ಕಿರುಗೂರು ಗ್ರಾಮದಲ್ಲಿ ಜಲ್ ಜೀವನ್ ಮಿಷನ್ ಯೋಜನೆ ಸಾಕಾರ

March 6, 2021

ಮಡಿಕೇರಿ ಮಾ.6 : ಪ್ರತಿಯೊಂದು ಕುಟುಂಬಕ್ಕೂ ಶುದ್ಧ ಕುಡಿಯುವ ನೀರು ಪೂರೈಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಜಲ್ ಜೀವನ್ ಮಿಷನ್ ಯೋಜನೆ ದಕ್ಷಿಣ ಕೊಡಗಿನ ಕಿರುಗೂರು ಗ್ರಾಮದಲ್ಲಿ ಸಾಕಾರಗೊಳ್ಳುತ್ತಿದೆ. ಕಿರುಗೂರು ಗ್ರಾಮದ ಮನೆಗಳಿಗೆ ನೀರನ್ನು ಒದಗಿಸಲು ಟ್ಯಾಂಕ್ ನಿರ್ಮಾಣಕ್ಕಾಗಿ ಇಂದು ಭೂಮಿಪೂಜೆ ನೆರವೇರಿಸಲಾಯಿತು.
ಬೀಟಿವಾಡ ನಿವಾಸಿಗಳಾದ ಚಾರಿಮಂಡ ಕುಶಾಲಪ್ಪ (ಬೋಜು) ಹಾಗೂ ಆಶಾ ದಂಪತಿಗಳು ತಮ್ಮ ಪುತ್ರಿ ನಿಷಿ ನಯನ ಅವರ ಜ್ಞಾಪಕಾರ್ಥವಾಗಿ ಟ್ಯಾಂಕ್ ನಿರ್ಮಿಸಲು ನೀಡಿರುವ ಜಾಗದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಯಿತು.
ಸುಮಾರು 99 ಲಕ್ಷ ರೂ. ವೆಚ್ಚದ ಯೋಜನೆಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ವಿರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಕೇಂದ್ರ ಸರ್ಕಾರ ಜನಪರವಾದ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು, ಇದನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಜಲ್ ಜೀವನ್ ಮಿಷನ್ ಯೋಜನೆ ಸೇರಿದಂತೆ ಕೇಂದ್ರದ ಜನಸ್ನೇಹಿ ಯೋಜನೆಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕೆಂದು ಹೇಳಿದರು.
ಕಿರುಗೂರು ಕ್ಷೇತ್ರದ ಗ್ರಾ.ಪಂ ಸದಸ್ಯರಾದ ಚೆಪ್ಪುಡಿರ ರಾಕೇಶ್ ದೇವಯ್ಯ ಮಾತನಾಡಿ ಗ್ರಾ.ಪಂ ಚುನಾವಣೆ ಸಂದರ್ಭ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸ್ಥಳೀಯ ನಿವಾಸಿಗಳು ಅಳಲು ತೋಡಿಕೊಂಡಿದ್ದರು. ಇದೀಗ ಜಲ್ ಜೀವನ್ ಮಿಷನ್ ಮೂಲಕ ನೀರಿನ ಕೊರತೆಯನ್ನು ನೀಗಿಸಲಾಗುತ್ತಿದೆ ಎಂದರು.
ಗ್ರಾ.ಪಂ ಅಧ್ಯಕ್ಷ ಪುತ್ತಮನೆ ಜೀವನ್, ಉಪಾಧ್ಯಕ್ಷೆ ಕೊಳ್ಳಿಮಾಡ ಲಲಿತ, ಸದಸ್ಯರುಗಳಾದ ಕೊಳ್ಳಿಮಾಡ ಕಟ್ಟಿ, ಪೆಮ್ಮಂಡ ಸುಮಿತ್ರ, ರಂಗಸ್ವಾಮಿ, ಕಾವೇರಮ್ಮ, ಪಿಡಿಒ ಕುಪ್ಪಂಡ ಗಯ, ಜಲ್ ಜೀವನ್ ಮಿಷನ್ ಕಿರುಗೂರು ವಿಭಾಗದ ಅಧ್ಯಕ್ಷೆ ಚಿರಿಯಪಂಡ ರೇಖಾಪೆಮ್ಮಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಲ್ಲಂಡ ಮಧು ಹಾಗೂ ಗ್ರಾಮಸ್ಥರು ಈ ಸಂದರ್ಭ ಹಾಜರಿದ್ದರು.
ಸುಮಾರು 25 ಸಾವಿರ ಲೀಟರ್ ಸಾಮಥ್ರ್ಯದ ಟ್ಯಾಂಕ್ ನ್ನು ನಿರ್ಮಿಸಲಾಗುತ್ತಿದೆ. ಕಿರುಗೂರು ವ್ಯಾಪ್ತಿಯಲ್ಲಿ ಜಲ್ ಜೀವನ್ ಮಿಷನ್ ಯೋಜನೆಗಾಗಿ 99 ಲಕ್ಷ ರೂ. ಖರ್ಚು ಮಾಡಲಾಗುತ್ತಿದೆ. ಪಂಜಿರಿಯಲ್ಲಿ ಕೊಳವೆಬಾವಿ ನಿರ್ಮಿಸಲು ಚಿರಿಯಪಂಡ ಎಂ.ಹ್ಯಾರಿ ತಿಮ್ಮಯ್ಯ ಅವರು ಸ್ಥಳದಾನ ಮಾಡಿದ್ದಾರೆ.

error: Content is protected !!