ಸಣ್ಣ ಕಥೆ : ***** ಕೋಟಿ *****

06/03/2021

ಕೋಟಿ ನಮ್ಮ ಮನೆಗೆ ಬರೋದು ಇಂದು ನಿನ್ನೆಯಲ್ಲ. ನನ್ನ ಅಜ್ಜನ ಕಾಲದಿಂದಲೂ ಕೋಟಿಯ ಅಪ್ಪ ಕೆಲಸಕ್ಕೆ ಬರ್ತಿದ್ದದ್ದು ಅವನ ಜತೆಗೆ ಕೋಟಿಯೂ ಮಧ್ಯಾಹ್ನದ ಸಮಯಕ್ಕೆ ಅಪ್ಪನನ್ನು ನೋಡಲು ಬರುತ್ತಿದ್ದುದು ನೆಪ ಅಷ್ಟೆ. ನಮ್ಮ ಮನೆಯ ಅಜ್ಜಿ ಹಾಕುವ ಒಗ್ಗರಣೆಯ ಪರಿಮಳ ಅವನನ್ನು ನಮ್ಮ ಮನೆಗೆ ಸೆಳೆಯುತ್ತಿತ್ತು.

“ಏನೋ ಯಾಕೆ ಬಂದೆ?” ಅಜ್ಜ‌ ಮಣ್ಣಿನ ಚಿಟ್ಟೆಯಲ್ಲಿ ಕೌಪೀನದ ಗಂಟನ್ನು ಗಟ್ಟಿ ಮಾಡುತ್ತಾ ಕೇಳಿದರೆಂದರೆ ಕೋಟಿಯ ಹೊಟ್ಟೆಯ ಹಸಿವು ಆ ಗಡುಸು ದನಿಗೂ ಹೆದರದೆ ಅಪ್ಪನ‌ ನೆನಪಾಯಿತು ಅಂತ ಕೈ ಕಟ್ಟಿ ನಿಲ್ಲುತ್ತಿದ್ದ. “ಹೂ ಹೋಗು ಹಿಂದೆ.. ಅಕ್ಕಮ್ಮ ಊಟ ಕೊಡ್ತಾಳೆ ಊಟ ಮಾಡಿ ಅಪ್ಪನನ್ನು ನೋಡಿ ಹೋಗು”.

ಅಜ್ಜಿ ಕೊಡುವ ಸೌಟು ತುಂಬ ಊಟ ಅದರ ಮೇಲೆ ಎರಡು ಸೌಟು ಸಾಂಭಾರ್ ಗ್ಲಾಸಿನಲ್ಲಿ ದಪ್ಪ ಮಜ್ಜಿಗೆ ಬಾಳೆಯ ಕೊಡಿಗೆ ‌ನೆಚ್ಚಲು ಮಿಡಿ ಉಪ್ಪಿನಕಾಯಿ ಅವನ ಬಾಯಲ್ಲಿ ಊಟ ಆರಂಭಿಸುವ ಮೊದಲೇ ನೀರೂರಿ ಅದನ್ನು ನುಂಗುವುದು ನೋಡುವಾಗ ಅಜ್ಜಿ ಊಟ ಮಾಡಪ್ಪ ಆರಾಮದಲ್ಲಿ. ಏನಾದ್ರು ಬೇಕಾದ್ರೆ ಕೇಳಾಯ್ತಾ ಅಂತ ಕರುಣೆಯ ಕಣ್ಣಲ್ಲಿ ನೋಡುತ್ತಿದ್ದರು.

ಊಟದ ಕೊನೆಯಲ್ಲಿ ಹೊಟ್ಟೆ ತುಂಬಿದ ಸಂತೃಪ್ತಿ ಆ ಕಂಗಳಲ್ಲಿ ಕಾಣುತ್ತಿದ್ದುದು ಅಜ್ಜಿಗೂ ಅವರ ಅಡುಗೆ ಹೃದಯದಿಂದ ಮೆಚ್ಚಿ ಊಟ ಮಾಡುವುದು ಕಂಡು ಅವರ ಹೊಟ್ಟೆ ತುಂಬಿದಷ್ಟೆ ಖುಷಿ ಆಗುತ್ತಿತ್ತು. ಕೋಟಿಯ ಅಪ್ಪ ತೋಟದಿಂದ ಬಂದವನು ಮಗನನ್ನು‌ ನೋಡಿ ” ಯಾಕೋ ಬಂದೆ. ನಿನಗೆ ದೊಡ್ಡಿಯಲ್ಲಿ ಜಾಗ ಇರಲಿಲ್ವ?” ಕಣ್ಣು ಕೆಂಪು ಮಾಡಿದಾಗ ಆ ಕೆಂಪು ಬಣ್ಣಕ್ಕೆ ನೀರೆರದವರು ಅಜ್ಜಿ ” ಅವನು ಮಗು ತಾನೇ? ಊಟ ಮಾಡಲಿ” ಅಂತ ಮತ್ತಷ್ಟು‌ ಬಡಿಸಿದ್ದರು.

ಅಲ್ಲಿಂದ ಆರಂಭವಾದ ಕೋಟಿಯ ಪಯಣ ವಯಸ್ಸು 70ಆದರೂ ಗಟ್ಟಿಯಾಗಿಯೇ ನಮ್ಮ ಮನೆಯ ಕಾರ್ಯಸ್ಥನಂತೆ ದನದ ಕೊಟ್ಟಿಗೆಯಿಂದ ಹಿಡಿದು , ತೋಟದ ಮೂಲೆಯವರೆಗೂ ಅವನದೇ ಕೈ. ಅಪ್ಪನಿಗೆ ನಿರಾತಂಕ. ಅವನಿದ್ರೆ ಅಪ್ಪ ಒಂದು ದಿನವೂ ಚಿ‌ಂತೆ ಪಟ್ಟವರಲ್ಲ. ಅವನ ಮಕ್ಕಳಿಂದ ಹಿಡಿದು ಮೊಮ್ಮಕ್ಕಳ ಶಾಲೆಯ ಫೀಸ್ ಅವನು ಕೇಳುವ ಮೊದಲೇ ಅಪ್ಪ ತೆಗೆದು ಕೊಟ್ಟವರು.

ಸಣ್ಣ ಮಟ್ಟದ ಕುಡಿತವೂ ಅವನಿಗೆ ಇತ್ತು. ಅದು ಹಾಕಿದರೆ ಅವನ ಕೆಲಸದ ದಣಿವು‌ ಆರುವುದು. ಇತ್ತೀಚೆಗೆ ಹೆಂಡತಿ ಸತ್ತ ನಂತರ ಸ್ವಲ್ಪ ಹೆಚ್ಚೇ ಹಾಕುವುದು ಅವನ ವಿರಹವೂ ಅವನ ದುಃಖವೂ ಅದರಲ್ಲಿ ಕರಗಿ ಹೋಗುತ್ತಿತ್ತು. ಮನೆಯವರಿಗೂ ಅದೇ ಬೇಕಿತ್ತು. ಅವನು‌ ಕುಡಿದರೆ ಶಾಂತ ಪ್ರಕೃತಿಯವನು…ಕುಡಿಯದೇ ಬಂದರೆ ಮನೆಯವರಿಗೆ ಏನಾದರೂ ಬೈಗುಳ ಕೊಟ್ಟೆ ಕೊಡುವವನು.

” ಕೋಟಿ, ಇವತ್ತು ಹಣ ಬೇಡ್ವೇನು?” ಅಪ್ಪ ಮಂಗಳವಾರ ಅಂತ ನೆನಪು ಮಾಡಿ ಐದುನೂರು ರೂಪಾಯಿ ಕೊಟ್ಟರು‌. ಇತ್ತೀಚೆಗೆ ಸಣ್ಣ ಮರೆವು ಸಹ ಉಂಟಾಗತೊಡಗಿತ್ತು ಅಂತ ಇದರಿಂದ ಹೇಳಬೇಕಾಗಿಲ್ಲ. ತೋಟಕ್ಕೆ ಹೋದರೆ ಕತ್ತಿಗಳನ್ನು ಮರೆತು ಬರೋದು ಹುಡುಕೋದು ಕಂಡಾಗ ಅಪ್ಪನೇ ಸಹಾಯ ಮಾಡುತ್ತಿದ್ದರು. ಅವ‌ನ ಮರೆವು ಕಂಡಾಗ ಅಪ್ಪನಿಗೆ ಸ್ವಲ್ಪ ಆತಂಕ ಕಾಣಿಸಿದ್ದು ನಿಜ. ಇನ್ನು ನಿವೃತ್ತಿಗಾಯ್ತೇನೊ ಅಂತ ನಕ್ಕಾಗ ನಿವೃತ್ತಿ ನನಗೆ ಸತ್ತಾಗಲೇ ಅಂತ ಸಣ್ಣ ಸ್ವರದಲ್ಲಿ ಅನ್ನುತ್ತಿದ್ದ.

ಐದನೂರರ ನೋಟನ್ನು ಪಂಚೆಯ ಗಂಟಿನಲ್ಲಿ ಸುತ್ತಿ ಪಂಚೆಯನ್ನು ಗಟ್ಟಿಮಾಡಿ ಮನೆಯ ಅಂಗಳದ ಮೆಟ್ಟಿಲಿಳಿದು ಹೋಗುವಾಗ‌ ನನ್ನನ್ನು ಕಂಡು ” ನಮ್ಮ ಅಕ್ಕ ಈಗ ಟೀಚರಲ್ವ?” ನಾನು ಟೀಚರ್ ಆಗಿರೋದು ಮಾತ್ರ ನೆನಪಿತ್ತು

” ಹೌದು. ಇವತ್ತು ನಂಗೆ ಸಂಬಳ ಸಿಕ್ಕಿದೆ” ಅಂದೆ ಖುಷಿಯಾಗಿ. “ನನಗೂ ಸಿಕ್ಕಿದೆ” ಪಂಚೆಯ ಗಂಟನ್ನು ತೋರಿಸಿ ನಕ್ಕನು. ಅವನ ಬಾಯಲ್ಲಿ ಹಲ್ಲುಗಳು ಹಲವು ಉದುರಿ ಕೆಲವು ವೀಳ್ಯಕ್ಕೆ ಬೆದರಿ ಚೂಪು ಚೂಪಾಗಿದ್ದದ್ದು ರಾತ್ರೆಯ ವೇಳೆ ಕಂಡರೆ ಯಾರಾದರೂ ಹೆದರಬಹುದು. ಬಾಚದ ಕೂದಲು, ಸಿಕ್ಕುಗಟ್ಟಿ ಉಂಡೆ ಉಂಡೆ ಆಗಿರುವುದು, ಹೆಂಡತಿ ಸತ್ತ ನಂತರ ಕೋಟಿಯು ವ್ಯಕ್ತಿಯು ಹಾಗಿದ್ದರೂ ಮನಸ್ಸು ಮಾತ್ರ ಅಪರಂಜಿ.

ಹಾಗೆ ಹೋದವನು ಒಂದರ್ಧ ಘಂಟೆಯ ನಂತರ ತಿರುಗಿ‌ ಬಂದನು‌. ಬಂದವನು ಏನೋ ಕಳೆದು ಹೋದಂತೆ ಹುಡುಕತೊಡಗಿದನು. ” ಏನಾಯ್ತು..ಏನು‌ಹುಡುಕುತ್ತಾ ಇದ್ದೀಯ?” ಅಪ್ಪ ದನಗಳಿಗೆ ಹುಲ್ಲು ಹಾಕಿ ಕೈ ತೊಳೆದು ಬಂದರು.

” ನಾನು ಹಣತಗೊಂಡಿದ್ದೆ ಅಲ್ವ. ನೆನಪಿಲ್ಲ. ತಗೊಂಡಿದ್ದು ಎಲ್ಲೋ ಬಿದ್ದೋಯ್ತು ಅನ್ನಿಸ್ತಿದೆ. ಮತ್ತೊಂದು ಬದಿಗೆ ತಿರುಗಿ ನಿಂತು ಪಂಚೆ ಬಿಚ್ಚಿ ಹಣ ಇದೆಯಾ ಅಂತ ನೋಡಿದನು. ಇರಲಿಲ್ಲ.

” ಎಲ್ಲೋ ಹಾಕಿರುವನು. ನೋಡೋಣ.. ಶಾಂಭವಿ…” ಅಂತ ನನ್ನನ್ನು ಕೂಗಿದರು. ಹೂಗಿಡಗಳಿಗೆ ನೀರು ಹಾಕುತ್ತಿದ್ದ ನಾನು ಪೈಪ್ ನ್ನು ಗಿಡಕ್ಕೆ ಇರಿಸಿ ಚೂಡಿದಾರಕ್ಕೆ ಕೈ ಒರೆಸಿ ಓಡಿ ಬಂದೆ. ” ನಿನ್ನ ಮೊದಲ ಸಂಬಳದಿಂದ ಸ್ವಲ್ಪ ದೇವರ ಹುಂಡಿಗೆ ಹಾಕಬೇಕು ಅಂತ ಇದ್ದಿ ಅಲ್ವ. ನಮ್ಮ ಪಾಲಿಗೆ ಇವನು ದೇವರಿಗಿಂತ ಕಡಿಮೆ ಅಲ್ಲ. ಹಣವನ್ನು ಎಲ್ಲೋ ಮರೆತಿರಬೇಕು ಅವಳಿಗೆ ಕೊಡಮ್ಮ”

ಅಪ್ಪ ಹೇಳಿದ್ದರಲ್ಲಿ ನನಗೆ ಅತಿಶಯ ಅನ್ನಿಸದೆ ಅಪ್ಪನ ಬಳಿ ಕೊಟ್ಟ‌ ಸಂಬಳದಿಂದ. ಐದುನೂರು ತೆಗೆದು ಕೋಟಿಯ ಕೈಗಿತ್ತೆ. “ನೋಡಿಲ್ಲಿ ಜಗಲಿಯಲ್ಲಿ ಮರೆತು ಹೋಗಿದ್ದಿ. ಗಟ್ಟಿಯಾಗಿ ಹಿಡಿದುಕೊ “

” ಹೌದಾ ” ಅಂತ ಅವನ ಕಣ್ಣರಳಿತು.ಖುಷಿಯಿಂದ ಕೈಯೊಳಗೆ ಭದ್ರವಾಗಿರಿಸಿ ಹೊರಟ.

ಎರಡು ದಿನ ಕಳೆದಾಗ ಕೋಟಿಯ ಮಗ ನಂಜಪ್ಪ ನಮ್ಮ ಮನೆ ಬಾಗಿಲಿಗೆ ಬಂದಿದ್ದ. ಅವನು ಮಹಾಕೆಲಸ ಕಳ್ಳ. ನಮ್ಮ ಮನೆಬಾಗಿಲಿಗೆ ಕೋಟಿಯ ಮನೆಯ ಯಾರು ಬಂದರೂ ಕೆಲಸ ಇಲ್ಲ ಅನ್ನುವುದಿಲ್ಲ. ಒಂದೆರಡು ಬಾರಿ ಬಂದವನು ಅರ್ಧರ್ಧ ಕೆಲಸ ಮಾಡಿ ಹೋದವನು ಬರಲೇ ಇಲ್ಲ. ಹೋಗುವಾಗ ಹಣ ಹಿಡಿದು ಹೋಗುತ್ತಿದ್ದ. ಅದನ್ನು ತನ್ನ ಸಂಬಳದಿಂದ ಕಳೆಯುವಂತೆ ಕೋಟಿ ಹೇಳಿದರೂ ಅಪ್ಪ ಹಾಗೆ ಮಾಡಲಿಲ್ಲ.

” ಏನೋ… ಯಾಕೆ ಬಂದೆ?” ಅಪ್ಪನ ಗಡುಸು ದನಿಗೆ ” ನನಗೆ ಕೆಲಸ ಇಲ್ಲ ಈಗ. ಅಪ್ಪನೂ ಹುಶಾರಿಲ್ಲ ಅಂತ ಇಲ್ಲಿಗೆ ಹೊರಟಿಲ್ಲ.ಅದಕ್ಕೆ ನಾನೇ ಕೆಲಸಕ್ಕೆ ಬಂದೆ…” ವಿನಯದಿಂದ ನುಡಿದ

” ಕೆಲಸ ಕೇಳೋದೆಲ್ಲ ಸರಿ. ಮೊದಲಿನ ಹಾಗೆ ಮಾಡ್ತೀಯಾ? “
ಗಡುಸು ದನಿ ಮತ್ತಷ್ಟು ಗಟ್ಟಿಯಾಗಿತ್ತು

” ಇಲ್ಲ ಧಣಿ. ನಾನೀಗ ತುಂಬಾ ಬದಲಾಗಿದ್ದೇನೆ” ಅಂದವನ ಮಾತು‌ ನಂಬಿ , ಹೋಗು ಹಟ್ಟಿಯ ಸೆಗಣಿ ತೆಗಿ‌ ಆಮೇಲೆ ತೋಟಕ್ಕೆ ಹೋಗೋಣ ಅಂತ ಕಳುಹಿಸಿದರು.

ಕೆಲಸವೇನೋ ಸರಿಯಾಗಿ ಮಾಡಿದ್ದ ಕಾರಣ ಅಪ್ಪನಿಗೆ ನಂಬಿಕೆ ಬಂದಿತ್ತು. ಸಂಜೆಯ ಸಮಯಕ್ಕೆ ಕೆಲಸ ಮುಗಿದಾಗ ಹಣಕ್ಕಾಗಿ ಕೈ ಚಾಚಿದನು‌. ಅಪ್ಪ ಐದುನೂರರ ನೋಟು ತೆಗೆದು ಕೊಟ್ಟರು. ವಿನಯದಿಂದ ಕೈ ಮುಗಿದು ಮೆಟ್ಟಿಲಿಳಿದು ಹೋದನು. ನಾನು ಶಾಲೆಯಿಂದ ಬಂದು ಗಿಡಗಳಿಗೆ ನೀರು ಹಾಕುತ್ತಾ ಇದ್ದೆ. ನನ್ನ ಬಳಿ ಬಂದು ನನ್ನ ಮೊದಲ ಸಂಬಳ ಅಂತ ಖುಷಿಯಿಂದ ಹೇಳಿಕೊಂಡು ಹೋದನು.

ಅರ್ಧ ಘಂಟೆಯಲ್ಲಿ ಮೆಟ್ಟಿಲೇರುತ್ತಾ ಏನೋ ಹುಡುಕುತ್ತಾ ಬಂದನು. ” ಏನೋ ಏನು ಹುಡುಕುತ್ತಿರುವೆ?” ಅಪ್ಪ ಒಳಗಿನಿಂದ ಕೇಳುತ್ತಾ ಬಂದರು.

” ನನ್ನ ಹಣ ಇಲ್ಲಿ ಬಾಕಿ ಆಯ್ತಾ? ಎಲ್ಲೋ ಬಿದ್ದೋಯ್ತು. ” ಹುಡುಕುತ್ತಲೇ ಇದ್ದನು. ಅವನ ಪಂಚೆಯ ತುದಿಯಲ್ಲಿ ಐದುನೂರು ಕಟ್ಟಿದ್ದು ಗುರುತು ಕಾಣುತ್ತಿದ್ದರೂ ಅಪ್ಪ ಅದನ್ನು ತೋರಗೊಡದೆ ಒಳಗಿನಿಂದ ಮತ್ತೊಂದು ಐದುನೂರು ನೋಟು ತಂದು ಕೊಟ್ರು.

” ಅಪ್ಪಾ…” ನಾನು ಅವನಲ್ಲಿದ್ದ ಹಣವನ್ನು ನೋಡಿ ಸುಳ್ಳು ಹೇಳ್ತಿದ್ದಾನೆ ಅಂತ ಸನ್ನೆ ಮಾಡಿ ಹೇಳಿದೆ. ಸುಮ್ನಿರು ಅಂತ ಕಣ್ಸನ್ನೆ ಮಾಡಿದಾಗ ನಾನು ಸುಮ್ಮನಾದೆ.

ನಂಜಪ್ಪ ಹೋದಾಗ ಅಪ್ಪ ” ಅರ್ಜೆಂಟಿಗೆ ನಮ್ಮ ಕಷ್ಟಕ್ಕೆ ಇವನು ಸಿಗುವವನು. ಇರಲಿ ಈ ಐದುನೂರು. ಹೆಚ್ಚೆಂದರೆ ಇವತ್ತು ಹೆಂಡತಿ ಮಕ್ಕಳಿಗೆ ತಿಂಡಿ ತಿನಿಸು ತರುವನೇ ಹೊರತು ಕುಡಿದು ಹಾಳು ಮಾಡುವವನಲ್ಲ.” ಅಪ್ಪ ಅಂದದ್ದು‌ ಹೌದೆನಿಸಿತು. ಅರ್ಧಘಂಟೆಯಲ್ಲಿ ಕೋಟಿ ಬಂದವನು” ಧಣಿ ಮೊನ್ನೆ ನಾ‌ನು ತಗೊಂಡು ಹೋದೆ ಅಲ್ವ ಹಣ. ಅದು ಕಳೆದು ಹೋದದ್ದು.‌ದಾರಿಯಲ್ಲಿ‌ಹೋಗುವಾಗ ಪೊದೆಯ ಬಳಿ ನನಗೇ ಸಿಕ್ಕಿತು. ದೇವರ ದಯ ನೀವು ಕೊಟ್ಟ ಹಣ ನೆನಪಿತ್ತು” ಐದುನೂರರ ನೋಟನ್ನು ಅಪ್ಪನಿಗೆ ಕೊಟ್ಟಾಗ ಅಪ್ಪ ನಿರಾಕರಿಸಿದರು.

” ಅದು ಮಗಳ ಮೊದಲ ಸಂಬಳದಿಂದ ನಿನಗೇ ಅಂತಲೇ ಕೊಟ್ಟಿದ್ದು ಇಟ್ಟುಕೊ. ನಾಳೆಯಿಂದ ಕೆಲಸಕ್ಕೆ ಬರ್ತಿ ತಾನೇ?”

” ಬರ್ತೇನೆ ಧಣಿ. ಇವತ್ತು‌ ಬರಲಾಗದೆ ತಡೆಯಲಿಲ್ಲ.ಅದಕ್ಕೆ ಈಗ ಬಂದೆ ನೋಡಿ. ಮಗ ಬಂದಿದ್ದ ಅಲ್ವ. ಅವನೇ ನನ್ನ ಕೆಲಸಕ್ಕೆ ಹೋಗಬೇಡ ಅಂತ ಕಳಿಸಿಲ್ಲ.ನನಗೆ ಇಲ್ಲಿಗೆ ಬಾರದೆ ಸಮಯವೇ ಹೋಗಲ್ಲ” ಗಟ್ಟಿಯಾಗಿ ಮುಷ್ಠಿಯೊಳಗೆ ಐದುನೂರರ ನೋಟನ್ನು ಹಿಡಿದು‌ ಮೆಟ್ಟಿಲಿಳಿದು ಹೊರಟನು.

” ಇದು ನನ್ನ ಅಪ್ಪನ ಕಾಲದಿಂದಲೇ ನಮ್ಮ ಮನೆಯ ಅನ್ನ ಉಂಡ ದೇಹ, ಮನಸ್ಸು; ಅದರ ಋಣ ನೋಡು ತನ್ನ ಮನೆ ಅಂತಲೇ ಸತ್ಯ ನುಡಿಯುವುದು. ಆ ಅನ್ನದ ಮಹತ್ವ ಆ ದೇಹಕ್ಕಿದೆ.‌ಆದರೆ‌ ನಂಜಪ್ಪನಿಗೆ ಅದು ಗೊತ್ತಿಲ್ಲ. ಇದು‌ಹಳೆಯ ತಲೆಗೆ ಹಾಗು ಇಂದಿನ ತಲೆಗೆ ಇರುವ ವ್ಯತ್ಯಾಸ”

ಅಪ್ಪನ ಮಾತು ನಿಜವೆನಿಸಿತು.

ನಾನು ಕೋಟಿಯ ನಡೆದ ದಾರಿಯನ್ನೇ ನೋಡುತ್ತಿದ್ದೆ. ನೋಡು ನೋಡುತ್ತಾ ಕೋಟಿ ನಿಧಾನವಾಗಿ ತೋಟದ ಮಧ್ಯದಲ್ಲಿ ಅಡಿಕೆ ಗಿಡಗಳ ನಡುವೆ ಮರೆಯಾದ (ರಜನಿ ಭಟ್)