗಿನಲ್ಲಿ ಕಾಡಾನೆ, ಹುಲಿ ಸೇರಿದಂತೆ ವನ್ಯಜೀವಿಗಳ ದಾಳಿ ನಿರಂತರವಾಗಿದ್ದು, ಜೀವಹಾನಿಗಳು ಸಂಭವಿಸುತ್ತಿವೆ. ಆದರೂ ಸರ್ಕಾರ ಸಂತ್ರಸ್ತರಿಗೆ ಸಾಂತ್ವನ ಹೇಳಲು ಮುಂದಾಗಿಲ್ಲವೆಂದು ಟೀಕಿಸಿದರು.
ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಯಿಂದ ಮಾನವ ಮತ್ತು ಜಾನುವಾರುಗಳ ಜೀವಹಾನಿಯಾಗಿದೆ. ಪ್ರಾಕೃತಿಕ ವಿಕೋಪಗಳಿಂದ ಕೊಡಗಿನ ರೈತರು ಹಾಗೂ ಬೆಳೆಗಾರರು ಆರ್ಥಿಕ ಹಿನ್ನಡೆಯಿಂದ ಸಂಕಷ್ಟಕ್ಕೆ ಸಲುಕಿದ್ದಾರೆ. ಆದರೂ ಕರುಣೆ ಇಲ್ಲದ ಸರ್ಕಾರ ಜಾಣ ಮೌನಕ್ಕೆ ಶರಣಾಗಿದೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಕಿಸಾನ್ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಎಸ್.ಗೋಪಾಲ ಕೃಷ್ಣ ಕೇರಳ ರಾಜ್ಯ ಸರ್ಕಾರ ಕಾಫಿಗೆ ನೀಡುತ್ತಿರುವ ಬೆಂಬಲ ಬೆಲೆ ಮಾದರಿಯಲ್ಲೆ ಕೊಡಗಿನ ಕಾಫಿಗೂ ಬೆಂಬಲ ಬೆಲೆ ನೀಡುವಂತಾಗಬೇಕು ಎಂದು ಹೇಳಿದರು.
ಕೆಪಿಸಿಸಿ ಮಾಧ್ಯಮ ವಕ್ತಾರ ಆರ್.ಕೆ.ಅಬ್ದುಲ್ ಸಲಾಂ ಮಾತನಾಡಿ ಜನರ ಹಿತ ಕಾಪಾಡುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಸೈಯದ್ ಬಾವ, ಡಿ.ಸಿ.ಸಿ. ಸದಸ್ಯ ಎಂ.ಎಸ್.ಪೂವಯ್ಯ, ಸೇವಾದಳದ ಜಿಲ್ಲಾಧ್ಯಕ್ಷ ಸಿ.ಪಿ.ಕಾವೇರಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷÀ ಪಟ್ಟಡ ರಂಜಿ ಪೂಣಚ್ಚ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಕೆ.ರಫೀಕ್ ಮತ್ತಿತರರು ಸಭೆಯಲ್ಲಿ ಹಾಜರಿದ್ದರು.

error: Content is protected !!