ಕುಶಾಲನಗರ ಪ.ಪಂ ಬಜೆಟ್‍ನಲ್ಲಿ ಕಾವೇರಿ ಸಂರಕ್ಷಣೆಗೆ ಮಹತ್ವ ನೀಡಲು ಒತ್ತಾಯ

March 6, 2021

ಮಡಿಕೇರಿ ಮಾ.6 : ಕುಶಾಲನಗರ ಪಟ್ಟಣ ಪಂಚಾಯ್ತಿ 2021-22 ಬಜೆಟ್ ಮಂಡನೆಯಲ್ಲಿ ಜೀವನದಿ ಕಾವೇರಿ ಸಂರಕ್ಷಣೆಗೆ ಅನುದಾನ ಮೀಸಲಿರಿಸಿ ಅಭಿವೃದ್ಧಿಪಡಿಸುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಪ್ರಮುಖರು ಕುಶಾಲನಗರ ಪಟ್ಟಣ ಪಂಚಾಯ್ತಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದರು.
ಈ ಬಾರಿಯ ಬಜೆಟ್‍ನಲ್ಲಿ ತಮ್ಮ ಆಡಳಿತ ಮಂಡಳಿ ಮೂಲಕ ಯೋಜನೆಗಳನ್ನು ಹಮ್ಮಿಕೊಳ್ಳುವ ಮೂಲಕ ಕಾವೇರಿ ನದಿ ಹಾಗೂ ಕೆರೆಗಳ ಸಂರಕ್ಷಣೆಗೆ ಅನುದಾನ ಮೀಸಲಿರಿಸಬೇಕು ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.
ಕುಶಾಲನಗರ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಕಳೆದ 11 ವರ್ಷಗಳಿಂದ ಕಾವೇರಿ ಮಹಾ ಆರತಿ ಬೆಳಗುವ ಹಾಗೂ ಕುಶಾಲನಗರ ಪಟ್ಟಣದ ಎಲ್ಲಾ ಸಮುದಾಯದ ಜನರಿಗೆ ವಿಶೇಷ ದಿನಗಳಲ್ಲಿ ಗಂಗಾ ಪೂಜೆ ನೆರವೇರಿಸುವ ನಿಟ್ಟಿನಲ್ಲಿ ಒಂದು ಆರತಿ ಕಟ್ಟೆ ನಿರ್ಮಾಣ ಮಾಡಲು ಈಗಾಗಲೆ ಸುತ್ತೂರು ಶ್ರೀಗಳು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಅದರ ಬಾಪ್ತು ಪಂಚಾಯ್ತಿ ಮೂಲಕ ಒಂದು ಆರತಿ ಕಟ್ಟೆ ನಿರ್ಮಿಸಲು ಅಂದಾಜು 15 ಲಕ್ಷ ರೂಗಳ ಅನುದಾನ ಕಲ್ಪಿಸುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.
ಕುಶಾಲನಗರದಿಂದ ಮೈಸೂರು ತೆರಳುವ ಮಾರ್ಗದಲ್ಲಿ ಅರಣ್ಯ ತಪಾಸಣಾ ಗೇಟ್ ಬಳಿ ಸೇತುವೆ ಮೇಲಿಂದ ವಾಹನಗಳಲ್ಲಿ ತ್ಯಾಜ್ಯಗಳನ್ನು ತಂದು ನದಿಗೆ ಸುರಿದು ನೀರನ್ನು ಮಲಿನಗೊಳಿಸುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ. ಇದನ್ನು ಶಾಶ್ವತವಾಗಿ ತಡೆಗಟ್ಟಲು ಸೇತುವೆಯ ಎರಡೂ ಭಾಗಗಳಲ್ಲಿ ಮೆಶ್ ತಡೆಗೋಡೆ ನಿರ್ಮಿಸುವ ಮೂಲಕ ಕಡಿವಾಣ ಹಾಕಬೇಕು . ಈ ಸಂಬಂಧ ಬಜೆಟ್‍ನಲ್ಲಿ ಅಂದಾಜು 10 ಲಕ್ಷ ರೂಗಳ ಅನುದಾನ ಮೀಸಲಿರಿಸಲು ಮನವಿ ಮಾಡಲಾಗಿದೆ.
ಕುಶಾಲನಗರ ಪಟ್ಟಣದಿಂದ ಹೊರಸೂಸುವ ಬಹುತೇಕ ತ್ಯಾಜ್ಯಗಳು ಚರಂಡಿ ಮೂಲಕ ನೇರವಾಗಿ ನದಿಗೆ ಸೇರುತ್ತಿದೆ. ಅದನ್ನು ತಡೆಗಟ್ಟಲು ಪಟ್ಟಣ ಪಂಚಾಯ್ತಿ ಮೂಲಕ ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿ ನಿರ್ಮಿಸಿರುವ ಇಂಗುಗುಂಡಿ ಯೋಜನೆಯಂತೆ ಪಟ್ಟಣದ ಕನ್ನಡ ಭಾರತಿ ಕಾಲೇಜು ಬಳಿ, ದಂಡಿನಪೇಟೆ, ಬೈಚನಹಳ್ಳಿ, ಮಾರುಕಟ್ಟೆ ಬಳಿ ಇಂಗುಗುಂಡಿಗಳನ್ನು ನಿರ್ಮಿಸಲು ಅನುದಾನ ಕಲ್ಪಿಸಲು ಮನವಿ ಮಾಡಿಕೊಳ್ಳಲಾಗಿದೆ.
ಮನವಿ ಪತ್ರ ಸ್ವೀಕರಿಸಿದ ಪಪಂ ಅಧ್ಯಕ್ಷರಾದ ಜೈವರ್ಧನ್ ಪ್ರತಿಕ್ರಿಯಿಸಿ, ಸರ್ವ ಸದಸ್ಯರ ಸಲಹೆ ಪಡೆದು ಕ್ರಮಕೈಗೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭ ನದಿ ಸ್ವಚ್ಚತಾ ಆಂದೋಲನದ ಸಂಚಾಲಕ ಎಂ.ಎನ್.ಚಂದ್ರಮೋಹನ್, ಉಪಾಧ್ಯಕ್ಷರಾದ ಡಿ.ಆರ್.ಸೋಮಶೇಖರ್, ಮಂಡೇಪಂಡ ಬೋಸ್ ಮೊಣ್ಣಪ್ಪ ಹಾಜರಿದ್ದರು.

error: Content is protected !!